ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರೈತರ ಹೋರಾಟ ಬೆಂಬಲಿಸಿ ಪಾದಯಾತ್ರೆ

ನ. 16ರಂದು ದೆಹಲಿ ತಲುಪಲಿರುವ ಹೋರಾಟಗಾರ ನಾಗರಾಜ
Last Updated 12 ಸೆಪ್ಟೆಂಬರ್ 2021, 3:56 IST
ಅಕ್ಷರ ಗಾತ್ರ

ಕಲಬುರ್ಗಿ: ‘ದೇಶದಲ್ಲಿ ರೈತರ ಶೋಷಣೆ ನಡೆಯುತ್ತಿದೆ. ಇದು ನಿಲ್ಲಬೇಕು. ರೈತರು ಬೆಳೆದ ಬೆಳೆಗೆ ನ್ಯಾಯಯುತವಾದ ಬೆಲೆ ಸಿಗಬೇಕು’ ಎಂದು ಸಾಫ್ಟ್‌ವೇರ್‌ ಉದ್ಯೊಗಿ, ಬಾಗಲಕೋಟೆ ಜಿಲ್ಲೆಯ ನಾಗರಾಜ ಕಲ್ಗುಟ್ಕರ್ ತಿಳಿಸಿದರು.

ನಗರದಲ್ಲಿ ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಮೂರು ಕೃಷಿ ತಿದ್ದುಪಡಿ ಕಾಯ್ದೆಗಳನ್ನು ವಿರೋಧಿಸಿ ದೆಹಲಿಯಲ್ಲಿ
ರೈತರು ನಡೆಸುತ್ತಿರುವ ಹೋರಾಟ ಬೆಂಬಲಿಸಿ ಪಾದಯಾತ್ರೆ ಕೈಗೊಂಡಿದ್ದೇನೆ’ ಎಂದರು.

‘ಚಾಮರಾಜನಗರದ ಮಹಾದೇಶ್ವರ ಬೆಟ್ಟದಿದ ದೆಹಲಿ ಚಲೋ ಪಾದಯಾತ್ರೆ ಫೆಬ್ರುವರಿ 11ರಿಂದ ಆರಂಭಿಸಿದ್ದೇನೆ. ಲಾಕ್‌ಡೌನ್‌ ಕಾರಣ ಮೂರು ತಿಂಗಳು ಪಾದಯಾತ್ರೆ ಸ್ಥಗಿತಗೊಳಿಸಲಾಗಿತ್ತು. ಜುಲೈನಿಂದ ಮತ್ತೆ ಆರಂಭಿಸಿದೆ’ ಎಂದರು.

‘ಈವರೆಗೆ 125 ದಿನಗಳಲ್ಲಿ 3,200 ಕಿ.ಮೀ. ಕ್ರಮಿಸಿದ್ದೇನೆ. ದೆಹಲಿ ಗಡಿಯಲ್ಲಿ ರೈತರು ಪ್ರತಿಭಟನೆ ಆರಂಭಿಸಿ ನವೆಂಬರ್ 16ರಂದು ಒಂದು ವರ್ಷ ಪೂರೈಸಲಿದೆ. ಅಂದೇ ದೆಹಲಿ ತಲುಪಲಿದ್ದೇನೆ’ ಎಂದರು.

‘ಪ್ರಧಾನಿ ನರೇಂದ್ರ ಮೋದಿ ಅವರಿಗೆ ರೈತರ ಕಷ್ಟಗಳು ಅರ್ಥವಾಗುತ್ತಿಲ್ಲ. ಅರ್ಥವಾಗಿದ್ದರೆ ಹೋರಾಟ ನಡೆಸುತ್ತಿರುವ ರೈತರೊಂದಿಗೆ ಮಾತುಕತೆ ನಡೆಸುತ್ತಿದ್ದರು’ ಎಂದು ಹೇಳಿದರು.

ಬಡತನ, ರೈತರ ಸಮಸ್ಯೆಗಳು ನನ್ನ ಹೋರಾಟಕ್ಕೆ ಪ್ರೇರಣೆ. ಸಾಲ ತೀರಿಸಲಾಗದೆ ಜನರು ವಲಸೆ ಹೋಗುತ್ತಿದ್ದಾರೆ. ಗ್ರಾಮೀಣ ಭಾಗದ ಜನರು ಸಾಕಷ್ಟು ಯಾತನೆ ಅನುಸರಿಸುತ್ತಿದ್ದಾರೆ. ಬೆಳೆ ಹಾನಿ ಬಗ್ಗೆ ವೈಜ್ಞಾನಿಕ ಅಧ್ಯಯನ ನಡೆಸಿ ಪರಿಹಾರ ನೀಡಬೇಕು ಎಂದು ಒತ್ತಾಯಿಸಿದರು.

ಎಪಿಎಂಸಿ ತಿದ್ದುಪಡಿ ಕಾಯ್ದೆಗಳ ಮೂಲಕ ಸರ್ಕಾರ ಕಾರ್ಪೊರೇಟ್ ಕಂಪನಿಗಳಿಗೆ ಅನುಕೂಲ ಮಾಡಿಕೊಡಲು ಹೊರಟಿದೆ. ಆದರೆ, ಕನಿಷ್ಠ ಬೆಂಬಲ ಬೆಲೆಯ ಖಾತ್ರಿಯನ್ನು ಸರ್ಕಾರ ನೀಡುತ್ತಿಲ್ಲ. ಖಾಸಗಿಯವರೆಗೆ ಗುತ್ತಿಗೆ ಕೃಷಿ ಮಾಡಲು ಅನುಮತಿ ನೀಡಲಾಗುವುದು ಎಂದು ಸರ್ಕಾರ ಹೇಳುತ್ತಿದೆ. ಇದರಿಂದ ರೈತರಿಗೆ ಅನುಕೂಲಕ್ಕಿಂತ ಅನಾನುಕೂಲವೆ ಹೆಚ್ಚು ಎಂದರು.

ಕಾಂಗ್ರೆಸ್ ಮುಖಂಡ ಬಿ.ಆರ್.ಪಾಟೀಲ ಮಾತನಾಡಿ, ರೈತರ ಹೋರಾಟ ಬೆಂಬಲಿಸಿ ನಾಗರಾಜ ಕಲ್ಗುಟ್ಕರ್ ಅವರಂತ ವಿದ್ಯಾವಂತರು ಪಾದಯಾತ್ರೆ ನಡೆಸುತ್ತಿರುವುದು ಉತ್ತಮ ಬೆಳವಣಿಗೆ ಎಂದರು.

ಮಳೆ, ಚಳಿಯನ್ನು ಲೆಕ್ಕಿಸದೆ ಅವರು ಪಾದಯಾತ್ರೆ ನಡೆಸುತ್ತಿದ್ದಾರೆ. ಈ ಸಂದರ್ಭದಲ್ಲಿ ಅವರಿಗೆ ಕೆಲವರು ತೊಂದರೆ ಕೊಡುವ ಕೆಲಸವನ್ನೂ ಮಾಡಿದ್ದಾರೆ. ಆದರೂ ಅವರು ಅದಕ್ಕೆ ಜಗ್ಗದೆ ತಮ್ಮ ಕೆಲಸವನ್ನು ಮುಂದುವರಿಸಿದ್ದಾರೆ ಎಂದರು.

ಆರ್.ಕೆ.ಹುಡಗಿ, ಸಿದ್ದರಾಮ ಪ್ಯಾಟಿ, ಶೌಕತ್ ಅಲಿ ಆಲೂರ, ಉಮಾಪತಿ ಪಾಟೀಲ, ಧರ್ಮರಾಜ ಸಾಹು, ಶ್ಯಾಮ ನಾಟೀಕರ ಪತ್ರಿಕಾಗೋಷ್ಠಿಯಲ್ಲಿ ಇದ್ದರು.

ನಗರದಲ್ಲಿ ಪಾದಯಾತ್ರೆ: ರೈತರ ಹೋರಾಟ ಬೆಂಬಲಿಸಿ ದೆಹಲಿಗೆ ಪಾದಯಾತ್ರೆ ಕೈಗೊಂಡಿರುವ ನಾಗರಾಜ ಕಲ್ಗುಟ್ಕರ್ ಅವರು ಶುಕ್ರವಾರ ನಗರವನ್ನು ತಲುಪಿದರು.

ಶನಿವಾರ ಕಾಂಗ್ರೆಸ್ ಮುಖಂಡ ಬಿ.ಆರ್.ಪಾಟೀಲ ನೇತೃತ್ವದಲ್ಲಿ ನಗರದ ಜಗತ್ ವೃತ್ತದಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಮತ್ತು ಬಸವೇಶ್ವರರ ಪುತ್ಥಳಿಗಳಿಗೆ ಮಾಲಾರ್ಪಣೆ ಮಾಡಲಾಯಿತು. ನಂತರ ನಗರದಲ್ಲಿ ಪಾದಯಾತ್ರೆ ನಡೆಸಿ ನಾಗರಾಜ ಅವರನ್ನು ಬೀಳ್ಕೊಡಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT