ಭಾನುವಾರ, ಆಗಸ್ಟ್ 25, 2019
20 °C
ಕರ್ನಾಟಕ ಪ್ರಾಂತ ರೈತ ಸಂಘದಿಂದ ಜಿಲ್ಲಾಧಿಕಾರಿ ಮೂಲಕ ರಾಷ್ಟ್ರಪತಿಗಳಿಗೆ ಮನವಿ

ಬೆಂಬಲ ಬೆಲೆ ಕಾಯ್ದೆ ಅಂಗೀಕಾರಕ್ಕೆ ಒತ್ತಾಯಿಸಿ ಪ್ರತಿಭಟನೆ

Published:
Updated:
Prajavani

ಕಲಬುರ್ಗಿ: ದೇಶದಲ್ಲಿ ಕೃಷಿಯನ್ನು ಅವಲಂಬಿಸಿರುವ ರೈತರನ್ನು ಸಂರಕ್ಷಿಸಲು ಸಂಸತ್ತು ಕೂಡಲೇ ಬೆಂಬಲ ಬೆಲೆ ಕಾಯ್ದೆ ಮತ್ತು ಋಣಮುಕ್ತ ಕಾಯ್ದೆಗಳ ಖಾಸಗಿ ಮಸೂದೆಗಳನ್ನು ಸೂಕ್ತ ಚರ್ಚೆ ನಡೆಸಿ ಅಂಗೀಕರಿಸಬೇಕು ಎಂದು ಒತ್ತಾಯಿಸಿ ಕರ್ನಾಟಕ ಪ್ರಾಂತ ರೈತ ಸಂಘದ ಕಾರ್ಯಕರ್ತರು ಹಾಗೂ ರೈತರು ಜಿಲ್ಲಾಧಿಕಾರಿ ಕಚೇರಿ ಎದುರು ಶನಿವಾರ ಪ್ರತಿಭಟನೆ ನಡೆಸಿದರು.

ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು 30 ವರ್ಷಗಳಿಂದ ನಿರಂತರವಾಗಿ ವಿಶ್ವಬ್ಯಾಂಕ್, ಅಂತರರಾಷ್ಟ್ರೀಯ ಹಣಕಾಸು ಸಂಸ್ಥೆ ಮತ್ತು ವಿಶ್ವ ವ್ಯಾಪಾರ ಸಂಘಟನೆಯ ಒತ್ತಡಕ್ಕೆ ಮಣಿದು ದೇಶವನ್ನು ಬಹುರಾಷ್ಟ್ರೀಯ ಕಂಪನಿಗಳ ವ್ಯಾಪಕ ಲೂಟಿಗೆ ತೆರೆದಿಡಲು ಜಾಗರೀಕರಣ, ಉದಾರೀಕರಣ ಹಾಗೂ ಖಾಸಗೀಕರಣ ನೀತಿಗಳನ್ನು ಜಾರಿಗೆ ತಂದಿದೆ. ಇದರಿಂದ ದೇಶದ ಗ್ರಾಮೀಣ ಭಾಗ ತತ್ತರಿಸಿ ಹೋಗಿದೆ. ಕೃಷಿಗೆ ಈ ಮೊದಲು ನೀಡಲಾಗುತ್ತಿದ್ದ ಸಹಾಯಧನವನ್ನು ಬಹುತೇಕ ಕಡಿಮೆ ಮಾಡಲಾಗಿದೆ. ಬೀಜ, ಗೊಬ್ಬರ, ಕ್ರಿಮಿನಾಶಕಗಳು, ಕೃಷಿ ಉಪಕರಣಗಳ ಬೆಲೆಗಳ ಮೇಲಿದ್ದ ಸರ್ಕಾರದ ನಿಯಂತ್ರಣವನ್ನು ತೆಗೆದು ಹಾಕಲಾಗಿದೆ. ಬಡವರು ಹಾಗೂ ರೈತರಿಗೆ ಕಡಿಮೆ ಬಡ್ಡಿದರದಲ್ಲಿ ಬ್ಯಾಂಕ್‌ ಸಾಲ ದೊರೆಯುವುದಕ್ಕೆ ಹಲವು ಷರತ್ತುಗಳನ್ನು ವಿಧಿಸಿದ್ದರಿಂದ ಅನಿವಾರ್ಯವಾಗಿ ಖಾಸಗಿ ಲೇವಾದೇವಿಗಾರರನ್ನು ಅವಲಂಬಿಸಿದ್ದು, ಬಡ್ಡಿ ಪಾವತಿಸಿ ಹೈರಾಣಾಗುತ್ತಿದ್ದಾರೆ ಎಂದು ಪ್ರತಿಭಟನಾಕಾರರು ದೂರಿದರು.

ಪೆಟ್ರೋಲ್‌, ಡೀಸೆಲ್‌ ದರ ಹೆಚ್ಚಳದಿಂದಾಗಿ ಕೃಷಿ ಉತ್ಪನ್ನಗಳ ಉತ್ಪಾದನಾ ವೆಚ್ಚ ಹೆಚ್ಚಳವಾಗಿದ್ದು, ರೈತ ಕುಟುಂಬಗಳ ಜೀವನ ವೆಚ್ಚ 300ರಿಂದ 400 ಪಟ್ಟು ಹೆಚ್ಚಳವಾಗಿದೆ ಎಂದು ಟೀಕಿಸಿದರು.

ಡಾ.ಎಂ.ಎಸ್‌.ಸ್ವಾಮಿನಾಥನ್‌ ಆಯೋಗದ ವರದಿಯಂತೆ ಕೃಷಿ ಉತ್ಪಾದನಾ ವೆಚ್ಚಕ್ಕೆ ಶೇ 50ರಷ್ಟು ಲಾಭಾಂಶ ಸೇರಿಸಿ ಕನಿಷ್ಠ ಬೆಂಬಲ ಬೆಲೆ ಖಾತರಿಯಾಗಿ ದೊರೆಯುವಂತೆ ಮಾಡುವ ಕಾಯ್ದೆಯನ್ನು ರೂಪಿಸಬೇಕು. ಎಲ್ಲ ರೈತರು, ಕೃಷಿ ಕೂಲಿಕಾರರು ಮತ್ತು ಸಣ್ಣ ಗೇಣಿದಾರರು, ಕಸುಬುದಾರರಿಗೆ ಬಡ್ಡಿರಹಿತ ಸಾಲವನ್ನು ಸಾರ್ವಜನಿಕ ಬ್ಯಾಂಕುಗಳಿಂದ ಕಡ್ಡಾಯವಾಗಿ ದೊರೆಯುವಂತೆ ಮಾಡಬೇಕು. ಒಂದು ಬಾರಿ ರೈತರ ಹಾಗೂ ಎಲ್ಲ ಗ್ರಾಮೀಣ ಜನತೆಯ ಸಾರ್ವಜನಿಕ ಹಾಗೂ ಖಾಸಗಿ ಸಾಲವನ್ನು ಮನ್ನಾ ಮಾಡಬೇಕು ಎಂದು ಒತ್ತಾಯಿಸಿದರು.

ಉದ್ಯೋಗ ಖಾತರಿ ಯೋಜನೆಯ ಕನಿಷ್ಠ ಕೂಲಿ ದರವನ್ನು ₹ 600ಕ್ಕೆ ಹೆಚ್ಚಿಸಬೇಕು. ನಗರ ಪ್ರದೇಶದಲ್ಲಿಯೂ 200 ದಿನ ಉದ್ಯೋಗ ನೀಡಬೇಕು. ಎಲ್ಲ ಬಡ, ಮಧ್ಯಮ ರೈತರು, ಕೂಲಿಕಾರರಿಗೆ ತಲಾ ಮಾಸಿಕ ₹ 5 ಸಾವಿರ ಪಿಂಚಣಿ ನೀಡಬೇಕು. ನರೇಗಾ ಯೋಜನೆಯಡಿ ಕೆಲಸ ಮಾಡಿದ ಕೂಲಿಕಾರರಿಗೆ ಎರಡು ತಿಂಗಳ ಬಾಕಿ ವೇತನ ಪಾವತಿಯಾಗಿಲ್ಲ. ಹಬ್ಬ ಇರುವುದರಿಂದ ತುರ್ತಾಗಿ ಬಾಕಿ ಬಿಡುಗಡೆ ಮಾಡಬೇಕು. ಕೇಂದ್ರ ಸರ್ಕಾರ ತಕ್ಷಣಕ್ಕೆ ರಾಜ್ಯಕ್ಕೆ ಬಾಕಿ ಉಳಿಸಿಕೊಂಡಿರುವ ₹ 2500 ಕೋಟಿ ನರೇಗಾ ಹಣವನ್ನು ಬಿಡುಗಡೆ ಮಾಡಬೇಕು ಎಂದು ಆಗ್ರಹಿಸಿದರು.

ಸಂಘಟನೆಯ ಜಿಲ್ಲಾ ಘಟಕದ ಅಧ್ಯಕ್ಷ ಶರಣಬಸಪ್ಪ ಮಮಶೆಟ್ಟಿ, ಕಾರ್ಯದರ್ಶಿ ಅಶೋಕ ಮ್ಯಾಗೇರಿ ಪ್ರತಿಭಟನೆಯ ನೇತೃತ್ವ ವಹಿಸಿದ್ದರು.

Post Comments (+)