ಗುರುವಾರ , ಫೆಬ್ರವರಿ 9, 2023
30 °C
ನಾಂದೇಡ್–ಯಶವಂತಪುರ ವಿಶೇಷ ರೈಲು; ರೈಲ್ವೆ ಕ್ರಮಕ್ಕೆ ವ್ಯಾಪಕ ಆಕ್ರೋಶ

ಯಾದಗಿರಿಯಲ್ಲಿ ಏಕಿಲ್ಲ ರೈಲು ನಿಲುಗಡೆ?

ಮನೋಜಕುಮಾರ್ ಗುದ್ದಿ Updated:

ಅಕ್ಷರ ಗಾತ್ರ : | |

Prajavani

ಕಲಬುರಗಿ: ದಕ್ಷಿಣ ಮಧ್ಯೆ ರೈಲ್ವೆಯು ಮಹಾರಾಷ್ಟ್ರದ ನಾಂದೇಡ್‌ನಿಂದ ಬೀದರ್, ಕಲಬುರಗಿ ಮೂಲಕ ಯಶವಂತಪುರಕ್ಕೆ ವಿಶೇಷ ರೈಲು ಆರಂಭಿಸಿದ್ದು, ಜಿಲ್ಲಾ ಕೇಂದ್ರ ಯಾದಗಿರಿ, ತಾಲ್ಲೂಕು ಕೇಂದ್ರ ಶಹಾಬಾದ್‌ನಲ್ಲಿ ನಿಲುಗಡೆ ಇಲ್ಲದಿರುವುದಕ್ಕೆ ಪ್ರಯಾಣಿಕರಿಂದ ತೀವ್ರ ಆಕ್ರೋಶ ವ್ಯಕ್ತವಾಗಿದೆ.

ಡಿಸೆಂಬರ್ ತಿಂಗಳಲ್ಲಿ ಪ್ರಯಾಣಿಕರ ದಟ್ಟಣಿಯನ್ನು ನಿವಾರಿಸಲು ಎಂಟು ಬಾರಿ ಸಂಚರಿಸಲಿರುವ ವಿಶೇಷ ರೈಲು (07093/ 07094) ತನ್ನ ಮೊದಲ ಪ್ರಯಾಣವನ್ನು ಇದೇ 5ರಂದು ಮಧ್ಯಾಹ್ನ 1.05ಕ್ಕೆ ನಾಂದೇಡ್‌ನಿಂದ ಆರಂಭಿಸಲಿದ್ದು, ಮರುದಿನ (ಡಿ.6) ಬೆಳಿಗ್ಗೆ 11ಕ್ಕೆ ಯಶವಂತಪುರ ತಲುಪಲಿದೆ. ಕಲಬುರಗಿಯ ತಾಜಸುಲ್ತಾನಪುರದಂತಹ ಸಣ್ಣ ನಿಲ್ದಾಣದಲ್ಲಿ ನಿಲುಗಡೆ ಇರುವ ರೈಲು ಜಿಲ್ಲಾ ಕೇಂದ್ರ ಯಾದಗಿರಿಯಲ್ಲಿ ನಿಲ್ಲದಿರುವುದು ಕಲಬುರಗಿ ಹಾಗೂ ಯಾದಗಿರಿ ಜಿಲ್ಲೆಯ ಪ್ರಯಾಣಿಕರಲ್ಲಿ ಬೇಸರ ಮೂಡಿಸಿದೆ.

ದಕ್ಷಿಣ ಮಧ್ಯ ರೈಲ್ವೆಯು ಈ ವಿಶೇಷ ರೈಲನ್ನು ಓಡಿಸುತ್ತಿದ್ದು, ನಿಲ್ದಾಣಗಳನ್ನು ಅಂತಿಮಗೊಳಿಸುವ ಸಂದರ್ಭದಲ್ಲಿ ಜಿಲ್ಲಾ ಕೇಂದ್ರವಾದ ಯಾದಗಿರಿ ಗಮನಕ್ಕೆ ಬರಲಿಲ್ಲವೇ ಎಂದು ಪ್ರಯಾಣಿಕರು ಪ್ರಶ್ನಿಸುತ್ತಿದ್ದಾರೆ.

ಸಾಮಾಜಿಕ ಜಾಲತಾಣದಲ್ಲಿಯೂ ಈ ಬಗ್ಗೆ ಚರ್ಚೆ ನಡೆಯುತ್ತಿದ್ದು, ರೈಲ್ವೆ ಇಲಾಖೆಯ ಧೋರಣೆಗೆ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

‘ತಾಜಸುಲ್ತಾನಪುರ, ವಾಡಿ, ಆದೋನಿಯಂತಹ ಊರುಗಳಲ್ಲಿ ರೈಲ್ವೆ ನಿಲ್ಲಲಿದ್ದು, ಪ್ರಯಾಣಿಕರನ್ನು ಹತ್ತಿಸಿಕೊಳ್ಳಲಿದೆ. ಯಾದಗಿರಿ, ಶಹಾ ಬಾದ್‌ ನಂತಹ ಹೆಚ್ಚು ಜನದಟ್ಟಣೆಯ ನಗರಗಳಲ್ಲಿ ಏಕಿಲ್ಲ’ ಎಂದು ಪ್ರಶ್ನಿಸುತ್ತಾರೆ ಕಲಬುರಗಿಯ ನಿವೃತ್ತ ಎಂಜಿನಿಯರ್ ವೆಂಕಟೇಶ ಮುದಗಲ್.

ರೈಲ್ವೆ ಬಳಕೆದಾರ ಪ್ರಸನ್ನ ದೇಶಮುಖ ಎಂಬುವವರು, ‘ಮತ್ತೆ ಯಾದಗಿರಿಗೆ ಅವಮಾನ? ಏನು ಮಾಡುತ್ತಿದ್ದಾರೆ ನಮ್ಮ ಸಂಸದರು. ಕರ್ನಾಟಕದ ಪ್ರಯಾಣಿಕರ ದಟ್ಟಣೆ ಕಡಿಮೆ ಮಾಡಲು ಕರ್ನಾಟಕದ ಸ್ಟೇಷನ್ ಕೈಬಿಟ್ಟರು. ಜಿಲ್ಲೆಗಿಲ್ಲದ ಆದ್ಯತೆ ಆದೋನಿಯಂತಹ ತಾಲ್ಲೂಕಿಗೆ ದೊರಕಿದೆ. ಇದು ದಕ್ಷಿಣ ಮಧ್ಯ ರೈಲಿನ ಮಲತಾಯಿ ಧೋರಣೆ. ನಮ್ಮ ಸಂಸದರು ನಿದ್ದೆಯಲ್ಲಿದ್ದಾರೆ’ ಎಂದು ಟೀಕಿಸುತ್ತಾರೆ.

‘ಕಲಬುರಗಿಯಲ್ಲಿ ರೈಲ್ವೆ ವಿಭಾಗವನ್ನೂ ತರಲಿಲ್ಲ. ಜಿಲ್ಲೆಯ ಸರಕು ಸಾಗಣೆ, ಪ್ರಯಾಣಿಕರ ಟಿಕೆಟ್‌ನಿಂದ ಸಂಗ್ರಹವಾದ ಹಣ ಕೇಂದ್ರ ರೈಲ್ವೆ, ದಕ್ಷಿಣ ಮಧ್ಯ ರೈಲ್ವೆ ಪಾಲಾಗುತ್ತಿದೆ. ಇದೀಗ ನಮ್ಮ ಜನರಿಗೆ ಅಗತ್ಯವಾದ ಕಡಿಮೆ ದರದಲ್ಲಿ ಆರಾಮದಾಯಕ ಪ್ರಯಾಣವನ್ನು ಸಾಧ್ಯವಾಗಿಸುವ ರೈಲನ್ನೂ ಕಲಬುರಗಿ, ಯಾದಗಿರಿ ಜಿಲ್ಲೆಗಳ ಪ್ರಮುಖ ನಿಲ್ದಾಣಗಳಲ್ಲಿ ನಿಲ್ಲಿಸಲು ಸಾಧ್ಯವಾಗಿಲ್ಲವೆಂದರೆ ಹೇಗೆ’ ಎಂದು ಪ್ರಶ್ನಿಸುತ್ತಾರೆ ಕಲಬುರಗಿಯ ವೈದ್ಯೆ ಡಾ. ಅನಿತಾ ದೇಸಾಯಿ.

ಕಲಬುರಗಿ–ಬೆಂಗಳೂರು ರೈಲಿಗೆ ಭಾರಿ ಬೇಡಿಕೆ

ಕಲಬುರಗಿಯಿಂದ ರಾಜಧಾನಿ ಬೆಂಗಳೂರು 630 ಕಿ.ಮೀ. ದೂರ ಇರುವುದರಿಂದ ರಸ್ತೆ ಮೂಲಕ ಹೋಗುವುದು ಹೆಚ್ಚು ಸಮಯ ಬೇಡುವುದರ ಜೊತೆಗೆ, ಪ್ರಯಾಣಿಕರನ್ನು ಹೈರಾಣು ಮಾಡುತ್ತದೆ. ಆದ್ದರಿಂದ ನಿತ್ಯ ಬೆಂಗಳೂರಿಗೆ ಇನ್ನೂ ಎರಡು ರೈಲುಗಳಿಗೆ ಬೇಡಿಕೆ ಇದೆ.

ಈಗಾಗಲೇ ಉದ್ಯಾನ್, ಸೊಲ್ಲಾಪುರ–ಯಶವಂತಪುರ, ಬಸವ ಎಕ್ಸ್‌ಪ್ರೆಸ್ ಸೇರಿದಂತೆ ಚೆನ್ನೈನತ್ತ ತೆರಳುವ ವಾರದ ರೈಲುಗಳು ಬೆಂಗಳೂರಿಗೆ ತೆರಳುತ್ತಿವೆ. ಆದರೆ, ಕೋವಿಡ್ ಬಳಿಕ ಪ್ರಯಾಣಿಕರ ದಟ್ಟಣೆ ಹೆಚ್ಚಿರುವುದರಿಂದ ಹಾಗೂ ವಿಮಾನದ ಮೂಲಕ ತೆರಳಲು ದುಬಾರಿ ದರ ಇರುವುದರಿಂದ ಪ್ರಯಾಣಿಕರು ಎಕ್ಸ್‌ಪ್ರೆಸ್ ರೈಲುಗಳಿಗೆ ಬೇಡಿಕೆ ಇಟ್ಟಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು