ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

20ರಿಂದ ದ್ರಾವಿಡ ಭಾಷಾ ಶಾಸಜ್ಞರ ಸಮ್ಮೇಳನ

Last Updated 17 ಜೂನ್ 2019, 16:13 IST
ಅಕ್ಷರ ಗಾತ್ರ

ಕಲಬುರ್ಗಿ: ‘ಕಡಗಂಚಿಯಲ್ಲಿರುವ ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದ ಕಾರ್ಯಸೌಧ ಸಭಾಂಗಣದಲ್ಲಿ ಜೂನ್‌ 20ರಿಂದ 22ರವರೆಗೆ ‘47ನೇ ಅಖಿಲ ಭಾರತ ದ್ರಾವಿಡ ಭಾಷಾ ಶಾಸ್ತ್ರಜ್ಞರ ಸಮ್ಮೇಳನ’ ಹಾಗೂ ‘ಅಳಿವಿನಂಚಿನಲ್ಲಿರುವ ದ್ರಾವಿಡ ಭಾಷೆ’ ಕುರಿತು ಅಂತರರಾಷ್ಟ್ರೀಯ ವಿಚಾರಸಂಕಿರಣ ಆಯೋಜಿಸಲಾಗಿದೆ’ ಎಂದು ಸಿಯುಕೆ ಕುಲಪತಿ ಪ್ರೊ.ಎಚ್.ಎಂ. ಮಹೇಶ್ವರಯ್ಯ ಹೇಳಿದರು.

‘ಸಮ್ಮೇಳನದಲ್ಲಿ 80 ಪ್ರಬಂಧ ಮಂಡನೆಯಾಗಲಿವೆ. 18 ತಾಂತ್ರಿಕ ಗೋಷ್ಠಿಗಳು ನಡೆಯಲಿವೆ. ದೇಶದ 25 ಶ್ರೇಷ್ಠ ಭಾಷಾ ವಿಜ್ಞಾನಿಗಳು ಹಾಗೂ 90ಕ್ಕೂ ಹೆಚ್ಚು ಸಂಶೋಧನಾರ್ಥಿಗಳು ಮತ್ತು 12 ಮಂದಿ ವಿದೇಶಿ (ಶ್ರೀಲಂಕಾ, ಯಮನ್, ರಷ್ಯಾ, ಇಂಗ್ಲೆಂಡ್) ವಿದ್ವಾಂಸರೂ ಪಾಲ್ಗೊಳ್ಳಲಿದ್ದಾರೆ. ಸಮಾವೇಶದಲ್ಲಿ 21 ದ್ರಾವಿಡ ಭಾಷೆಗಳ ಬಗ್ಗೆ ಚರ್ಚೆ ನಡೆಯಲಿದೆ’ ಎಂದು ಅವರು ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

‘ಅಖಿಲ ಭಾರತ ದ್ರಾವಿಡ ಭಾಷಾಶಾಸ್ತ್ರ ಸಂಸ್ಥೆ ಮತ್ತು ಅಂತರರಾಷ್ಟ್ರೀಯ ದ್ರಾವಿಡ ಭಾಷಾ ಸಂಸ್ಥೆಗಳ ಆಶ್ರಯದಲ್ಲಿ ಸಿಯುಕೆನಲ್ಲಿ ಈ ಕಾರ್ಯಕ್ರಮವನ್ನು ಮೊದಲಬಾರಿಗೆ ಆಯೋಜಿಸಲಾಗುತ್ತಿದೆ. ಜೂನ್‌ 20ರಂದ ಬೆಳಿಗ್ಗೆ 10.30ಕ್ಕೆ ಸಿಯುಕೆ ಸಮಕುಲಪತಿ ಪ್ರೊ.ಜಿ.ಆರ್.ನಾಯಕ ಉದ್ಘಾಟಿಸಲಿದ್ದಾರೆ’ ಎಂದರು.

‘ತಮಿಳುನಾಡಿನ ತಿರುವನಂತಪುರದಲ್ಲಿ ಈ ದ್ರಾವಿಡ ಭಾಷಾಶಾಸ್ತ್ರ ಸಂಸ್ಥೆ ಇದೆ. ವಿ.ಸುಬ್ರಹ್ಮಣ್ಯಂ ಎಂಬ ವಿದ್ವಾಂಸರು ಇದನ್ನು ಕಟ್ಟಿ ಬೆಳೆಸಿದ್ದು, ಈಗ ಅಂತರರಾಷ್ಟ್ರೀಯ ಸಂಶೋಧನಾ ವ್ಯಾಪ್ತಿ ಹೊಂದಿದೆ. ಕಳೆದ 45 ವರ್ಷಗಳಿಂದ ನಾನೂ ಇದರ ಸದಸ್ಯನಾಗಿ ಕೆಲಸ ಮಾಡುತ್ತಿದ್ದೇನೆ. ಕರ್ನಾಟಕ, ತಮಿಳುನಾಡು, ಆಂಧ್ರ, ಕೇರಳ ಸೇರಿದಂತೆ ಉತ್ತರ ಭಾರತದ ಹಲವು ರಾಜ್ಯಗಳಲ್ಲೂ ದ್ರಾವಿಡ ಭಾಷಿಗರು ಇದ್ದಾರೆ. ದೇಶ ಭಾಷಾಲೋಕದಲ್ಲಿ ಶೇಕಡ 25ರಷ್ಟು ಮಂದಿ ದ್ರಾವಿಡ ಭಾಷೆಗಳನ್ನೇ ಮಾತನಾಡುತ್ತಾರೆ’ ಎಂದು ಅವರು ಮಾಹಿತಿ ನೀಡಿದರು.

‘ದ್ರಾವಿಡ ಭಾಷೆಗಳು ಈಗ ವಿಶ್ವದ ಬೇರೆಬೇರೆ ದೇಶಗಳಿಗೂ ವಿಸ್ತರಿಸಿವೆ. ಪಾಕಿಸ್ತಾನದಲ್ಲಿ ‘ಬ್ರಾಫಿ’ ಎಂಬ ಭಾಷೆ, ಅಪಘಾನಿಸ್ತಾನದಲ್ಲಿ ‘ಮೊಲ್ಟೊ’ ಮುಂತಾದ ಭಾಷೆಗಳನ್ನು ಮಾತನಾಡುವವರಿದ್ದಾರೆ. ಭಾರದತ ಸುತ್ತಲೂ ಇರುವ ಎಲ್ಲ ದೇಶಗಳಲ್ಲೂ ಬುಡಕಟ್ಟು ಭಾಷೆಗಳಿವೆ. ಅವುಗಳು ಅಳಿಯದಂತೆ ಎಚ್ಚರಿಕೆ ವಹಿಸುವ ಉದ್ದೇಶದಿಂದ ಸಿವಿಕೆ ಈ ಪ್ರಯತ್ನ ನಡೆಸಿದೆ’ ಎಂದರು.

*ಅಳಿವಿನಂಚಿನಲ್ಲಿರುವ ರಾಜ್ಯದ 11 ದ್ರಾವಿಡ ಭಾಷೆಗಳ ಕುರಿತಾದ ಸಂಶೋಧನಾ ಪುಸ್ತಕ ಪ್ರಕಟಣೆಗೆ ₹ 3.6 ಕೋಟಿ ಅನುದಾನ ಬಿಡುಗಡೆಯಾಗಿದೆ. ಇದರ ಕೆಲಸ ಪ್ರಗತಿಯಲ್ಲಿದೆ
ಪ್ರೊ.ಎಚ್‌.ಎಂ.ಮಹೇಶ್ವರಯ್ಯ
ಕುಲಪತಿ, ಸಿವಿಕೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT