ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತಡೋಳಾ: ಕನ್ನಡ ಮಾಧ್ಯಮ ಶಾಲೆ ಇಲ್ಲ, ಮುಖ್ಯ ರಸ್ತೆಗಳ ಕಾಮಗಾರಿ ಅಪೂರ್ಣ

Last Updated 27 ಜನವರಿ 2020, 19:30 IST
ಅಕ್ಷರ ಗಾತ್ರ

ಆಳಂದ: ತಾಲ್ಲೂಕಿನ ಗಡಿ ಭಾಗದಲ್ಲಿರುವ ಗ್ರಾಮ ತಡೋಳಾ. ಇದು ಹೊಸದಾಗಿ ಗ್ರಾಮ ಪಂಚಾಯಿತಿ ಕೇಂದ್ರವಾಗಿ ಮಾರ್ಪಟ್ಟಿದ್ದರೂ ಮೂಲ ಸೌಲಭ್ಯಗಳನ್ನು ಹೊಂದಲು ಇನ್ನೂ ಸಾಧ್ಯವಾಗಿಲ್ಲ. ಹಲವು ಸರ್ಕಾರಿ ಸೌಲಭ್ಯಗಳು ಇಲ್ಲಿ ಸದ್ಬಳಕೆಯಾಗದೆ ಉಳಿದಿರುವುದು ಕಾಣುತ್ತಿದೆ.

ಗ್ರಾಮದಲ್ಲಿ ಅಂದಾಜು 4 ಸಾವಿರಕ್ಕೂ ಹೆಚ್ಚು ಜನಸಂಖ್ಯೆ ಇದೆ. ಒಟ್ಟು 430 ಕುಟುಂಬಗಳಿರುವ ಗ್ರಾಮದಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರ, ಪಶು ಆಸ್ಪತ್ರೆ ಮತ್ತಿತರ ಸರ್ಕಾರಿ ಕಟ್ಟಡಗಳಿವೆ. ಕನ್ನಡ ಭಾಷೆ ಇಲ್ಲಿ ಅನಾಥವಾಗಿದೆ. ಕನ್ನಡ ಮಾಧ್ಯಮ ಶಾಲೆ ಇಲ್ಲ. ಮರಾಠಿ ಭಾಷಿಕರು ಅಧಿಕ ಸಂಖ್ಯೆಯಲ್ಲಿ ಇರುವ ಈ ಗ್ರಾಮದಲ್ಲಿ ಮರಾಠಿ ಮಾಧ್ಯಮದಲ್ಲಿ ಪ್ರೌಢ ಶಾಲೆ ಇದೆ. ಪ್ರಾಥಮಿಕ ಶಾಲೆ ಕಟ್ಟಡವು ಹಳೆಯದಾಗಿದ್ದು, ದುರಸ್ತಿ ಕಂಡಿಲ್ಲ. ಶಾಲೆ ಆವರಣದಲ್ಲಿರುವ ಆರೋಗ್ಯ ಕೇಂದ್ರವು ಗಿಡಗಂಟಿಗಳಿಂದ ಕೂಡಿದ್ದು ಸ್ವಚ್ಛತೆ ಇಲ್ಲವಾಗಿದೆ.

ಗ್ರಾಮದಲ್ಲಿ ಮುಖ್ಯ ರಸ್ತೆ ನಿರ್ಮಾಣ ಕಾಮಗಾರಿ ಅಪೂರ್ಣವಾಗಿದೆ. ಇದರಿಂದ ಚರಂಡಿ ನೀರು ರಸ್ತೆ ಮೇಲೆ ಹರಿದಾಡುವ ಸ್ಥಿತಿ ಇದೆ. ಹೊಸ ಬಡಾವಣೆಗಳಲ್ಲಿ ನಿವಾಸಿಗಳಿಗೆ ಸೌಲಭ್ಯಗಳು ಮರೀಚಿಕೆಯಾಗಿವೆ. ರಸ್ತೆ, ವಿದ್ಯುತ್‌ ಕಂಬ ಮತ್ತು ಮನೆ ಮನೆಗೆ ನೀರು ಪೂರೈಸುವ ನಲ್ಲಿ ವ್ಯವಸ್ಥೆ ಮಾಡಲು ಇನ್ನೂ ಆಗಿಲ್ಲ ಎಂದು ಗ್ರಾಮಸ್ಥ ತುಕರಾಮ ನಕಾತೆ ತಿಳಿಸಿದರು.

ಸ್ವಚ್ಛ ಭಾರತ ಯೋಜನೆಯಡಿ 300ಕ್ಕೂ ಹೆಚ್ಚು ಶೌಚಾಲಯಗಳನ್ನು ನಿರ್ಮಿಸಲಾಗಿದೆ. ಈ ಶೌಚಾಲಯಗಳಲ್ಲಿ ಉರುವಲು ಕಟ್ಟಿಗೆ, ಕೃಷಿ ಮತ್ತು ಗೃಹ ಬಳಕೆ ಸಾಮಗ್ರಿಗಳನ್ನು ಹಾಕಿರುವುದು ಕಾಣುತ್ತದೆ. ಅನುದಾನ ಪಡೆಯಲು ಶೌಚಾಲಯ ನಿರ್ಮಿಸಿಕೊಳ್ಳಲಾಗಿದೆಯೇ ಹೊರತು ಬಯಲು ಶೌಚ ತಡೆಯಲು ಅಲ್ಲ ಎನ್ನುವ ಅನುಮಾನ ಕಾಡುತ್ತದೆ. ಗ್ರಾಮದ ಮಹಿಳೆಯರಿಗೆ ಸಾರ್ವಜನಿಕ ಶೌಚಾಲಯ ನಿರ್ಮಿಸದ ಕಾರಣ ರಸ್ತೆ ಬದಿಗೆ ಬಯಲು ಶೌಚವೇ ಅನಿವಾರ್ಯವಾಗಿದೆ ಎನ್ನುತ್ತಾರೆ ಕಲ್ಪನಾ ಅವಟೆ.

ಸ್ವಚ್ಛತೆಯ ಅರಿವು ಮೂಡಿಸಲು ಗ್ರಾಮ ಪಂಚಾಯಿತಿಯು ವಿಫಲವಾಗಿದೆ. ಗ್ರಾಮದಲ್ಲಿ ಕುಡಿಯುವ ನೀರು ಲಭ್ಯವಿದ್ದರೂ ಸಹ ಬಯಲು ಶೌಚವೇ ಕಂಡು ಬರುತ್ತಿದೆ. ಹೊಸ ಬಡವಾಣೆಯ ಹೆಣ್ಣುಮಕ್ಕಳು ಕತ್ತಲು ಆಗುವವರೆಗೂ ಕಾಯುವ ಸ್ಥಿತಿ ಇದೆ. ಗ್ರಾಮದಲ್ಲಿ ಮುಖ್ಯವಾಗಿ ವಿದ್ಯುತ್‌ ವ್ಯತ್ಯಯ ಹೆಚ್ಚು ಕಾಡುತ್ತಿದೆ ಎಂಬುದು ರೈತರ ಅಳಲು.

ಗಡಿಯಲ್ಲಿ ನೆರೆ ಗ್ರಾಮಗಳೊಂದಿಗೆ ಸಂಪರ್ಕ ಕಲ್ಪಿಸಲು ಗ್ರಾಮಕ್ಕೆ ಹೆಚ್ಚಿನ ಬಸ್‌ ಸೌಕರ್ಯ ಮತ್ತು ವಿಶೇಷವಾಗಿ ನಿರಗುಡಿ ಮಾರ್ಗದ ಬಸ್‌ ವ್ಯವಸ್ಥೆ ಕಲ್ಪಿಸಿದರೆ ಅನುಕೂಲವಾಗುತ್ತದೆ ಎಂಬುದು ಕಾಲೇಜು ವಿದ್ಯಾರ್ಥಿಗಳ ಅಭಿಮತವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT