ಯಡ್ರಾಮಿ: ಸ್ವಾತಂತ್ರ್ಯೋತ್ಸವ ಎಂದರೆ ಎಲ್ಲಡೆ ಹಬ್ಬದ ವಾತಾವರಣ ನಿರ್ಮಾಣವಾಗಿರುತ್ತದೆ. ಆದರೆ ಟೆಂಟ್ ಇಲ್ಲ, ರಂಗೋಲಿ ಇಲ್ಲ, ಭಾರತ ನಕ್ಷೆಗೆ ಸುಣ್ಣ ಬಣ್ಣ ಅಲಂಕಾರವಿಲ್ಲ, ವೇದಿಕೆಗೆ ಅಳವಡಿಸಿದ ಬ್ಯಾನರ್ ಟೇಬಲ್ ಮೇಲೆ ಬಿದ್ದಿದೆ. ಕುರ್ಚಿಗಳು ಅನಾಥವಾಗಿ ಮೂಲೆಯಲ್ಲಿ ಇವೆ. ಸ್ವಾತಂತ್ರ್ಯೋತ್ಸವ ಸಂಭ್ರಮಕ್ಕೆ ಬಂದಿದ್ದ ಮಕ್ಕಳು ವೇದಿಕೆ ಮೇಲೆ ನಡೆಯುತ್ತಿದ್ದ ಗಲಾಟೆಯನ್ನೇ ವೀಕ್ಷಿಸಬೇಕಾಯಿತು.
ತಾಲ್ಲೂಕಿನ ಪಬ್ಲಿಕ್ ಶಾಲೆ ಆವರಣದಲ್ಲಿ ತಾಲ್ಲೂಕು ಆಡಳಿತ ವತಿಯಿಂದ ಮಂಗಳವಾರ ಹಮ್ಮಿಕೊಂಡ 77ನೇ ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮದಲ್ಲಿ ನಡೆದ ಘಟನೆ ಇದು. ತಹಶೀಲ್ದಾರ್ ತಮ್ಮ ಕಚೇರಿಯಲ್ಲಿ ಧ್ವಜಾರೋಹಣ ಮಾಡಿ ತಾಲ್ಲೂಕು ಆಡಳಿತದಿಂದ ಪಬ್ಲಿಕ್ ಶಾಲೆಯಲ್ಲಿ ನಡೆಯಬೇಕಿದ್ದ ಕಾರ್ಯಕ್ರಮಕ್ಕೆ ಬಂದರು.
ಅದೇ ಸಮಯಕ್ಕೆ ವಿವಿಧ ಸಂಘಟನೆ ಅಧ್ಯಕ್ಷರು, ಪದಾಧಿಕಾರಿಗಳು, ನೌಕರರು, ಪೋಷಕರು ತಹಶೀಲ್ದಾರ್ ಶಶಿಕಲಾ ಪಾದಗಟ್ಟಿ ಅವರನ್ನು ತರಾಟೆಗೆ ತೆಗೆದುಕೊಂಡರು.
ನೀವು ಸ್ವಾತಂತ್ರ್ಯ ದಿನಾಚರಣೆಯನ್ನು ನಿರ್ಲಕ್ಷ್ಯ ವಹಿಸಿದ್ದಿರಿ. ಯಾವುದೇ ಸಿದ್ಧತೆ ಮಾಡಿಲ್ಲ. ಕಾರ್ಯಕ್ರಮದ ಕುರಿತು ಪತ್ರಿಕಾಗೋಷ್ಠಿಯೂ ಮಾಡಿಲ್ಲ. ಪೂರ್ವಭಾವಿ ಸಭೆ ನಡೆಸಿಲ್ಲ. ಈಗ ನೇರವಾಗಿ ಧ್ವಜಾರೋಹಣ ಮಾಡಲು ಬಂದಿದ್ದೀರಿ. ನೀವು ಧ್ವಜಾರೋಹಣ ಮಾಡುವಂತಿಲ್ಲ. ಮಕ್ಕಳಿಂದ ಧ್ವಜಾರೋಹಣ ಮಾಡಿಸಿ ಇಲ್ಲ ಕ್ಷಮೆ ಕೇಳಬೇಕು ಎಂದು ಪಟ್ಟು ಹಿಡಿದರು.
ತಹಶೀಲ್ದಾರ್ ಶಶಿಕಲಾ ಪಾದಗಟ್ಟಿ ವೇದಿಕೆ ಮೇಲೆ ನಿಂತು ನೆರೆದಿದ್ದ ಮಕ್ಕಳಲ್ಲಿ ಮತ್ತು ಪೋಷಕರಲ್ಲಿ ಹಾಗೂ ಎಲ್ಲರಿಗೂ ನಾನು ಕ್ಷಮೆಯಾಚಿಸುತ್ತೇನೆ, ಮುಂದೆ ಈ ರೀತಿ ನಡೆಯದಂತೆ ನೋಡಿಕೊಳ್ಳುತ್ತೇನೆ ಎಂದು ಕ್ಷಮೆಯಾಚಿಸಿದರು.
ತದನಂತರ 9.30ಕ್ಕೆ ಧ್ವಜಾರೋಹಣ ತಹಶೀಲ್ದಾರ್ ಶಶಿಕಲಾ ಪಾದಗಟ್ಟಿ ನೆರವೇರಿಸಿದರು. ತಹಶೀಲ್ದಾರ್ ಮಾತನಾಡುವ ಮೊದಲೇ ಮಕ್ಕಳು, ಪೋಷಕರು ಮನೆಕಡೆಗೆ ಎದ್ದು ನಡೆದರು. ಒಟ್ಟಿನಲ್ಲಿ 77ನೇ ಸ್ವಾತಂತ್ರ್ಯ ದಿನಾಚರಣೆ ತಾಲ್ಲೂಕು ಆಡಳಿತದ ಧೋರಣೆಯಿಂದ ಅವ್ಯವಸ್ಥೆಯ ಗೂಡಾಗಿ ಕಂಡುಬಂತು.
ಈ ವೇಳೆ ಇಒ ಮಹಾಂತೇಶ ಪುರಾಣಿಕ್, ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಸಂತೋಷರೆಡ್ಡಿ, ಪಿಎಸ್‌ಐ ಸುಖಾನಂದ ಬಿ.ಎಸ್, ನೌಕರರ ಸಂಘದ ಅಧ್ಯಕ್ಷ ಬಸವರಾಜ, ಸಿದ್ದು ಹೂಗಾರ, ನಿಂಗನಗೌಡ ಜೇರಟಗಿ, ಶಿವಪ್ಪ, ಮಲ್ಕಪ್ಪ ಭಜಂತ್ರಿ, ಶಾಲಾ ಶಿಕ್ಷಕರು, ಸೇರಿದಂತೆ ಸಂಘಟನೆ ಮುಖಂಡರು ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.