ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಲಬುರ್ಗಿ: ‌ನೀರಿನ ಸಮಸ್ಯೆ ತಲೆದೋರದಂತೆ ನೋಡಿಕೊಳ್ಳಿ‌: ಪಿ. ರವಿಕುಮಾರ

Last Updated 31 ಮಾರ್ಚ್ 2021, 4:44 IST
ಅಕ್ಷರ ಗಾತ್ರ

ಕಲಬುರ್ಗಿ: ‌‘ಪ್ರಸಕ್ತ ಬೇಸಿಗೆಯಲ್ಲಿ ನೀರಿನ ಸಮಸ್ಯೆ ತಲೆದೋರದಂತೆ ನೋಡಿಕೊಳ್ಳಬೇಕು’ ಎಂದು ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಪಿ. ರವಿಕುಮಾರ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು.

ನಗರದಲ್ಲಿ ಮಂಗಳವಾರ ಕಂದಾಯ ಇಲಾಖೆ ಸೇರಿದಂತೆ ಜಿಲ್ಲೆಯ ವಿವಿಧ ಇಲಾಖೆಗಳ ಅಭಿವೃದ್ಧಿ ಕುರಿತು ಪ್ರಗತಿ ಪರಿಶೀಲಿಸಿ ಅವರು ಮಾತನಾಡಿದರು.

‘ಕಳೆದ ವರ್ಷ ಹೆಚ್ಚಿನ ಮಳೆಯಾಗಿದ್ದರಿಂದ ಅಂತರ್ಜಲ ವೃದ್ಧಿಯಾಗಿದ್ದು, ಅಷ್ಟೊಂದು ನೀರಿನ ಹಾಹಾಕಾರ ಆಗುವುದಿಲ್ಲ ಎಂದು ಅಂದಾಜಿಸಲಾಗಿದೆ. ಆದರೂ ಮುಂಜಾಗ್ರತವಾಗಿ ನೀರಿನ ಸಮಸ್ಯೆ ಕಾಣಬಹುದಾದ ಗ್ರಮಗಳ ಪಟ್ಟಿ ಸಿದ್ಧಪಡಿಸಿಕೊಂಡು ಪರಿಸ್ಥಿತಿಗೆ ತಕ್ಕಂತೆ ಕಾರ್ಯನಿರ್ವಹಿಸುವಂತೆ’ ತಿಳಿಸಿದರು.

ಬಹುಗ್ರಾಮ ಕುಡಿಯುವ ನೀರು ಯೋಜನೆಯಡಿ ಅಫಜಲಪುರ ತಾಲ್ಲೂಕಿನ ಅಳ್ಳಗಿಯಲ್ಲಿ ಕಾಯಂ ವಿದ್ಯುತ್ ಸಂಪರ್ಕವಿಲ್ಲದ ಕಾರಣ ಯೋಜನೆ ಅನಷ್ಠಾನವಾಗಿಲ್ಲ ಎಂದು ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ವಿಭಾಗದ ಕಾರ್ಯನಿರ್ವಾಹಕ ಎಂಜಿನಿಯರ್‌ ಸಭೆಯ ಗಮನಕ್ಕೆ ತಂದಾಗ, ಕೂಡಲೇ ವಿದ್ಯುತ್ ವ್ಯವಸ್ಥೆ ಕಲ್ಪಿಸಿ ಯೋಜನೆ ಕಾರ್ಯರೂಪಕ್ಕೆ ತರುವಂತೆ ಜೆಸ್ಕಾಂ ಎಂ.ಡಿ. ರಾಹುಲ್‌ ಪಾಂಡ್ವೆ ಅವರಿಗೆ ಮುಖ್ಯ ಕಾರ್ಯದರ್ಶಿಗಳು ತಿಳಿಸಿದರು.

ಜಿಲ್ಲಾಧಿಕಾರಿ ವಿ.ವಿ.ಜ್ಯೋತ್ಸ್ನಾ ಅವರು, ‘ಜಿಲ್ಲೆಯಲ್ಲಿ ನೀರಿನ ಸಮಸ್ಯೆ ಕಾಣಬಹುದಾದ 156 ಗ್ರಾಮಗಳನ್ನು ಈಗಾಗಲೇ ಗುರುತಿಸಲಾಗಿದೆ. 2020-21ನೇ ಸಾಲಿನಲ್ಲಿ ವಾಡಿಕೆಗಿಂತ ಶೇ 39ರಷ್ಟು ಹೆಚ್ಚು ಮಳೆಯಾಗಿದ್ದರಿಂದ ಅಂತರ್ಜಲಮಟ್ಟ ವೃದ್ಧಿಯಾಗಿದೆ. 50 ವಾರಕ್ಕಾಗುವಷ್ಟು ಮೇವು ದಾಸ್ತಾನು ಜಿಲ್ಲೆಯಲ್ಲಿದ್ದು, ಮೇವಿನ ಕೊರತೆಯಿಲ್ಲ’ ಎಂದರು.

‘ಪಿ.ಎಂ ಸ್ವನಿಧಿ ಯೋಜನೆಯಡಿ ಬೀದಿ ಬದಿ ವ್ಯಾಪಾರಿಗಳಿಗೆ ಸಾಲ ನೀಡುವ ಯೋಜನೆಯಡಿ ಆನ್‍ಲೈನ್ ಮೂಲಕ ಸಲ್ಲಿಕೆಯಾದ ಅರ್ಜಿಗಳನ್ನು ವಿಲೇವಾರಿ ಮಾಡಿ ಸಾಲ ಮಂಜೂರಾತಿಗೆ ಕ್ರಮ ವಹಿಸಬೇಕು. ಇ-ಜನ್ಮ ತಂತ್ರಾಂಶದಲ್ಲಿ ಬಾಕಿಯಿರುವ ಅರ್ಜಿಗಳನ್ನು ಕೂಡಲೇ ವಿಲೇವಾರಿ ಮಾಡುವುದಲ್ಲದೇ, ನಿಧನ ಹೊಂದಿದವರ ಆಧಾರ ಕಾರ್ಡ್ ಅಪಲೋಡ್ ಮಾಡಿದಲ್ಲಿ ಇದರಲ್ಲಿ ಕೆಲವರ ಖಾತೆಗೆ ಅನಗತ್ಯವಾಗಿ ಸರ್ಕಾರದಿಂದ ಹೋಗುವ ಪಿಂಚಣಿ ಹಣ ಉಳಿತಾಯ ಮಾಡಬಹುದಾಗಿದೆ. ನೇಮಕಾತಿಗೆ ಸಂಬಂಧಿಸಿದಂತೆ ಸಿಂಧುತ್ವ ಪ್ರಮಾಣ ಪತ್ರ ನೀಡಲು ಇಂದಿನವರೆಗೆ ಜಿಲ್ಲೆಯಲ್ಲಿ 371 ಅರ್ಜಿ ಬಾಕಿಯಿದ್ದು, ಇದು ಸಹ ಕಾಲಾವಧಿಯಲ್ಲಿಯೇ ವಿಲೇವಾರಿ ಮಾಡುವಂತೆ’ ಸಮಾಜ ಕಲ್ಯಾಣ, ಹಿಂದುಳಿದ ವರ್ಗಗಳ ಕಲ್ಯಾಣ ಹಾಗೂ ಅಲ್ಪಸಂಖ್ಯಾತರ ಕಲ್ಯಾಣಾಧಿಕಾರಿಗಳಿಗೆ ಸೂಚಿಸಿದರು.

ಅನುದಾನ ಕೊರತೆಯಾಗಲ್ಲ: ‘2021-22ನೇ ಸಾಲಿನಲ್ಲಿ ಯಾವುದೇ ಅನುದಾನದ ಕೊರತೆಯಾಗುವುದಿಲ್ಲ. 2020-22ನೇ ಸಾಲಿಗೆ ಸಂಬಂಧಿಸಿದಂತೆ ಎಲ್ಲಾ ಕ್ರಿಯಾ ಯೋಜನೆಗಲನ್ನು ಬೇಗ ಸಿದ್ಧಪಡಿಸಿ ಮಂಜೂರಾತಿಗೆ ಕಳುಹಿಸಬೇಕು’ ಎಂದು ಪಿ.ರವಿಕುಮಾರ ನಿರ್ದೇಶನ ನಿಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT