ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಲಬುರ್ಗಿ: ನಮಗೆ ನಾವೇ ರಕ್ಷಕರು

ಕೋವಿಡ್‌ಗೆ ಒಳಗಾದ ದೇಶದ ಮೊದಲ ವೈದ್ಯ ಡಾ.ಮಹಮ್ಮದ್‌ ಫಹಿಮುದ್ದಿನ್‌ ಅನುಭವದ ನುಡಿ
Last Updated 12 ಜೂನ್ 2020, 16:29 IST
ಅಕ್ಷರ ಗಾತ್ರ

ಕಲಬುರ್ಗಿ: ‘ನಾನು ಅರೆಕ್ಷಣ ಮೈಮರೆತ ಕಾರಣ ಕೋವಿಡ್–19 ಸೋಂಕಿತನಾದೆ. ನನ್ನಿಂದ ಪತ್ನಿಗೂ ವೈರಾಣು ಅಂಟಿಕೊಂಡಿತು. ಯಾರಾದರೂ ಸರಿ; ಮುಂಜಾಗ್ರತೆ ವಹಿಸುವುದು ಬಹಳ ಅವಶ್ಯಕ. ಅದರಲ್ಲೂ ವೈದ್ಯರು ಸುರಕ್ಷತಾ ಸೌಕರ್ಯಗಳನ್ನು ಬಳಸುವುದನ್ನು ಕಡ್ಡಾಯವಾಗಿ ಪಾಲಿಸಬೇಕು. ಇಲ್ಲದಿದ್ದರೆ ಪರದಾಟ ತಪ್ಪಿದ್ದಲ್ಲ...’

ಕೋವಿಡ್‌–19 ಸೋಂಕಿಗೆ ಒಳಗಾದ ದೇಶದ ಮೊದಲ ವೈದ್ಯ ಕಲಬುರ್ಗಿಯ ಡಾ.ಮಹಮ್ಮದ್‌ ಫಹಿಮುದ್ದಿನ್‌ ಅವರ ಹೇಳಿಕೆ ಇದು. ಎಂಬಿಬಿಎಸ್ ಓದಿರುವ ಅವರು ಹಲವು ವರ್ಷಗಳಿಂದ ನಗರದಲ್ಲೇ ಕ್ಲಿನಿಕ್‌‌ ನಡೆಸುತ್ತಿದ್ದಾರೆ. 63 ವರ್ಷದ ಈ ವೈದ್ಯರು ತಮ್ಮ ದಿನಚರಿ ಹಾಗೂ ಮನೋಸ್ಥೈರ್ಯದ ಕಾರಣ ಸೋಂಕಿನಿಂದ ಗುಣಮುಖರಾದರು.

ಐಸೋಲೇಷನ್‌ ವಾರ್ಡ್‌ನ 16 ದಿನ, ಹೊಂ ಕ್ವಾರಂಟೈನ್‌ನ 28 ದಿನಗಳನ್ನೂ ಪೂರೈಸಿದ ಮೇಲೆ ಅವರು ಮನೆಯಿಂದ ಹೊರಗೆ ಬಂದರು. ತಮ್ಮ ಎಂದಿನ ದಿನಚರಿ ಆರಂಭಿಸಿದರು. ಬೆಳಿಗ್ಗೆ ವ್ಯಾಯಾಮ, ವಾಯುವಿಹಾರ, ಫಲಾಹಾರ ಸೇವನೆ, ಪೌಷ್ಟಿಕ ಆಹಾರ, ನಮಾಜ್‌, ಧ್ಯಾನ... ಹೀಗೆ ತಮ್ಮ ಆರೋಗ್ಯ ಸುಧಾರಣೆಗೆ ಹೆಚ್ಚಿನ ಒತ್ತುನೀಡಿದ್ದಾರೆ.

ಕೋವಿಡ್‌ ರೋಗಿಯ ತಪಾಸಣೆಯ ಸಂದರ್ಭದಲ್ಲಿ ತಾವು ಮಾಡಿದ ಸಣ್ಣ ತಪ್ಪು, ಅದರಿಂದ ಆದ ಪರಿಣಾಮ, ಕೋವಿಡ್‌ ಗೆದ್ದುಬಂದ ರೀತಿಯ ಬಗ್ಗೆ ಅವರೇ ಮನಬಿಚ್ಚಿ ಮಾತಾಡಿದ್ದಾರೆ.

‘ಸೌದಿ ಅರೇಬಿಯಾದಿಂದ ಮರಳಿದ್ದ ಮಹಮ್ಮದ್‌ ಹುಸೇನ್‌ ಸಿದ್ದಿಕಿ (76) ಅವರು ಮಾರ್ಚ್‌ 10ರಂದು ಕೋವಿಡ್‌ನಿಂದಾಗಿಯೇ ಮೃತಪಟ್ಟರು. ಇದು ದೇಶದಲ್ಲಿಯೇ ಕೋವಿಡ್‌ನಿಂದ ಸಂಭವಿಸಿದ ಮೊದಲ ಸಾವು. ಮಾರ್ಚ್ 8ರಂದು ಅವರ ಮನೆಗೆ ಹೋಗಿ ಚಿಕಿತ್ಸೆ ನೀಡಿದ್ದೆ. ಮುಖಗವಸು, ಕೈಗವಸು ಧರಿಸಿರಲಿಲ್ಲ. ಹಾಗಾಗಿ, ಸೋಂಕು ಅಂಟಿಕೊಂಡಿತು. ನಾನು ಏ.15ರಂದು ಗುಣಮುಖವಾಗಿ ಮನೆಗೆ ಮರಳಿದೆ. ಹೋಂ ಕ್ವಾರಂಟೈನ್‌ ಅವಧಿಯನ್ನೂ ಮುಗಿಸಿದ್ದು, ದಿನಚರಿ ವಾಡಿಕೆಯಂತೆ ಸಾಗಿದೆ. ಖುಷಿಯಾಗಿದ್ದೇನೆ’‌ ಎಂದರು.

‘ಸಾಮಾನ್ಯ ಜನ ಕೊರೊನಾದಿಂದ ದೂರ ಉಳಿಯಲು ಬಯಸುತ್ತಾರೆ. ಆದರೆ, ವೈದ್ಯರು ಇದರ ವಿರುದ್ಧವೇ ಹೋರಾಟಕ್ಕೆ ಇಳಿಯಬೇಕು. ಕೋವಿಡ್‌ ಲಕ್ಷಣಗಳು ಗೋಚರಿಸುವುದಿಲ್ಲ ಎಂಬುದೇ ದೊಡ್ಡ ಸವಾಲು. ನನ್ನಲ್ಲೂ ಯಾವುದೇ ಲಕ್ಷಣ ಇರಲಿಲ್ಲ. ಸ್ವಯಂ ಪ್ರೇರಣೆಯಿಂದ ತಪಾಸಣೆ ಮಾಡಿಸಿಕೊಂಡೆ, ನನ್ನ ಪತ್ನಿಗೂ ಮಾಡಿಸಿದೆ. ಇಬ್ಬರಲ್ಲೂ ವೈರಾಣು ಪತ್ತೆಯಾಯಿತು. ಆಮೇಲೆ ಅನ್ನಿಸಿತು; ಒಂದು ಸಣ್ಣ ಮಾಸ್ಕ್‌ ಧರಿಸಿದ್ದರೂ ನನಗೆ, ನನ್ನ ಕುಟುಂಬಕ್ಕೆ ಈ ಕಷ್ಟ ಬರುತ್ತಿರಲಿಲ್ಲ’ ಎಂದೂ ಪಶ್ಚಾತ್ತಾಪ ಪಟ್ಟರು.

‘ಮಾಸ್ಕ್‌– ಸ್ಯಾನಿಟೈಸರ್‌– ಅಂತರ’ ಈ ಮೂರನ್ನು ಪಾಲಿಸಿದರೆ ಕೋವಿಡ್‌ ಅಂಟುವುದಿಲ್ಲ. ಒಂದು ವೇಳೆ ಅಂಟಿಕೊಂಡರೆ ‘ರೋಗ ನಿರೋಧಕ ಶಕ್ತಿ– ಆತ್ಮಸ್ಥೈರ್ಯ– ಕ್ರಿಯಾಶೀಲತೆ’ ಈ ಮೂರು ಇದ್ದರೆ ಸಾಕು; ಖಂಡಿತವಾಗಿ ಗುಣವಾಗಬಹುದು. ಕೋವಿಡ್‌ಬಂದರೆ ಎಲ್ಲವೂ ಮುಗಿದೇ ಹೋಯಿತು ಎಂದುಕೊಳ್ಳುವ ಅಗತ್ಯವಿಲ್ಲ. ನಮ್ಮ ರೋಗ ನಿರೋಧಕ ಶಕ್ತಿ ಹೆಚ್ಚಿಸಿಕೊಳ್ಳುವುದೊಂದೇ ಪ‍ರಿಹಾರ’ ಎಂಬುದು ಅವರ ಕಿವಿಮಾತು.

‘ದಿನಗಳು ಕಳೆದಂತೆ ಇದು ಕೂಡ ಸಾಮಾನ್ಯ ಕಾಯಿಲೆ ಎನ್ನುವ ಹಂತಕ್ಕೆ ನಮ್ಮ ಮನೋಬಲ ವೃದ್ಧಿಸಬಹುದು. ರಕ್ತ, ಮೂತ್ರ ತಪಾಸಣೆಯ ಹಾಗೆ ಕೋವಿಡ್‌ ತಪಾಸಣೆಯೂ ಒಂದಾಗಬಹುದು’‌ ಎನ್ನುತ್ತಾರೆ ಅವರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT