ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಾನವ ಹಕ್ಕುಗಳ ರಕ್ಷಣೆಯ ಜವಾಬ್ದಾರಿ ಹೊತ್ತುಕೊಳ್ಳಿ

ಯುವಕರಿಗೆ ಕರೆ ನೀಡಿದ ಮಾನವ ಹಕ್ಕುಗಳ ಆಯೋಗದ ಸದಸ್ಯ ರೂಪಕ್‌ಕುಮಾರ ದತ್ತಾ
Last Updated 27 ಅಕ್ಟೋಬರ್ 2018, 19:30 IST
ಅಕ್ಷರ ಗಾತ್ರ

ಕಲಬುರ್ಗಿ: ‘ಸಂವಿಧಾನ ಜಾರಿಯಾದ ಮೇಲೆ ದೇಶದಲ್ಲಿ ಮಾನವ ಹಕ್ಕುಗಳ ಉಲ್ಲಂಘನೆಗೆ ತಡೆ ಬಿದ್ದಿತು. ಆದರೆ, ಇತ್ತೀಚಿನ ವರ್ಷಗಳಲ್ಲಿ ಸಾಮಾಜಿಕ ಹಾಗೂ ಸಂವಹನ ಕ್ಷೇತ್ರದಲ್ಲಿ ಆದ ಬದಲಾವಣೆಯಿಂದಾಗಿ ಈ ಹಾವಳಿ ಮತ್ತೆ ಹೆಚ್ಚಿದೆ. ಇಂಥ ಸಂದಿಗ್ಧ ಸ್ಥಿತಿಯ ನಿಯಂತ್ರಣಕ್ಕೆ ಯುವಸಮುದಾಯ ಮುಂದೆ ಬರಬೇಕು’ ಎಂದು ಮಾನವ ಹಕ್ಕುಗಳ ಆಯೋಗದ ಸದಸ್ಯ ರೂಪಕ್‌ಕುಮಾರ ದತ್ತಾ ಕರೆ ನೀಡಿದರು.

‘ಮಾನವ ಹಕ್ಕುಗಳ ಮೂಲಕ ಮಾನವನ ಜೀವನ ಪರಿವರ್ತಿಸುವಲ್ಲಿ ಯುವಕರ ಪಾತ್ರ’ ಕುರಿತು ಕರ್ನಾಟಕ ಪೀಪಲ್ಸ್ ಎಜುಕೇಷನ್ ಸೊಸೈಟಿ ಹಾಗೂ ವಿಶ್ವವಿದ್ಯಾಲಯಗಳ ಧನಸಹಾಯ ಆಯೋಗದ ಆಶ್ರಯದಲ್ಲಿ ನಗರದಲ್ಲಿ ಶನಿವಾರ ಆಯೋಜಿಸಿದ್ದ ರಾಷ್ಟ್ರೀಯ ಸಮ್ಮೇಳನ ಉದ್ಘಾಟಿಸಿ ಅವರು ಮಾತನಾಡಿದರು.

‘ದೇಶದ ಒಟ್ಟಾರೆ ಜನಸಂಖ್ಯೆಯಲ್ಲಿ ಯುವಕರ ಸಂಖ್ಯೆ ಹೆಚ್ಚಾಗಿರುವುದು ಹೆಮ್ಮೆಯ ಸಂಗತಿ. ಯುವಹೃದಯಗಳಿಂದ ಈ ದೇಶ ಬಹಳ ನಿರೀಕ್ಷೆ ಇಟ್ಟುಕೊಂಡಿದೆ. ಆಧುನಿಕ ಭಾರತವನ್ನು ಕಟ್ಟಿ ಬೆಳೆಸುವ ಜವಾಬ್ದಾರಿ ಹೊತ್ತುಕೊಳ್ಳಿ’ ಎಂದು ಅವರು ಹುರುದುಂಬಿಸಿದರು.

‘ಜೀವನ ಎಲ್ಲಕ್ಕಿಂತ ಬೆಲೆಬಾಳುವಂಥದ್ದು. ಅದರ ಮೌಲ್ಯಗಳನ್ನು ಹೆಚ್ಚಿಸುವುದು ಮಹತ್ವದ ಕೆಲಸ. ಜೀವನಕ್ರಮ ಪರಿಶುದ್ಧವಾಗಿದ್ದರೆ ಮಾತ್ರ ದೇಶ ಸಮೃದ್ಧವಾಗಿರುತ್ತದೆ. ಯುವಸಮುದಾಯ ಕಾನೂನು ಕೈಗೆ ತೆಗೆದುಕೊಳ್ಳುವ ಬದಲು ಅದರ ಅಡಿಯಲ್ಲೇ ಸಂರಕ್ಷಣಾ ಕಾರ್ಯ ಮಾಡಬೇಕು’ ಎಂದು ಕಿವಿಮಾತು ಹೇಳಿದರು.‌

ಮಾನವ ಹಕ್ಕುಗಳ ಕಾರ್ಯಕರ್ತ ಡಾ.ರವೀಂದ್ರನಾಥ ಶಾನಭಾಗ ಮಾತನಾಡಿ, ಮಾನವ ಹಕ್ಕುಗಳ ಉಲ್ಲಂಘನೆ ಮತ್ತು ಮಾನವ ಕಳ್ಳಸಾಗಣೆ ಪ್ರಕರಣಗಳು ಮಂಗಳೂರಿನಲ್ಲಿ ಹೆಚ್ಚಾಗಿ ಕಂಡುಬರುತ್ತಿವೆ. ಈ ಬಗ್ಗೆ ಅಲ್ಲಿನ ಯುವಸಮುದಾಯವನ್ನು ಜಾಗೃತಗೊಳಿಸಬೇಕಿದೆ’ ಎಂದರು.

‘ಮಕ್ಕಳು, ಮಹಿಳೆಯರು ಮಾತ್ರವಲ್ಲ; ಹಿರಿಯರೂ ಈಗ ಹಕ್ಕುಗಳಿಂದ ವಂಚಿತರಾಗುತ್ತಿದ್ದಾರೆ. ಎಲ್ಲ ಧರ್ಮಗಳಲ್ಲಿಯೂ ಎಲ್ಲ ಊರುಗಳಲ್ಲಿಯೂ ಹೆತ್ತವರನ್ನು ಮನೆಯಿಂದ ಹೊರಹಾಕುವ ಪ್ರಕರಣಗಳು ನಡೆದೇ ಇವೆ. ಇದಕ್ಕೆ ಕಲಬುರ್ಗಿ ಜಿಲ್ಲೆಯೂ ಹೊರತಾಗಿಲ್ಲ’ ಎಂದು ಬೇಸರ ವ್ಯಕ್ತಪಡಿಸಿದರು.

ಕೆಪಿಇ ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಮಾರುತಿರಾವ್ ಡಿ.ಮಾಲೆ ಅಧ್ಯಕ್ಷತೆ ವಹಿಸಿದ್ದರು. ಪ್ರಾಚಾರ್ಯ ಎಸ್‌.ಚಂದ್ರಶೇಖರ್‌, ಸಂಚಾಲಕ ಅನಂತ ಡಿ. ಚಿಂಚೂರೆ ಇದ್ದರು.

ಮಾದರಿಯಾದ ದಿವ್ಯಶ್ರೀ‌

ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದಲ್ಲಿ ಸಮಾಜವಿಜ್ಞಾನ ಓದುತ್ತಿರುವ, ಉಡುಪಿಯ ದಿವ್ಯಶ್ರೀ ಸಮಾವೇಶದಲ್ಲಿ ಗಮನಸೆಳೆದರು. ಆಳಂದ ತಾಲ್ಲೂಕಿನ ತೆಲ್ಲೂರು ಗ್ರಾಮದಲ್ಲಿ ಶೌಚಾಲಯ ನಿರ್ಮಿಸಿಕೊಳ್ಳಲು ಗ್ರಾಮಸ್ಥರನ್ನು ಪ್ರೇರೇಪಿಸಿ, ಅದರಲ್ಲಿ ಯಶಸ್ವಿಯಾದ ಹಿನ್ನೆಲೆಯಲ್ಲಿ ಈ ಸಾಧಕಿಗೆ ಗೌರವ ಸಲ್ಲಿಸಲಾಯಿತು.

ತೆಲ್ಲೂರು ಗ್ರಾಮಸ್ಥರು ಮಲ– ಮೂತ್ರ ವಿಸರ್ಜನೆಗೆ ಬಯಲನ್ನೇ ಅವಲಂಬಿಸಿದ್ದರು. ಇದನ್ನು ಕಂಡ ದಿವ್ಯಶ್ರೀ ಗ್ರಾಮಸ್ಥರಲ್ಲಿ ಶೌಚಾಲಯ ಬಗ್ಗೆ ಜಾಗೃತಿ ಮೂಡಿಸಲು ಮುಂದಾದರು. ಆರಂಭದಲ್ಲಿ ಸಾಕಷ್ಟು ತೊಂದರೆ ಅನುಭವಿಸಿದರು. ಆದರೂ ಹಠ ಬಿಡದೇ ಹಳ್ಳಿಯಲ್ಲಿ ಠಿಕಾಣೆ ಹೂಡಿ ಜನರ ಮನಸ್ಥಿತಿ ಬದಲಾಯಿಸಿದರು. ಪರಿಣಾಮ ಹಲವರು ಶೌಚಾಲಯ ನಿರ್ಮಿಸಿಕೊಂಡಿದ್ದಾರೆ ಎಂದು ಆಯೋಜಕರು ಮಾಹಿತಿ ನೀಡಿದರು.

***

ಭಾರತದ ಧರ್ಮಗ್ರಂಥಗಳಲ್ಲೇ ಮಾನವ ಹಕ್ಕುಗಳ ಬಗ್ಗೆ ವಿವರವಾಗಿ ಹೇಳಲಾಗಿದೆ. ಸಾವಿರಾರು ವರ್ಷಗಳ ಮುಂಚೆಯೇ ಈ ದೇಶದಲ್ಲಿ ಮಾನವ ಹಕ್ಕುಗಳನ್ನು ಗೌರವಿಸಲಾಗಿದೆ‌

ರೂಪಕ್‌ಕುಮಾರ ದತ್ತಾ, ಮಾನವ ಹಕ್ಕುಗಳ ಆಯೋಗದ ಸದಸ್ಯ

ಕರಾವಳಿ ಪ್ರದೇಶಗಳಲ್ಲಿ ಮಹಿಳೆ ಮತ್ತು ಮಕ್ಕಳ ಕಳ್ಳಸಾಗಣೆ ಹೆಚ್ಚಾಗಿದೆ. ನೆರೆಯ ಕೇರಳ, ಗೋವಾ ರಾಜ್ಯಗಳಲ್ಲೂ ಈ ಪ್ರಮಾಣ ಹೆಚ್ಚಿದೆ. ಅಂಥ ಜಾಗಗಳಲ್ಲೇ ಯುವಕರು ಜಾಗೃತಿಗೆ ಮುಂದಾಗಬೇಕು‌

ಡಾ.ರವೀಂದ್ರನಾಥ ಶಾನಭಾಗ,ಮಾನವ ಹಕ್ಕುಗಳ ಕಾರ್ಯಕರ್ತ

ಸಮಾಜ ಸುಧಾರಣೆಯಲ್ಲಿ ಕಾನೂನು ವಿದ್ಯಾರ್ಥಿಗಳ ಜವಾಬ್ದಾರಿ ಎಲ್ಲಕ್ಕಿಂತ ಹೆಚ್ಚು. ದೇಶದ ವಿವಿಧೆಡೆಯ 250ಕ್ಕೂ ಹೆಚ್ಚು ಯುವಮನಸ್ಸುಗಳು ಸಮ್ಮೇಳನಕ್ಕೆ ಸೇರಿದ್ದು ಖುಷಿ ತಂದಿದೆ

ಮಾರುತಿರಾವ್ ಡಿ.ಮಾಲೆ, ಕೆಪಿಇ‌ಪ್ರಧಾನ ಕಾರ್ಯದರ್ಶಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT