ವ್ಹಾ! ತಂದೂರಿ ಚಹಾ

7

ವ್ಹಾ! ತಂದೂರಿ ಚಹಾ

Published:
Updated:
Prajavani

ಕಲಬುರ್ಗಿ: ತಂದೂರಿ ರೋಟಿ, ತಂದೂರಿ ಚಿಕನ್‌ ಬಗ್ಗೆ ಕೇಳಿದ್ದೀರಿ. ತಂದೂರಿ ಚಹಾ ಬಗ್ಗೆ ಕೇಳಿದ್ದೀರಾ? ಈ ಚಹಾ ಎಲ್ಲಿಯಾದರೂ ಕುಡಿದಿದ್ದೀರಾ? ಅದರ ಸ್ವಾದದ ಪರಿ, ಪರಿಮಳ ಎಷ್ಟು ಆಹ್ಲಾದಕರ ಎಂಬುದನ್ನು ಅನುಭವಿಸಿದ್ದೀರಾ?

ಇಲ್ಲ ಎಂದಾದರೆ ಮಹಾನಗರ ಪಾಲಿಕೆ ಎದುರಿನ ಸುರೇಖಾ ಫಾಸ್ಟ್‌ಫುಡ್‌ ಮತ್ತು ಚಾಟ್ಸ್‌ ಸೆಂಟರ್‌ಗೆ ಹೋದರೆ ಸಾಕು. ಚಹಾ ಕುಡಿದ ತಾಸಿನ ನಂತರವೂ ಅದರ ಬಗ್ಗೆ ಮಾತನಾಡಲು ನಿಮ್ಮ ನಾಲಿಗೆ ಚಡಪಡಿಸುತ್ತದೆ. ಅಂಥ ರುಚಿಕಟ್ಟಾದ ‘ತಂದೂರಿ ಚಹಾ’ ಸಿಗುತ್ತದೆ.

ನಗರದ ಯುವಕ ಗಜಾನನ ಕಲಕೋಟೆ ತಂದೂರಿ ಚಹಾವನ್ನು ಪರಿಚಯಿಸಿದ್ದಾರೆ. ಎರಡು ತಿಂಗಳ ಹಿಂದಷ್ಟೇ ಈ ಹೋಟೆಲ್‌ ಆರಂಭವಾಗಿದ್ದರೂ ಹೆಸರು ಮಾಡಿದೆ.

ಕಿಡ್ನಿ ವೈಫಲ್ಯದಿಂದ ಗಜಾನನ ಅವರು ಕೆಲದಿನಗಳ ಹಿಂದೆ ನಿಧನರಾದರು. ಸದ್ಯ ಸೆಂಟರ್‌ ಮುಂದುವರಿಸಿದ್ದು ಅವರ ಸಹೋದರ ಸಚಿನ್‌.

ಬೆಂಗಳೂರಿನ ಜಸ್ಟ್‌ ಕ್ರಿಕೆಟರ್ಸ್‌ನಲ್ಲಿ ಸಚಿನ್‌ ಕೋಚ್‌ ಆಗಿದ್ದಾರೆ. ಸಹೋದರನ ಸಾವಿನ ಬಳಿಕ ಅವರ ತಂದೂರಿ ಚಹಾ ಸೆಂಟರ್‌ ಕನಸನ್ನು ನನಸು ಮಾಡಲು ಮರಳಿ ನಗರಕ್ಕೆ ಬಂದಿದ್ದಾರೆ. ಬಾಡಿಗೆ, ಆಹಾರ ಪದಾರ್ಥಗಳ ವೆಚ್ಚ, ನಾಲ್ಕು ಮಂದಿಗೆ ಸಂಬಳ ನೀಡಿದ ಮೇಲೂ ಕುಟುಂಬ ನಿರ್ವಹಣೆಗೆ ಬೇಕಾದಷ್ಟು ಆದಾಯವನ್ನು ಈ ಚಹಾ ತಂದುಕೊಡುತ್ತಿದೆ ಎನ್ನುತ್ತಾರೆ ಸಚಿನ್‌.

ಗಜಾನನ ಅವರು ಪುಣೆಯಲ್ಲಿ ಈ ಚಹಾ ಕುಡಿದಾಗ ಅದರ ಸ್ವಾದಕ್ಕೆ ಮಾರುಹೋಗಿ ಅಂಥದ್ದೇ ಚಹಾ ಸೆಂಟರ್‌ಅನ್ನು ತೆರೆಯುವ ಹಟ ತೊಟ್ಟರು. ಉದ್ಯಮಿಗಳಾದ ರಾಘವೇಂದ್ರ ಮೈಲಾಪುರ, ಗುರು ಭಾವಗಿ, ಅಮಿತ ಭಾವಗಿ ಸಹಾಯಕ್ಕೆ ನಿಂತರು.

ಮಾಡುವುದು ಸ್ಪೆಷಲ್‌? ಕುಡಿಯುವುದೂ ಸ್ಪೆಷಲ್‌?:

ಪಕ್ಕಾ ದೇಸಿ ಸ್ವಾದದ ಈ ಚಹಾ ಮಾಡುವ ಬಗೆ ಎಷ್ಟು ವಿಶಿಷ್ಟವೋ ಅದನ್ನು ಸವಿಯುವ ಬಗೆಯೂ ಅಷ್ಟೇ ವಿಶಿಷ್ಟ.
ಕೆಂಪು ಮಣ್ಣಿನ ದೊಡ್ಡ ಹೂಜಿ (ಭಟ್ಟಿ)ಯಲ್ಲಿ ಕುಳ್ಳುಗಳನ್ನು ಉರಿಸಲಾಗುತ್ತದೆ. ಅದರಲ್ಲಿ ಪುಟ್ಟ ಪುಟ್ಟ ಕರಿಮಣ್ಣಿನ ಕುಡಿಕೆಗಳನ್ನು ಹಾಕಿ ಸುಡಲಾಗುತ್ತದೆ. ಕುಡಿಕೆ ಸುಟ್ಟು ಪೂರ್ಣ ಕೆಂಪಾದ ಮೇಲೆ, ಮಾಡಿಟ್ಟುಕೊಂಡ ಚಹಾವನ್ನು ಕುಡಿಕೆಗೆ ಸುರಿಯುತ್ತಾರೆ. ಕುಡಿಕೆ ಮಣ್ಣಿನ ಘಮಲು, ಕುಳ್ಳಿನ ಹೊಗೆ ಎರಡೂ ಸೇರಿಕೊಂಡು ಚಹಾ ಬುಸುಬುಸು ಎಂದು ಸದ್ದು ಮಾಡುತ್ತ ಉಕ್ಕುತ್ತದೆ. ಅದನ್ನು ನೇರವಾಗಿ ಕಪ್‌ ಹಾಕಿದರೆ ಮುಗಿಯಿತು. ಸ್ವಾದಿಷ್ಟ ತಂದೂರಿ ಚಹಾ ರೆಡಿ.

ಅಷ್ಟೇ ಅಲ್ಲ. ಈ ಚಹಾವನ್ನು ಮಣ್ಣಿನ ಲೋಟದಲ್ಲೇ ಕುಡಿಯಬೇಕು. ಆಗ ಮಾತ್ರ ಅದರ ಮೂಲ ಸ್ವಾದ ನಾಲಿಗೆಗೆ, ಘಮಲು ಮೂಗಿಗೆ ಬಡಿಯುತ್ತದೆ.

ಕುಟುಂಬ ಸಮೇತ ಬನ್ನಿ:

ಪ್ರತಿ ದಿನ ಬೆಳಿಗ್ಗೆ ಮತ್ತು ಸಂಜೆ ಇಡ್ಲಿ, ವಡೆ, ಭಜ್ಜಿ, ಪಾವ್‌ಭಾಜಿ, ಪಾನಿಪೂರಿ ಸೇರಿದಂತೆ ಎಲ್ಲ ಬಗೆಯ ಕುರುಕಲು ತಿಂಡಿಗಳೂ ಈ ಸೆಂಟರ್‌ನಲ್ಲಿ ಸಿಗುತ್ತದೆ. ಫುಲ್‌ ಚಹಾಗೆ ₹ 25, ಹಾಫ್‌ಗೆ ₹ 20. ನಾಷ್ಟಾ ಮಾಡಿ ಒಂದು ತಂದೂರಿ ಚಹಾ ಕುಡಿದರೆ ಸಾಕು. ಮನಸ್ಸು ಉಲ್ಲಾಸಗೊಳ್ಳುತ್ತದೆ.

(ಹೆಚ್ಚಿನ ಮಾಹಿತಿಗೆ ಸಚಿನ್‌: 9916004267).

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !