ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತತ್ವಪದಗಳು ಕಾವ್ಯದ ಸಿಡಿಮದ್ದಿನ ನುಡಿಗಳು

ಸಮಾನಾಂತರ ವೇದಿಕೆಯಲ್ಲಿ ತತ್ವಪದ-ಸೂಫಿ-ಬೌದ್ಧ ಸಾಹಿತ್ಯ ಗೋಷ್ಠಿಯಲ್ಲಿ ಮಲ್ಲಿಕಾರ್ಜುನ ಕಡಕೋಳ
Last Updated 7 ಫೆಬ್ರುವರಿ 2020, 10:24 IST
ಅಕ್ಷರ ಗಾತ್ರ

ಡಾ. ಎಂ.ಎಸ್.ಲಠ್ಠೆ ವೇದಿಕೆ (ಕಲಬುರ್ಗಿ): ಕಡಕೋಳ ಮಡಿವಾಳಪ್ಪನವರು ರಚಿಸಿದ ತತ್ವಪದಗಳು ಜಾತಿ, ಮತ, ಧರ್ಮ ಮತ್ತು ಅವುಗಳ ಆಚರಣೆಗೆ ವಸ್ತುನಿಷ್ಠ ನಿರಾಕರಣೆ ತೋರುವ ಪ್ರತಿಭಟನಾ ಕಾವ್ಯದ ಸಿಡಿಮದ್ದಿನ ನುಡಿಗಳಾಗಿದ್ದವು ಎಂದು ಸಾಹಿತಿ ಮಲ್ಲಿಕಾರ್ಜುನ ಕಡಕೋಳ ಅಭಿಪ್ರಾಯಪಟ್ಟರು.

85ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಸಮಾನಾಂತರ ವೇದಿಕೆಯಲ್ಲಿ ಗುರುವಾರ "ತತ್ವಪದ-ಸೂಫಿ-ಬೌದ್ಧ ಸಾಹಿತ್ಯ' ಕುರಿತು ನಡೆದ ಗೋಷ್ಠಿಯಲ್ಲಿ ಮಾತನಾಡಿದ ಅವರು, ಸಮಾಜ ಸುಧಾರಣೆ ಕಾರ್ಯದಲ್ಲಿ ತತ್ವಪದಗಳು ಪ್ರಮುಖ ಪಾತ್ರ ನಿರ್ವಹಿಸಿದವು' ಎಂದರು.

"ತತ್ವಪದ ಸಾಹಿತ್ಯ' ಕುರಿತು ಉಪನ್ಯಾಸ ನೀಡಿದ ಅವರು, ಯಾವುದನ್ನು ಒಂದೆರಡು ಶತಮಾನಗಳ ಕಾಲ ಕನ್ನಡ ಸಾಹಿತ್ಯ ಚರಿತ್ರೆಕಾರರು ಕತ್ತಲೆ ಯುಗಗಳೆಂದು ಕರೆದರೋ ಅಂತಹ ಕತ್ತಲೆ ಯುಗಗಳ ಬಯಲಲ್ಲೇ ಹುಟ್ಟಿಕೊಂಡ ಮಹಾಬೆಳಕಿನ ವಜ್ರ ಜಲಪಾತ ಧಾರೆಗಳೇ ತತ್ವಪದಗಳು' ಎಂದರು.

ಇವತ್ತಿಗೂ ಅಮವಾಸ್ಯೆಯ ಕತ್ತಲು, ಹೆಣದ ಸಾನ್ನಿಧ್ಯ, ಊರಾಚೆಯ ಗವಿ, ಗುಡಿ, ಗುಂಡಾರ, ಗುಡಿಸಲು, ಗುಂಪಾ, ಕೊಂಪೆಗಳಲ್ಲಿ ಅನುರಣಿಸುವ ಹಾಡುಗಬ್ಬಗಳೇ ತತ್ವಪದಗಳು. ಅವು ಏಕಾಂತ ಮತ್ತು ಲೋಕಾಂತ ಎರಡರಲ್ಲೂ ಪ್ರಸ್ತುತಗೊಳ್ಳುವ ಗಾಯನ ಪ್ರಸ್ಥಾನಗಳು ಎಂದು ಅವರು ತಿಳಿಸಿದರು.

ತತ್ವಪದಕಾರರು ತಮ್ಮ ದೈನಂದಿನ ಬದುಕಿನಲ್ಲಿ ಕಂಡ ಹತ್ತು ಹಲವು ನೋವು, ನಲಿವು, ಸಾಮಾಜಿಕ ಅನಿಷ್ಟ, ಮನುಷ್ಯ ವಿರೋಧಿ ನಿಲುವುಗಳನ್ನು, ಪ್ರಭುತ್ವದ ಅನಾಚಾರಗಳನ್ನು ಯಾವು ಭಿಡೆ, ಮುಲಾಜು, ಮುರವತ್ತುಗಳಿಗೆ ಎಡೆ ಮಾಡಿಕೊಡದೇ ಪದಗಳ ಮೂಲಕ ಜಾಡಿಸಿ, ಹಾಡಿ ಪ್ರತಿಭಟಿಸಿದರು ಎಂದು ಅವರು ನೆನಪಿಸಿಕೊಂಡರು.

ನಿರಕ್ಷರಿಗಳ ಈ ಸಾಕ್ಷರ ಮಂತ್ರಗಳು ಇತ್ತೀಚೆಗೆ ಗ್ರಂಥಗಳ ರೂಪದಲ್ಲಿ ಪ್ರಕಟಗೊಂಡಿವೆ. ತತ್ವಪದಗಳನ್ನು ಓದಿ ಅರಿಯುವ ಬದಲು ಹಾಡಿ ಇಲ್ಲವೇ ಹಾಡಿದ್ದನ್ನು ಆಲಿಸಿ, ಅರಿಯುವುದೇ ಸೂಕ್ತ. ಆಗ ಆ ಪದಗಳು ಮನಸ್ಸಿಗೆ ಮುಟ್ಟಿ ಹೆಚ್ಚು ಅರ್ಥ ಆಗಬಲ್ಲವು ಎಂದು ಅವರು ತಿಳಿಸಿದರು.

ನೂರಾರು ವರ್ಷಗಳ ಹಿಂದೆ ಯಾರೂ ಸಹ ಈ ಸಾಹಿತ್ಯವನ್ನು ಲೆಕ್ಕಣಿಕೆ ಹಿಡಿದು ಹಾಳೆಗಳ ಮೇಲೆ ಬರೆಯಲಿಲ್ಲ. ಅದು ಗುರು-ಶಿಶುಮಕ್ಕಳ ಮುಖಾಬಿಲೆಯಲ್ಲಿ ಜರುಗುವ ದೇಹ ಮತ್ತು ಧ್ವನಿಗಳ ಅನುಸಂಧಾನ. ಆಯಾಕಾಲದ ಸಾಮಾಜಿಕ ಘಟನೆಗಳ ಸಂದರ್ಭದಲ್ಲಿ ಹಾಡುಗಳಾಗಿ ಹುಟ್ಟಿಕೊಂಡ ತತ್ವಪದವು ಪ್ರತಿಭಟನೆಯ ಕಾವ್ಯ. ಹಾಗಂತ ಇವುಗಳನ್ನು ಪ್ರತಿಭಟನೆಯ ಪಂಥಕ್ಕಷ್ಟೆ ಸೀಮಿತಗೊಳಿಸಬಾರದು ಎಂದು ಅವರು ತಿಳಿಸಿದರು.

"ಬೌದ್ಧ ಸಾಹಿತ್ಯ ಮತ್ತು ನೆಲೆಗಳು' ಕುರಿತು ಉಪನ್ಯಾಸ ನೀಡಿದ ದೇವೇಂದ್ರ ಹೆಗ್ಗಡೆ, ಬೌದ್ಧ ಸಾಹಿತ್ಯವು ಪ್ರಾಕೃತಿಕ ಭಾಷೆಯಲ್ಲಿ ಸಿಕ್ಕಿದ್ದೇ ಹೆಚ್ಚು. 6ನೇ ಶತಮಾನದಲ್ಲಿ ಬ್ರಾಹ್ಮಣಶಾಹಿ ವ್ಯವಸ್ಥೆಗೆ ಬೌದ್ಧ ಸಾಹಿತ್ಯವು ಸವಾಲು ಒಡ್ಡಿದವು' ಎಂದು ಅವರು ತಿಳಿಸಿದರು.

"ಬುದ್ಧ ಸಾಹಿತ್ಯ ಮತ್ತು ಚಿಂತನೆಗಳು ಹಂತಹಂತವಾಗಿ ದೇಶ ಮತ್ತು ವಿಶ್ವವ್ಯಾಪಿ ಆವರಿಸಿದವು ಅಲ್ಲದೇ ಮೂಢನಂಬಿಕೆ ಮತ್ತು ಕಂದಾಚಾರವನ್ನು ಪ್ರಶ್ನಿಸಿದವು. ಹೊಸ ಆಲೋಚನೆಗಳನ್ನು ಮೂಢಿಸಿಕೊಳ್ಳಲು ಕಾರಣವಾದವು ಎಂದು ಅವರು ತಿಳಿಸಿದರು.

‘ಬಿಂಬಸಾರ, ಅಜಾತಶತ್ರು, ಅಶೋಕ, ಕನಿಷ್ಕ, ಹರ್ಷವರ್ಧನದಂತಹ ರಾಜರ ಮೇಲೆ ಬೌದ್ಧ ಚಿಂತನೆಗಳು ಪ್ರಭಾವ ಬೀರಿದವು. ಈ ವಿಚಾರಧಾರೆಯು ಇಡೀ ಭಾರತವಲ್ಲದೇ ಟಿಬೆಟ್, ಚೀನಾ, ಜಪಾನ್ ಮತ್ತು ಇಂಡೋನೇಷ್ಯಾಕ್ಕೂ ವ್ಯಾಪಿಸಿತು' ಎಂದು ಅವರು
ತಿಳಿಸಿದರು.

7ನೇ ಶತಮಾನದ ಅಂಚಿನಲ್ಲಿ ಬೌದ್ಧ ಚಿಂತನೆಯ ಪ್ರಭಾವವು ದೇಶದಲ್ಲಿ ಮಹತ್ವ ಕಳೆದುಕೊಳ್ಳತೊಡಗಿತು. ಹಿಂದೂ ಧರ್ಮದ ಪ್ರಭಾವ ಹೆಚ್ಚಾಗತೊಡಗಿತು. ಮೂತರ್ಿಗಳ ಆರಾಧನೆ ಜೊತೆಗೆ ಸಂಸ್ಕೃತ ಭಾಷೆಯ ಬಳಕೆಯು ಪ್ರಭಾವವು ಎಲ್ಲೆಡೆ ವ್ಯಾಪಿಸತೊಡಗಿತು ಎಂದು ಅವರು ತಿಳಿಸಿದರು.

"ಸೂಫಿ ಸಾಹಿತ್ಯ' ಕುರಿತು ವಿಷಯ ಮಂಡಿಸಿದ ಪವರ್ಿನ್ ಸುಲ್ತಾನ, ಸೂಫಿ ಎಂಬ ಪದವು ಅರಬ್ ಭಾಷೆಯಿಂದ ಬಂದಿದೆ. ಇಸ್ಲಾಂ ಧರ್ಮದ ಪ್ರಾಮುಖ್ಯತೆ ಸಾಧಿಸುವಲ್ಲಿ ಸುಫಿ ವಿಚಾರಧಾರೆಯ ದಟ್ಟ ಪ್ರಭಾವವಿದೆ. ಸಮಾಜದಲ್ಲಿನ ಅನಿಷ್ಟವನ್ನು ತೊಡೆದು ಹಾಕುವಲ್ಲಿ ಮಹತ್ವದ ಪಾತ್ರ ನಿರ್ವಹಿಸಿದ ಸೂಫಿ ಚಿಂತನೆಯೂ ಎಲ್ಲರನ್ನೂ ಪ್ರೀತಿ ಮತ್ತು ಸಮಾನತೆಯ ಪರಿಭಾಷೆಯೊಂದಿಗೆ ಒಂದುಗೂಡಿಸಿತು ಎಂದರು.

ಅರೇಬಿಯ, ಬಸ್ರಾ, ಖುಫಾ, ಕಾರಿಯೊ, ಬಾಗ್ದಾದ್, ಡಾಮಸ್ಕಸ್ ಮುಂತಾದ ದೇಶಗಳಲ್ಲಿ ಸೂಫಿ ಸಂಸ್ಕೃತಿಯು ಈಗಲೂ ತನ್ನ ಪ್ರಭಾವ ಕಾಯ್ದುಕೊಂಡಿದೆ ಎಂದು ಅವರು ತಿಳಿಸಿದರು.

ವರ್ಷ 1192ರಲ್ಲಿ ಭಾರತಕ್ಕೆ ಬಂದ ಪ್ರಸಿದ್ಧ ಸೂಫಿ ಸಂತ ಖ್ವಾಜಾ ಮೈನುದ್ದಿನ ಚಿಸ್ತಿ ಅವರು ಲಾಹೋರ್ ಮತ್ತು ದೆಹಲಿಯಲ್ಲಿ ದೀರ್ಘ ಕಾಲದವರೆಗೆ ವಾಸವಿದ್ದರು. ನಂತರ ಅವರು ಅಜ್ಮೇರಗೆ ಬಂದರು. ಖ್ವಾಜಾ ಅವರ ಅನುಯಾಯಿ ಶೇಖ್ ಹಮಿದುದ್ದೀನ್ ನಗೋರಿ ಅವರು ರಾಜಸ್ಥಾನ ಪ್ರದೇಶವನ್ನ ಮುಖ್ಯ ಸೂಫಿ ಕೇಂದ್ರವನ್ನು ಮಾಡಿದರು ಎಂದು ಅವರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT