ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

PV Web Exclusive | ಕಲಬುರ್ಗಿ ಚಾಯ್ ಹೈ ಲಾಜವಾಬ್!

ಟೀ ಪಾಯಿಂಟ್‌ನಲ್ಲಿ ಚಹಾ ಸವಿಯುವುದೇ ಖುಷಿ; ದೀರ್ಘ ಕಾಲದಿಂದ ಸ್ಥಿರ ದರ
Last Updated 14 ನವೆಂಬರ್ 2020, 4:14 IST
ಅಕ್ಷರ ಗಾತ್ರ

ಕಲಬುರ್ಗಿ: ‘ಕಲಬುರ್ಗಿಯ ಸುಡು ಬಿಸಿಲಿನಲ್ಲಿ ನಿಮ್ಮ ಮನಸ್ಸು, ದೇಹ ಕೊಂಚ ನಿರಾಳವಾಗಬೇಕಿದ್ದರೆ ಮತ್ತು ಆಯಾಸ ನೀಗಿಸಿಕೊಳ್ಳಬೇಕಿದ್ದರೆ, ಬಿಸಿ ಬಿಸಿ ಚಹಾನೇ ಕುಡಿಯಬೇಕು. ಕಬ್ಬಿನ ಹಾಲು, ತಣ್ಣನೆಯ ಪಾನೀಯಗಿಂತ ಹೆಚ್ಚು ಹಿತ ಅನಿಸುತ್ತದೆ’.

ನೀವು ಹೊರ ಊರಿನವರಾಗಿದ್ದು, ಕಲಬುರ್ಗಿಯಲ್ಲಿ ಬಹುದಿನಗಳ ಬಳಿಕ ಸಿಗುವ ಗೆಳೆಯನನ್ನು ಕಬ್ಬಿನ ಹಾಲು ಇಲ್ಲವೇ ಪಾನೀಯ ಕುಡಿಯಲು ಆಹ್ವಾನಿಸಿದರೆ ಸಾಕು, ಈ ಮಾತು ತಡವಿಲ್ಲದೇ ವ್ಯಕ್ತವಾಗುತ್ತದೆ.

‘ಸುಡು ಬಿಸಿಲಿನಲ್ಲಿ ನಾಲಿಗೆ ಬೆಚ್ಚಗೆ ಮಾಡುವ ಬಿಸಿಬಿಸಿ ಚಹಾ, ದೇಹಕ್ಕೆ ಚೈತನ್ಯ ನೀಡುತ್ತದೆ. ಉತ್ಸಾಹ ಪುಟಿದೇಳಿಸುತ್ತದೆ. ಅದಕ್ಕೆ ಇಲ್ಲಿನ ಬಹುತೇಕ ಮಂದಿ ತಂಪು ಪಾನೀಯಗಳಿಗಿಂತ ಚಹಾ ಜಾಸ್ತಿ ಕುಡಿಯುತ್ತಾರೆ’ ಎಂಬ ವಿಷಯವು ನಿಧಾನವಾಗಿ ಬೆಳಕಿಗೆ ಬರುತ್ತದೆ.

ಇದಕ್ಕೆ ಪೂರಕವಾಗಿ ಇಡೀ ಕಲಬುರ್ಗಿಯಲ್ಲೊಂದು ಸುತ್ತು ಹಾಕಿದರೆ, ಈ ಚಹಾ ಅದೆಷ್ಟು ಪ್ರಭಾವಶಾಲಿ ಎಂಬ‌ ಅರಿವು ಬಾರದೇ ಇರುವುದಿಲ್ಲ. ನಗರದ ಹೊರ ಮತ್ತು ಒಳವಲಯದಲ್ಲಿ ಯಾವುದೇ ಬೀದಿಗೆ ಹೋದರೂ ತಂಪು ಪಾನೀಯ ಅಂಗಡಿಗಳಿಗಿಂತ ‘ಟೀ ಪಾಯಿಂಟ್’ ಎಂಬ ಚಹಾದ ಸಣ್ಣಪುಟ್ಟ ಡಬ್ಬಿ ಅಂಗಡಿಗಳು ಕಾಣುತ್ತವೆ. ಮುಂಜಾವು ಮತ್ತು ಸಂಜೆ ವೇಳೆ ಅಲ್ಲಲ್ಲಿ ಚಹಾ ನೀಡುವ ತಳ್ಳುವ ಗಾಡಿಗಳು ಕಾಣಸಿಗುತ್ತವೆ.

ವಾಯು ವಿಹಾರದ ನಂತರ ಮತ್ತು ಸ್ನೇಹಿತರ ಜೊತೆ ಕೆಲ ಹೊತ್ತು ಮಾತನಾಡುತ್ತ ಚಹಾ ಕುಡಿಯಬೇಕೆಂದು ಅನ್ನಿಸಿದರೂ ಕೆಲವರು ದೊಡ್ಡ ಹೋಟೆಲ್‌ಗಳಿಗೆ ಹೋಗುವ ಬದಲು ‘ಟೀ ಪಾಯಿಂಟ್‌’ಗಳಲ್ಲೇ ಚಹಾ ಕುಡಿಯಲು ಇಷ್ಟಪಡುತ್ತಾರೆ. ಚಹಾ ಪ್ರಿಯರು ಹೆಚ್ಚಿನ ಸಂಖ್ಯೆಯಲ್ಲಿ ಇರುವ ಕಾರಣ ಒಂದೊಂದು ರಸ್ತೆಯಲ್ಲಿ ಹೆಚ್ಚು ಅಂತರವಿಲ್ಲದೇ ಮೂರು–ನಾಲ್ಕು ಚಹಾ ಪಾಯಿಂಟ್‌ಗಳಿವೆ.

ದೀರ್ಘ ಕಾಲದಿಂದ ಸ್ಥಿರ ದರ

ಇಂಧನ ದರ ಏರಿಕೆಯಾದಾಗ, ಸಹಜವಾಗಿಯೇ ಬಸ್-ರೈಲುಗಳ ಪ್ರಯಾಣ ದರ ಏರಿಕೆಯಾಗುತ್ತದೆ. ಅಡುಗೆ ಅನಿಲ ಸೇರಿದಂತೆ ಇತರೆ ಅಗತ್ಯ ವಸ್ತುಗಳ ಬೆಲೆ ಏರಿಕೆಯಾದ ಸಂದರ್ಭದಲ್ಲೂ ವಸ್ತುಗಳ ಕೊಳ್ಳುವಿಕೆ ಮತ್ತು ಜೀವನಶೈಲಿ ಮೇಲೆ ಪರಿಣಾಮ ಬೀರುತ್ತದೆ. ಆದರೆ, ಎಷ್ಟೇ ಬೆಲೆ ಏರಿಕೆಯಾದರೂ ಚಹಾ ದರದಲ್ಲಿ ಮಾತ್ರ ಏರಿಕೆ ಆಗಿಲ್ಲ.

‘ಚಹಾಪುಡಿ, ಸಕ್ಕರೆ ಮತ್ತು ಹಾಲಿನ ದರ ಆಗಾಗ್ಗೆ ಏರಿಕೆಯಾಗುತ್ತಲೇ ಇರುತ್ತದೆ. ಆದರೆ, ಚಹಾ ದರದಲ್ಲಿ ಹೆಚ್ಚು ವ್ಯತ್ಯಾಸ ಕಂಡು ಬಂದಿಲ್ಲ. ಹಲವು ವರ್ಷಗಳಿಂದ ₹ 5 ಸ್ಥಿರ ದರವಿದ್ದು. ಕೆಲ ಕಡೆ ಅದರಲ್ಲೂ ಹೋಟೆಲ್‌, ಉಪಾಹಾರ ಮಂದಿರ ಮತ್ತು ದರ್ಶಿನಿಗಳಲ್ಲಿ ಅದರ ದರ ₹ 10 ರಿಂದ ₹ 20ಕ್ಕೆ ಏರಿಕೆಯಾಗಿದೆ. ಕಡಿಮೆ ದರದಲ್ಲಿ ಶಕ್ತಿ ನೀಡುವ ಪೇಯವನ್ನು ಯಾರೂ ತಾನೇ ಕುಡಿಯಲು ಇಷ್ಟಪಡುವುದಿಲ್ಲ' ಎಂದು ಸಂಗಮೇಶ್ವರ ಕಾಲೊನಿ ನಿವಾಸಿ ಸಿದ್ದಪ್ಪಸ್ವಾಮಿ ಹೇಳುತ್ತಾರೆ.

‘ಲಾಕ್‌ಡೌನ್ ಸಂದರ್ಭದಲ್ಲಿ ಹೋಟೆಲ್‌ಗಳು ಅಲ್ಲದೇ ಬಹುತೇಕ ಟೀ ಪಾಯಿಂಟ್‌ಗಳು ಮುಚ್ಚಲ್ಪಟ್ಟಿದ್ದವು. ಹೋಟೆಲ್ ಕಾರ್ಮಿಕರು ಮತ್ತು ಸಣ್ಣಪುಟ್ಟ ಅಂಗಡಿಯವರು ತುಂಬಾ ಸಂಕಷ್ಟಕ್ಕೀಡಾದರು. ಆರ್ಥಿಕ ಸಮಸ್ಯೆಯಿಂದ ನಲುಗಿದರು. ಲಾಕ್‌ಡೌನ್ ತೆರವಾದ ನಂತರವೂ ಬದುಕು ಕಟ್ಟಿಕೊಳ್ಳಲು ಪ್ರಯಾಸಪಟ್ಟರು. ಕೆಲವಷ್ಟು ದಿನ ಜನರು ಚಹಾ ಕುಡಿಯಲು ಹಿಂದೇಟು ಹಾಕಿದರು. ನಿರಾಸೆಯಾಯಿತು. ಆದರೆ, ನಾವು ಚಹಾ ದರವನ್ನು ಏರಿಕೆ ಮಾಡಲಿಲ್ಲ’ ಎಂದು ಟೀ ಪಾಯಿಂಟ್‌ನ ಮಸ್ತಾನ್ ತಿಳಿಸಿದರು.

ಯುವಜನರಿಗೆ, ಹಿರಿಯರಿಗೂ ಇಷ್ಟ

‘ಲಾಕ್‌ಡೌನ್‌ ನಂತರದ ಅವಧಿಯಲ್ಲಿ ಆಟೊರಿಕ್ಷಾ ಪ್ರಯಾಣ ದರ ₹ 5 ರಿಂದ ₹ 10ಕ್ಕೆ ಮತ್ತು ₹ 10 ರಿಂದ 20ಕ್ಕೆ ಏರಿಕೆಯಾಗಿದೆ. ಆದರೆ, ಚಹಾ ದರದಲ್ಲಿ ಮಾತ್ರ ಅಂತಹ ವ್ಯತ್ಯಾಸ ಕಂಡು ಬಂದಿಲ್ಲ. ಗ್ರಾಹಕರಿಗೆ ₹ 5 ರೂಪಾಯಿ ದರದಲ್ಲಿ ಚಹಾ ಕುಡಿದು ರೂಢಿಯಾಗಿದೆ. ಕೆಲವಷ್ಟು ಮಂದಿ ಕಾಯಂ ಗ್ರಾಹಕರು ಇದ್ದಾರೆ. ಅವರಿಗೆ ನಮ್ಮ ಟೀ ಪಾಯಿಂಟ್‌ನಲ್ಲಿ ಚಹಾ ಕುಡಿದರೇನೆ ಖುಷಿ’ ಎಂದು ಬಸವ ಟೀ ಪಾಯಿಂಟ್‌ನ ರವಿ ತಿಳಿಸಿದರು.

‘ಯುವಜನರು ಮತ್ತು ವೃದ್ಧರು ಅಂಗಡಿಗೆ ಬರುತ್ತಾರೆ. ಅವರ ಇಚ್ಛೆಯನುಸಾರ ಸ್ಟ್ರಾಂಗ್, ಶುಗರ್‌ಲೆಸ್‌, ಬ್ಲ್ಯಾಕ್‌ ಟೀ ಮಾದರಿಯಲ್ಲಿ ಚಹಾ ಮಾಡಿಕೊಡುತ್ತೇವೆ. ಇಡೀ ದಿನ ನಿಂತು ದುಡಿದ ಆಯಾಸವು ಗ್ರಾಹಕರ ಮೆಚ್ಚುಗೆ, ಸಮಾಧಾನದೊಂದಿಗೆ ಮರೆಯಾಗುತ್ತದೆ’ ಎಂದರು.

‘ಟೀ ಪಾಯಿಂಟ್’ ಎಂಬ ಬ್ರ್ಯಾಂಡ್

ಟೀ ಪಾಯಿಂಟ್‌ಗಳು ತಮ್ಮದೇ ಆದ ‘ಬ್ರ್ಯಾಂಡಿಂಗ್’ ಹೊಂದಿವೆ ಮತ್ತು ನಿಗದಿತ ಸ್ಥಳಗಳಲ್ಲಿ ಅವು ಜನಪ್ರಿಯತೆ ಗಳಿಸಿವೆ. ಕೆಲ ಕಡೆ ದೇವರ ಹೆಸರಿನಲ್ಲಿ, ಇನ್ನೂ ಕೆಲ ಕಡೆ ಕರ್ನಾಟಕದ ಹೆಸರಿನಲ್ಲಿ ಟೀ ಪಾಯಿಂಟ್‌ಗಳಿವೆ. ಗಾಣಗಾಪುರ, ಬಸವೇಶ್ವರ, ಕಲ್ಯಾಣ ಕರ್ನಾಟಕ ಮುಂತಾದ ಹೆಸರುಗಳಲ್ಲಿ ಟೀ ಪಾಯಿಂಟ್‌ಗಳನ್ನು ಅಲ್ಲಲ್ಲಿ ಕಾಣಬಹುದು.

ಜಿಲ್ಲಾ ನ್ಯಾಯಾಲಯ, ಕೇಂದ್ರ ಬಸ್‌ ನಿಲ್ದಾಣ, ಸರ್ದಾರ್ ವಲ್ಲಭ್‌ ಭಾಯ್ ಪಟೇಲ್ ರಸ್ತೆ, ಜಗತ್‌ ವೃತ್ತ, ಸೂಪರ್ ಮಾರ್ಕೆಟ್, ಸೇಡಂ ರಸ್ತೆಯ ಬಸವೇಶ್ವರ ಆಸ್ಪತ್ರೆ ಬಳಿ ಮುಂತಾದ ಕಡೆಯಿರುವ ಟೀ ಪಾಯಿಂಟ್‌ಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಚಹಾ ಪ್ರಿಯರು ಸಿಗುತ್ತಾರೆ.

ಕೆಲ ಟೀ ಪಾಯಿಂಟ್‌ನವರು ತಮ್ಮ ಕುಟುಂಬದ ಅಥವಾ ಊರಿನ ಹೆಸರನ್ನು ಇಟ್ಟುಕೊಂಡಿದ್ದರೆ, ಇನ್ನೂ ಕೆಲವರು ಪ್ರಸ್ತುತ ದಿನಮಾನಕ್ಕೆ ತಕ್ಕಂತೆ ಅತ್ಯಾಧುನಿಕ ಹೆಸರುಗಳನ್ನು ಇಟ್ಟುಕೊಂಡಿದ್ದಾರೆ. ಸೂಕ್ಷ್ಮವಾಗಿ ಹುಡುಕಾಡಿದರೆ, ಅಲ್ಲಲ್ಲಿ ಸಾಮಾಜಿಕ ಜಾಲತಾಣದ ಆ್ಯಪ್‌ಗಳಾದ ‘ಟಿಕ್‌ಟಾಕ್‌’, ‘ಪಬ್‌ಜಿ’ ಹೆಸರಿನ ಟೀ ಪಾಯಿಂಟ್‌ಗಳು ಕಾಣಿಸದೇ ಇರುವುದಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT