ಶುಕ್ರವಾರ, ಅಕ್ಟೋಬರ್ 22, 2021
21 °C
ಪ್ರಜಾವಾಣಿ ಫಲಶ್ರುತಿ

ಕಲಬುರ್ಗಿ: ವಿದ್ಯಾರ್ಥಿನಿ ಮೇಲೆ ಹಲ್ಲೆ ಪ್ರಕರಣ, ಶಿಕ್ಷಕರಿಗೆ ನೋಟಿಸ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕಲಬುರ್ಗಿ: ಕಾಳಗಿ ತಾಲ್ಲೂಕಿನ ರೇವಗ್ಗಿಯ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಗಾಂಧಿ ಜಯಂತಿಯಂದು ಸ್ವಚ್ಛತಾ ಕಾರ್ಯ ಸರಿಯಾಗಿ ಮಾಡಿಲ್ಲ ಎಂದು ಎಸ್ಸೆಸ್ಸೆಲ್ಸಿ ವಿದ್ಯಾರ್ಥಿನಿಗೆ ಥಳಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಶಾಲೆಯ ಪ್ರಭಾರ ಪ್ರಾಚಾರ್ಯ ಮರೆಪ್ಪ ಸುರಪುರ ಹಾಗೂ ದೈಹಿಕ ಶಿಕ್ಷಣ ಶಿಕ್ಷಕ ಮಲ್ಕಪ್ಪ ಬಿರಾದಾರಗೆ ಬಿಸಿಎಂ ಇಲಾಖೆಯ ಜಿಲ್ಲಾ ಅಧಿಕಾರಿ ರಮೇಶ ಸಂಗಾ ಅವರು ಕಾರಣ ಕೇಳಿ ನೋಟಿಸ್ ಜಾರಿಗೊಳಿಸಿದ್ದಾರೆ.

ಹಲ್ಲೆ ನಡೆಸಿದ ಕುರಿತು ಬುಧವಾರ ‘ಪ್ರಜಾವಾಣಿ’ ವರದಿ ಪ್ರಕಟಿಸಿತ್ತು. ಹೀಗಾಗಿ, ಸ್ಥಳಕ್ಕೆ ದೌಡಾಯಿಸಿದ ರಮೇಶ ಸಂಗಾ ಅವರು ಶಾಲೆಯ ಪ್ರಾಚಾರ್ಯರು ಹಾಗೂ ವಿದ್ಯಾರ್ಥಿನಿಗೆ ಥಳಿಸಿರುವ ಆರೋಪ ಎದುರಿಸುತ್ತಿರುವ ದೈಹಿಕ ಶಿಕ್ಷಣ ಶಿಕ್ಷಕ ಮಲ್ಕಪ್ಪ ಬಿರಾದಾರ ಅವರನ್ನು ವಿಚಾರಣೆಗೊಳಪಡಿಸಿದರು. ಅಲ್ಲದೇ, ವಿದ್ಯಾರ್ಥಿನಿಯರಿಂದ ಮಾಹಿತಿ ಪಡೆದರು.

ಥಳಿತಕ್ಕೊಳಗಾದ ವಿದ್ಯಾರ್ಥಿನಿಯನ್ನು ಪೋಷಕರು ತಮ್ಮ ಊರಿಗೆ ಕರೆದುಕೊಂಡು ಹೋಗಿದ್ದರು. ಅವರ ಪೋಷಕರಿಗೆ ಕರೆ ಮಾಡಿ ಮಾಹಿತಿ ಪಡೆದರು. ಮುಂದೆ ಹೀಗಾಗದಂತೆ ಎಚ್ಚರ ವಹಿಸಲಾಗುವುದು. ಹೀಗಾಗಿ, ಶಾಲೆಗೆ ಮಗಳನ್ನು ತಂದು ಬಿಡುವಂತೆ ಮನವೊಲಿಸಿದರು. ಶಾಲೆಯಲ್ಲಿರುವ ವಿದ್ಯಾರ್ಥಿನಿಯರು ಮಲ್ಕಪ್ಪ ಅವರು ಹಲ್ಲೆ ನಡೆಸಿದ ಬಗ್ಗೆ ಮಾಹಿತಿ ನೀಡಿದರು.

ವಿಚಾರಣೆ ಪೂರ್ಣಗೊಳಿಸಿದ ಬಳಿಕ ಸಂಗಾ ಇಬ್ಬರಿಗೂ ನೋಟಿಸ್ ಜಾರಿಗೊಳಿಸಿದರು. ಎರಡು ದಿನಗಳ ಒಳಗಾಗಿ ಸಮಜಾಯಿಷಿ ನೀಡುವಂತೆ ತಿಳಿಸಿದ್ದಾರೆ.

ಕರ್ತವ್ಯದಿಂದ ಬಿಡುಗಡೆಗೆ ಶಿಫಾರಸು: ವಿದ್ಯಾರ್ಥಿನಿಗೆ ಮಲ್ಕಪ್ಪ ಬಿರಾದಾರ ಥಳಿಸಿರುವುದು ದೃಢಪಟ್ಟಿದೆ. ಹೀಗಾಗಿ, ಅವರನ್ನು ಶಾಲೆಯ ಕರ್ತವ್ಯದಿಂದ ಬಿಡುಗಡೆಗೊಳಿಸಲು ಕೇಂದ್ರ ಕಚೇರಿಗೆ ಶಿಫಾರಸು ಮಾಡಲಾಗುವುದು ಎಂದು ಕ್ರೈಸ್ ಜಿಲ್ಲಾ ಸಂಯೋಜಕ ಶಿವರಾಮ ಚವ್ಹಾಣ ತಿಳಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು