ಸೋಮವಾರ, ಡಿಸೆಂಬರ್ 9, 2019
20 °C
ವಿವಿಧ ಖಾಸಗಿ ಶಾಲೆ, ಕಾಲೇಜುಗಳ ಒಕ್ಕೂಟದಿಂದ ಪ್ರತಿಭಟನೆ

ಶಾಲಾ ಶಿಕ್ಷಕರಿಗೆ ವೇತನಾನುದಾನ ನೀಡಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕಲಬುರ್ಗಿ: ‘ಖಾಸಗಿ ಶಾಲೆಗಳಿಗೂ ಅನುದಾನ ನೀಡಬೇಕು. ಅನುದಾನರಹಿತ ಶಾಲಾ–ಕಾಲೇಜುಗಳಿಗೆ 371(ಜೆ) ಕಾಯ್ದೆಯಡಿ ವೇತನಾನುದಾನ ಮತ್ತು ಮೂಲ ಸೌಕರ್ಯಗಳಿಗೆ ಹಣ ಬಿಡುಗಡೆ ಮಾಡಬೇಕು’ ಎಂದು ಕಲ್ಯಾಣ ಕರ್ನಾಟಕ ಖಾಸಗಿ ಶಾಲಾ ಕಾಲೇಜುಗಳ ಒಕ್ಕೂಟ, ಕರ್ನಾಟಕ ರಾಜ್ಯ ಖಾಸಗಿ ಕಾಲೇಜುಗಳ ಆಡಳಿತ ಮಂಡಳಿ ಮತ್ತು ನೌಕರರ ಹೋರಾಟ ಸಮನ್ವಯ ಸಮಿತಿ ಹಾಗೂ ಹೈದರಾಬಾದ್‌ ಕರ್ನಾಟಕ ಶಿಕ್ಷಣ ಸಂಸ್ಥೆಗಳ ಒಕ್ಕೂಟಗಳ ವತಿಯಿಂದ ಶನಿವಾರ ಇಲ್ಲಿ ಪ್ರತಿಭಟನೆ ನಡೆಸಲಾಯಿತು.

ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಸರ್ದಾರ್‌ ವಲ್ಲಭಭಾಯಿ ಪಟೇಲ್‌ ವೃತ್ತದಿಂದ ಜಿಲ್ಲಾಧಿಕಾರಿ ಕಚೇರಿವರೆಗೆ ಪ್ರತಿಭಟನಾ ರ್‍ಯಾಲಿ ನಡೆಸಿ, ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಲಾಯಿತು.

ಈಶಾನ್ಯ ವಲಯದ ಶಿಕ್ಷಕರ ವೇದಿಕೆ ಅಧ್ಯಕ್ಷ ಎಂ.ಬಿ.ಅಂಬಲಗಿ ಮಾತನಾಡಿ, ‘ಎನ್‌ಪಿಎಸ್‌ ರದ್ದುಪಡಿಸಿ ಒಪಿಎಸ್‌ ಜಾರಿಗೊಳಿಸಿಬೇಕು. ಕಾಲ್ಪನಿಕ ವೇತನ ಬಡ್ತಿ, ಅನುದಾನಿತ ಶಾಲಾ–ಕಾಲೇಜು ಶಿಕ್ಷಕರಿಗೆ ಜ್ಯೋತಿ ಸಂಜೀವಿನಿ ನೀಡಬೇಕು. ಖಾಲಿ ಹುದ್ದೆಗಳನ್ನು ಭರ್ತಿ ಮಾಡಬೇಕು. 2019–20ನೇ ಸಾಲಿನ ಆರ್‌ಟಿಇ ಶುಲ್ಕ ಮರುಪಾವತಿ ಪ್ರಾರಂಭಿಸಬೇಕು. 371 (ಜೆ) ಅಡಿಯಲ್ಲಿ ಕಲ್ಯಾಣ ಕರ್ನಾಟಕ ಭಾಗಕ್ಕೆ 10 ವರ್ಷಗಳ ಅನುದಾನ ನೀಡಬೇಕು. ಖಾಸಗಿ ಶಾಲಾ– ಕಾಲೇಜುಗಳಲ್ಲಿ ಖಾರ್ಯ ನಿರ್ವಹಿಸುತ್ತಿರುವ ಶಿಕ್ಷಕ –ಉಪನ್ಯಾಸಕರಿಗೆ ವಿದ್ಯಾರ್ಥಿಗಳ ಸಂಖ್ಯೆಗೆ ಅನುಗುಣವಾಗಿ ಕನಿಷ್ಠ ವೇತನ ನೀಡಬೇಕು’ ಎಂದು ಆಗ್ರಹಿಸಿದರು.

ಸುನೀಲ ಹುಡುಗಿ, ಮಹಾಂತಯ್ಯ ಹಿರೇಮಠ, ನಿತಿನ್‌ ಕೋಸಗಿ, ಅಪ್ಪಾರಾವ್‌ ಹೆಗ್ಗಿ, ಡಾ.ಪರಮೇಶ್ವರ ಬನ್ಸೋಡೆ, ಚನ್ನವೀರಪ್ಪ ಸಲಗರ, ಬಸವಂತರಾಯ ಪಾಟೀಲ, ಅನಿಲ ಕುಮಾರ ಡಾಂಗೆ, ಪವನಕುಮಾರ ಕೊಡಗೂರ್, ನವೀನರೆಡ್ಡಿ, ಮಲ್ಲಿಕಾರ್ಜುನ ಅಲ್ಲಾಪುರಿ, ನಾಗರಾಜ ಚಿತ್ತಾಪುರ, ಜ್ಯೋತಿ ಪಾಟೀಲ, ಶಾಲಿನಿ, ಮೈಬೂಬಲಿ, ಬಾಬುರಾವ್ ಸುಳ್ಳದ, ಸುನೀಲ, ರಾಜಶೇಖರ, ಅನಿಲಕುಮಾರ, ಮೊಹಮ್ಮದ್ ಜಾವೀದ್‌ ಇದ್ದರು.

ಪ್ರತಿಕ್ರಿಯಿಸಿ (+)