ಭಾನುವಾರ, 1 ಅಕ್ಟೋಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಲಬುರಗಿ | ಬಾಡಿಗೆ ಶಿಕ್ಷಕಿ ನೇಮಿಸಿಕೊಂಡಿದ್ದ ಶಿಕ್ಷಕ ಅಮಾನತು

Published 12 ಜುಲೈ 2023, 16:27 IST
Last Updated 12 ಜುಲೈ 2023, 16:29 IST
ಅಕ್ಷರ ಗಾತ್ರ

ಕಲಬುರಗಿ: ಬಾಡಿಗೆ ಶಿಕ್ಷಕಿ ನೇಮಿಸಿಕೊಂಡು ಮಕ್ಕಳಿಗೆ ಪಾಠ ಮಾಡಿಸಿದ ಪ್ರಕರಣ ಸಂಬಂಧ ಚಿತ್ತಾಪುರ ತಾಲ್ಲೂಕಿನ ನಾಲವಾರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಭಾಲಿನಾಯಕ ತಾಂಡಾದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಸಹಶಿಕ್ಷಕ ಮಹೇಂದ್ರ ಕುಮಾರ ಅವರನ್ನು ಅಮಾನತು ಮಾಡಿ ಆದೇಶ ಹೊರಡಿಸಲಾಗಿದೆ.

‘ಬಾಡಿಗೆ ಶಿಕ್ಷಕಿ ಮೂಲಕ ಪಾಠ’ ವರದಿಯು ‘ಪ್ರಜಾವಾಣಿ’ ಪತ್ರಿಕೆಯ ಜು.9ರ ಸಂಚಿಕೆಯಲ್ಲಿ ಪ್ರಕಟವಾಗಿತ್ತು. ಈ ವರದಿ ಆಧರಿಸಿ ಶಿಕ್ಷಣ ಇಲಾಖೆ ಕೇಳಿದ ಸ್ಪಷ್ಟೀಕರಣಕ್ಕೆ ತೃಪ್ತಿಕರವಾದ ಉತ್ತರ ಬರಲಿಲ್ಲ. ಹೀಗಾಗಿ, ಚಿತ್ತಾಪುರ ಕ್ಷೇತ್ರ ಶಿಕ್ಷಣಾಧಿಕಾರಿ ಸಿದ್ಧವೀರಯ್ಯ ರುದನೂರು ಅವರು ಜು.11ರಿಂದ ಜಾರಿಗೆ ಬರುವಂತೆ ಮಹೇಂದ್ರ ಕುಮಾರ ಅವರನ್ನು ಸೇವೆಯಿಂದ ಅಮಾನತು ಮಾಡಿ ಆದೇಶ ಮಾಡಿದ್ದಾರೆ.

ಸಿದ್ಧವೀರಯ್ಯ ಅವರು ನಾಲವಾರ ಕ್ಲಸ್ಟರ್ ವಲಯ ಸಿಆರ್‌ಪಿ ಸಂಜೀವ ಸೇರಿ ಮೂವರಿಗೆ ನೋಟಿಸ್ ನೀಡಿ, ‘ಪ್ರಜಾವಾಣಿ’ ವರದಿಯಲ್ಲಿ ಉಲ್ಲೇಖವಾದ ಬಗ್ಗೆ ಸ್ಪಷ್ಟನೆ ಕೊಡುವಂತೆ ಶಾಲೆಯ ಮುಖ್ಯಶಿಕ್ಷಕ ಹಾಗೂ ಸಹಶಿಕ್ಷಕರಿಗೂ ಸೂಚಿಸಿದ್ದರು.

ಮುಖ್ಯಶಿಕ್ಷಕ ಹಾಗೂ ಸಹಶಿಕ್ಷಕ ಮಹೇಂದ್ರ ಅವರು ಬಾಡಿಗೆ ಶಿಕ್ಷಕಿಯ ಮೂಲಕ ಪಾಠ ಹೇಳಿಸಿರುವುದಿಲ್ಲ ಎಂದು ಸ್ಪಷ್ಟನೆ ನೀಡಿದ್ದರು. ಈ ಬಗ್ಗೆ ಎಸ್‌ಡಿಎಂಸಿ ಅಧ್ಯಕ್ಷರು ಹಾಗೂ ಗ್ರಾಮಸ್ಥರನ್ನು ವಿಚಾರಿಸಿದಾಗ, ಮಕ್ಕಳ ಶೈಕ್ಷಣಿಕ ಹಿತ ದೃಷ್ಟಿಯಿಂದ ಪಾಠ ಹೇಳಿಸಿದ್ದಾರೆ ಎಂದು ಸ್ಪಷ್ಟೀಕರಣ ಕೊಟ್ಟಿದ್ದರು. ಶಿಕ್ಷಕರು ನೀಡಿದ್ದ ಸ್ಪಷ್ಟೀಕರಣ ತೃಪ್ತಿಕರವಾಗಿಲ್ಲ ಎಂದು ಆದೇಶ ಪತ್ರದಲ್ಲಿ ಹೇಳಿದ್ದಾರೆ.

ಜವಾಬ್ದಾರಿಯುತ ಹುದ್ದೆಯಲ್ಲಿ ಇದ್ದುಕೊಂಡು ಶಾಲೆಯ ಕರ್ತವ್ಯಕ್ಕೆ ಸಮಯಕ್ಕೆ ಸರಿಯಾಗಿ ಹಾಜರಾಗಿ ಮಕ್ಕಳ ಭವಿಷ್ಯ ರೂಪಿಸುವುದು ಆದ್ಯ ಕರ್ತವ್ಯ. ಬಾಡಿಗೆ ಶಿಕ್ಷಕಿಯ ಮೂಲಕ ಪಾಠ ಮಾಡಿಸುತ್ತಿರುವುದು ನಿಯಮಬಾಹಿರ ಮತ್ತು ಗಂಭೀರ ಆರೋಪ. ಇದರಿಂದ ಇಲಾಖೆಗೆ ಮುಜುಗರವಾಗಿದೆ ಎಂದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT