ಮಂಗಳವಾರ, ಮೇ 18, 2021
29 °C
ಕಡ್ಡಾಯ, ಹೆಚ್ಚುವರಿ ಶಿಕ್ಷಕರ ವರ್ಗಾವಣೆ ಕೌನ್ಸೆಲಿಂಗ್‌ ಇಂದು

ಶಿಕ್ಷಕರ ವರ್ಗಾವಣೆ ತಡೆಗೆ ಪ್ರಭಾವಿಗಳ ಭಾರೀ ಕಸರತ್ತು

ನಾರಾಯಣರಾವ್ ಕುಲಕರ್ಣಿ Updated:

ಅಕ್ಷರ ಗಾತ್ರ : | |

ಕುಷ್ಟಗಿ: ಸರ್ಕಾರದ ಪ್ರಾಥಮಿಕ ಮತ್ತು ಪ್ರೌಢಶಾಲೆಗಳ ಹೆಚ್ಚುವರಿ ಮತ್ತು ಕಡ್ಡಾಯವಾಗಿ ವರ್ಗಾವಣೆಗೊಳ್ಳಲಿರುವ ಶಿಕ್ಷಕರ ವರ್ಗಾವಣೆ ಪ್ರಕ್ರಿಯೆ ಆರಂಭಗೊಂಡಿದ್ದು, ಶಿಕ್ಷಕರ ಸಂಘದ ಪದಾಧಿಕಾರಿಗಳ ಹೆಸರಿನಲ್ಲಿ ವರ್ಗಾವಣೆಯಲ್ಲಿ ವಿನಾಯಿತಿ ಪಡೆದು ಇದ್ದ ಸ್ಥಳದಲ್ಲಿಯೇ ತಳವೂರುವಲ್ಲಿ ತಾಲ್ಲೂಕಿನ ಕೆಲ ಶಿಕ್ಷಕರು ಇನ್ನಿಲ್ಲದ ಕಸರತ್ತು ನಡೆಸುತ್ತಿದ್ದಾರೆ.

70 ಮಕ್ಕಳಿಗೆ ಒಬ್ಬ ಶಿಕ್ಷಕ ಎಂಬ ಅನುಪಾತದ ಆಧಾರದ ಮೇಲೆ ಹೆಚ್ಚುವರಿಯಾಗಿ ಉಳಿಯುವ ಶಿಕ್ಷಕರ ಪಟ್ಟಿಯನ್ನು ಶಿಕ್ಷಣ ಇಲಾಖೆ ಪ್ರಕಟಿಸಿದ್ದು ಸೆ. 27ರಂದು ಕೊಪ್ಪಳದಲ್ಲಿ ಸ್ಥಳ ನಿಯುಕ್ತಿಗೆ ಕೌನ್ಸೆಲಿಂಗ್‌ ಪ್ರಕ್ರಿಯೆ ನಡೆಯಲಿದೆ ಎಂದು ಇಲಾಖೆ ಮೂಲಗಳು ತಿಳಿಸಿವೆ.

ಆದರೆ, ದಶಕದಿಂದಲೂ ವಿವಿಧ ರೀತಿಯ ಪ್ರಭಾವ ಬಳಸಿ ಒಂದೇ ಸ್ಥಳದಲ್ಲಿ ಇರುವ ಮತ್ತು ಸಂಘಗಳ ಪದಾಧಿಕಾರಿಗಳಿಗೆ ಇರುವ ವಿನಾಯಿತಿಯನ್ನು ಪುನಃ ಬಳಸಿಕೊಂಡು ವರ್ಗಾವಣೆಯಿಂದ ಬಚಾವ್‌ ಆಗಲು ಕೆಲವರು ಇಲಾಖೆ ಅಧಿಕಾರಿಗಳ ಮೇಲೆ ಒತ್ತಡ ಹೇರುತ್ತಿದ್ದಾರೆ ಎನ್ನಲಾಗಿದೆ.

ಅಧಿಕಾರಿಗಳು ರಾಜಕೀಯ ಒತ್ತಡಕ್ಕೆ ಮಣಿದು ನಿಯಮಗಳನ್ನು ಮೀರಿ ಹೆಚ್ಚುವರಿ ಶಿಕ್ಷಕರ ಪಟ್ಟಿಯಲ್ಲಿರುವ ಕೆಲವರನ್ನು ವರ್ಗಾವಣೆಯಿಂದ ಕೈಬಿಡುವ ಸಾಧ್ಯತೆ ಇದೆ ಎಂದು ಇತರೆ ಶಿಕ್ಷಕರು ಆತಂಕ ವ್ಯಕ್ತಪಡಿಸಿದ್ದಾರೆ.

ಪದಾಧಿಕಾರಿಗಳಾಗಿ ವಿನಾಯಿತಿ ಸೌಲಭ್ಯ ಕೋರುವವರು ಸಂಘದ ಪದಾಧಿಕಾರಿಗಳ ಚುನಾವಣೆ ಮೂಲಕ ನೇರವಾಗಿ ಚುನಾಯಿತರಾಗಿರಬೇಕು. ನಾಮ ನಿರ್ದೇಶನಗೊಂಡಿರಬಾರದು. ಪದೇ ಪದೇ ಈ ಸೌಲಭ್ಯವನ್ನು ಬಳಸಿಕೊಂಡಿರಬಾರದು.  ಸಂಘದ ರಾಜ್ಯ ಘಟಕದ ಅಧ್ಯಕ್ಷರು ತಮ್ಮದೇ ಲೆಟರ್‌ಹೆಡ್‌ನಲ್ಲಿ ಪದಾಧಿಕಾರಿಗಳು ಎಂದು ವಿನಾಯಿತಿಗೆ ಒಳಪಡಿಸಲು ಶಿಫಾರಸು ಮಾಡಿರಬೇಕು. ಅಂಥವರಿಗೆ ಮಾತ್ರ ವರ್ಗಾವಣೆಯಲ್ಲಿ ವಿನಾಯಿತಿ ಇರುತ್ತದೆ.

ರಾಜಕೀಯ ಒತ್ತಡಕ್ಕೆ ಮಣಿದು ಅಧಿಕಾರಿಗಳು ಕೆಲವರಿಗೆ 'ವಿನಾಯಿತಿ ಮಣೆ'ಹಾಕಲು ಮುಂದಾಗಿದ್ದಾರೆ. ಅದೇ ರೀ ತಿ ಹೆಚ್ಚಿನ ಅವಧಿಯವರೆಗೆ ಒಂದೇ ಕಡೆ ಸೇವೆ ಸಲ್ಲಿಸಿ ಕಡ್ಡಾಯವಾಗಿ ವರ್ಗಾವಣೆಗೆ ಒಳಪಡಬೇಕಿರುವವರು ಪದಾಧಿಕಾರಿಗಳಾಗಿದ್ದರೆ ಸ್ಥಳ ನಿಯುಕ್ತಿಯಲ್ಲಿ ಕೌನ್ಸೆಲಿಂಗ್‌ನಲ್ಲಿಯೂ ಅಂಥವರಿಗೆ ಆದ್ಯತೆ ಇದ್ದು ವಿನಾಯಿತಿಯನ್ನು ದುರ್ಬಳಕೆ ಮಾಡಿಕೊಳ್ಳುವ ಯತ್ನ ನಡೆದಿದೆ ಎಂದು ಕೆಲವರು ದೂರುತ್ತಾರೆ.

ನಿಯಮಗಳ ಅನುಸಾರ ಅರ್ಹರಲ್ಲದ ಅನೇಕ ಶಿಕ್ಷಕರು ಆದ್ಯತೆ ಪಡೆಯಲು ಮುಂದಾಗಿದ್ದಾರೆ. ಪಾಠ ಮಾಡುವ ರೂಢಿಯನ್ನೇ ಇಟ್ಟುಕೊಳ್ಳದ, ರಿಯಲ್‌ ಎಸ್ಟೇಟ್‌ ಮತ್ತಿತರೆ ದಂಧೆಯಲ್ಲಿ ತೊಡಗಿರುವ ಮತ್ತು ರಾಜಕೀಯ ಪ್ರಭಾವಿಗಳೊಂದಿಗೆ ಗುರುತಿಸಿಕೊಂಡಿರುವ ಕೆಲ ಶಿಕ್ಷಕರೂ ವಿನಾಯಿತಿ ಪಡೆಯುವವರ ಪಟ್ಟಿಯಲ್ಲಿ ಸೇರಿದ್ದಾರೆ ಎಂದು ಹೆಸರು ಬಹಿರಂಗಪಡಿಸಲು ಇಚ್ಛಿಸದ ಶಿಕ್ಷಕರೊಬ್ಬರು ದೂರಿದರು.

ಒತ್ತಾಯ: ಈಗಾಗಲೇ ಕೆಲ ಬಾರಿ ಸಂಘದ ಪದಾಧಿಕಾರಿಗಳೆಂದು ವರ್ಗಾವಣೆ ವಿನಾಯಿತಿ ಸೌಲಭ್ಯ ಬಳಸಿಕೊಂಡಿರುವವರು, ಕಡ್ಡಾಯವಾಗಿ ವರ್ಗಾವಣೆಗೊಳ್ಳಬೇಕಿರುವ ಶಿಕ್ಷಕರನ್ನು ಗುರುತಿಸಿ ವರ್ಗಾವಣೆ ಮಾಡುವಂತೆ ಸಾರ್ವಜನಿಕ ಶಿಕ್ಷಣ ಇಲಾಖೆ ಉಪ ನಿರ್ದೇಶಕರನ್ನು ತಾಲ್ಲೂಕಿನ ಶಿಕ್ಷಕರು ಒತ್ತಾಯಿಸಿದ್ದಾರೆ.

*  ವಿನಾಯಿತಿ ಕೋರಿ ಬಂದಿರುವ ಶಿಕ್ಷಕರ ಅರ್ಜಿಗಳನ್ನು ಪರಿಶೀಲಿಸಲಾಗುತ್ತದೆ. ನಿಯಮ ಮೀರಿ ಯಾರಿಗೂ ವಿನಾಯಿತಿ ಅವಕಾಶ ನೀಡುವುದಿಲ್ಲ. ಯಾರಿಂದಲೂ ಒತ್ತಡ ಬಂದಿಲ್ಲ.

-ಸೂರ್ಯನಾರಾಯಣ, ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿ ಅಧೀಕ್ಷಕ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು