ಬುಧವಾರ, ಸೆಪ್ಟೆಂಬರ್ 18, 2019
25 °C
ಶಿಕ್ಷಕರ ದಿನಾಚರಣೆ ಸಮಾರಂಭದಲ್ಲಿ ವಿಧಾನಪರಿಷತ್‌ ಸದಸ್ಯ ಶರಣಪ್ಪ ಮಟ್ಟೂರ ಬೇಸರದ ನುಡಿ

ಎಂಟು ತಿಂಗಳಿಗೊಮ್ಮೆ ಪಗಾರ ಕೊಟ್ರ ಬದುಕೂದು ಹೆಂಗ?

Published:
Updated:
Prajavani

ಕಲಬುರ್ಗಿ: ಶಿಕ್ಷಕರು ಭಾವಿ ಪ್ರಜೆಗಳನ್ನು ತಯಾರಿಸುವ ಶಿಲ್ಪಿಗಳು ಎನ್ನುತ್ತೀರಿ. ಪ್ರತಿ ಶಿಕ್ಷಕರ ದಿನಾಚರಣೆ ಸಂದರ್ಭದಲ್ಲಿ ಅವರನ್ನು ಹಾಡಿ ಹೊಗಳುತ್ತೀರಿ. ಆದರೆ, ಎಂಟು ತಿಂಗಳಿಗೊಮ್ಮೆ ಅವರಿಗೆ ಪಗಾರ ಕೊಡ್ತೀರಿ. ಬೂಟ್‌ ಪಾಲಿಷ್‌ ಮಾಡುವುದೊಂದನ್ನು ಬಿಟ್ಟು ಎಲ್ಲ ಕೆಲಸವನ್ನೂ ಅವರಿಗೆ ಹಚ್ಚುತ್ತೀರಿ...!

ಶಿಕ್ಷಕರ ವೇತನ ವಿಳಂಬ, ಅವೈಜ್ಞಾನಿಕ ವರ್ಗಾವಣೆ ನೀತಿ, ಸಕಾಲಕ್ಕೆ ಬಡ್ತಿ ಸಿಗದಿರುವುದು ಸೇರಿದಂತೆ ಹಲವು ಸಮಸ್ಯೆಗಳ ಬಗ್ಗೆ ವಿಧಾನಪರಿಷತ್ ಸದಸ್ಯ ಶರಣಪ್ಪ ಮಟ್ಟೂರ ಅವರು ಜಿಲ್ಲಾಧಿಕಾರಿ ಬಿ.ಶರತ್, ಜಿ.ಪಂ. ಸಿಇಒ ಡಾ.ಪಿ.ರಾಜಾ, ಡಿಡಿಪಿಐ ಶಾಂತಗೌಡ ಅವರನ್ನು ಉದ್ದೇಶಿಸಿ ಬೇಸರದಿಂದ ಈ ಮಾತುಗಳನ್ನು ಹೇಳಿದರು.

ನಗರದ ಹೊರವಲಯದ ಸೇಡಂ ರಸ್ತೆಯ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದಲ್ಲಿ ಶಿಕ್ಷಕರ ದಿನಾಚರಣೆ ಅಂಗವಾಗಿ ಗುರುವಾರ ಏರ್ಪಡಿಸಿದ್ದ ಸಮಾರಂಭದಲ್ಲಿ ಮಾತನಾಡಿದ ಅವರು, ‘ಆರ್‌ಎಂಎಸ್‌ಎ ಶಿಕ್ಷಕರ ಗೋಳಂತೂ ಕೇಳುವುದೇ ಬೇಡ. ಬಸವ ಕಲ್ಯಾಣದ ಶಿಕ್ಷಕರೊಬ್ಬರಿಗೆ ಎಂಟು ತಿಂಗಳಿಂದಲೂ ಪಗಾರ ಆಗಿರಲಿಲ್ಲ. ಅವರ ತಾಯಿ ತೀವ್ರ ಸ್ವರೂಪದ ಕಾಯಿಲೆಯಿಂದ ಬಳಲುತ್ತಿದ್ದರು. ನನಗೆ ಫೋನ್‌ ಮಾಡಿ, ಇನ್ನೂ ಪಗಾರ ಆಗಿಲ್ಲ. ಅವ್ವಗ ದವಾಖಾನಿಗೆ ತೋರಿಸಬೇಕು. ಯಾರ ಕಡೆ ಸಾಲ ಮಾಡ್ಲಿ ಹೇಳ್ರಿ ಎಂದರು. ಆ ಶಿಕ್ಷಕರಿಗೆ ಏನು ಹೇಳಬೇಕು ಎಂಬುದೇ ಗೊತ್ತಾಗಲಿಲ್ಲ. ವೇತನದ ವಿಳಂಬದ ಬಗ್ಗೆ ಇಲಾಖೆಯ ಆಯುಕ್ತರಿಗೆ ಮೇಲಿಂದ ಮೇಲೆ ಫೋನ್‌ ಮಾಡಿ, ಭೇಟಿ ಮಾಡಿ ವಿವರಿಸಿದ್ದೇನೆ. ಎಲ್ಲರೂ ಸಮಸ್ಯೆ ಬಗೆಹರಿಸುವುದಾಗಿ ಹೇಳುತ್ತಾರೆ. ಆದರೆ ಸಮಸ್ಯೆ ಮಾತ್ರ ಹಾಗೆಯೇ ಇದೆ’ ಎಂದರು.

ಬೆಂಗಳೂರಿನ ಸಾರ್ವಜನಿಕ ಇಲಾಖೆ ಆಯುಕ್ತರ ಕಚೇರಿಗೆ ಹೋಗಿ ಹೈದರಾಬಾದ್‌ ಕರ್ನಾಟಕ ಜಿಲ್ಲೆಗಳ ಶಿಕ್ಷಕರಿಗೆ ವೇತನ ಸಕಾಲಕ್ಕೆ ಆಗದಿರುವ ಬಗ್ಗೆ ಅಧಿಕಾರಿಗಳ ಗಮನ ಸೆಳೆದೆ. ತಕ್ಷಣವೇ, ಆ ಜಿಲ್ಲೆಗಳಲ್ಲಿ ವೇತನಕ್ಕೆ ಸಂಬಂಧಿಸಿದ ದೂರುಗಳೇ ಇಲ್ಲ ಎಂದರು. ಕೂಡಲೇ ಆರೂ ಜಿಲ್ಲೆಗಳ ಶಿಕ್ಷಕರಿಗೆ ಫೋನ್‌ ಮಾಡಿದೆ. ಅವರು ಆರು ತಿಂಗಳಿಂದ ವೇತನ ಆಗಿಲ್ಲ ಎನ್ನುತ್ತಿದ್ದಂತೆಯೇ ಅಧಿಕಾರಿಗಳು ವರಸೆ ಬದಲಿಸಿ ಕೊಂಚ ತಾಂತ್ರಿಕ ಸಮಸ್ಯೆ ಆಗಿರುವುದು ನಿಜ ಎಂದು ಒಪ್ಪಿಕೊಂಡರು. ಇಂತಹ ಅಧಿಕಾರಿಗಳ ವಿರುದ್ಧ ಮುಲಾಜಿಲ್ಲದೇ ಕ್ರಮ ಕೈಗೊಳ್ಳಬೇಕು’ ಎಂದು ಮಟ್ಟೂರ ಒತ್ತಾಯಿಸಿದರು.

ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಮಲ್ಲಯ್ಯ ಗುತ್ತೇದಾರ ಮಾತನಾಡಿ, ‘ಶಿಕ್ಷಕ ವಿರೋಧಿಯಾದ ನೂತನ ಪಿಂಚಣಿ ವ್ಯವಸ್ಥೆಯನ್ನು ರದ್ದುಪಡಿಸಬೇಕು ಎಂದು ಅದು ಜಾರಿಗೆ ಬಂದಾಗಿನಿಂದಲೇ ಒತ್ತಾಯಿಸುತ್ತಿದ್ದೇವೆ. ಚುನಾವಣೆಗೆ ಮುನ್ನ ವೋಟು ಕೇಳಲು ಬರುವ ಜನಪ್ರತಿನಿಧಿಗಳು ತಾವು ಅಧಿಕಾರಕ್ಕೆ ಬಂದರೆ ಎನ್‌ಪಿಎಸ್‌ ರದ್ದು ಮಾಡುವುದಾಗಿ ಭರವಸೆ ನೀಡುತ್ತಾರೆ. ಅಧಿಕಾರಕ್ಕೆ ಬಂದ ಮೇಲೆ ಇದರ ಬಗ್ಗೆ ಚಕಾರ ಎತ್ತುವುದಿಲ್ಲ’ ಎಂದು ಟೀಕಿಸಿದರು.

ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ.ಪಿ.ರಾಜಾ, ‘ಶಿಕ್ಷಕರ ವೇತನ ವಿಳಂಬವಾಗಿದ್ದು, ಸ್ಥಳೀಯವಾಗಿ ಸಮಸ್ಯೆ ಇದ್ದರೆ ಅವುಗಳನ್ನು ತಕ್ಷಣ ಬಗೆಹರಿಸುತ್ತೇವೆ. ಶಿಕ್ಷಕರ ವೇತನ ಬಿಡುಗಡೆಯಾಗಿದ್ದು, ಕೂಡಲೇ ಬಟವಡೆ ಮಾಡಲಾಗುವುದು. ಸರ್ಕಾರದ ಮಟ್ಟದಲ್ಲಿ ಆಗಬೇಕಿರುವ ಕೆಲಸಗಳ ಬಗ್ಗೆ ಉನ್ನತ ಅಧಿಕಾರಿಗಳ ಗಮನಕ್ಕೆ ತರಲಾಗುವುದು’ ಎಂದರು.

ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಸುವರ್ಣಾ ಮಾಲಾಜಿ ಕಾರ್ಯಕ್ರಮ ಉದ್ಘಾಟಿಸಿ ಶಿಕ್ಷಕರ ದಿನಾಚರಣೆಗೆ ಶುಭ ಕೋರಿದರು.

ಪ್ರಾಸ್ತಾವಿಕವಾಗಿ ಮಾತನಾಡಿದ ಡಿಡಿಪಿಐ ಶಾಂತಗೌಡ, ‘ಜಿಲ್ಲೆಯ ಎಂಟು ಶೈಕ್ಷಣಿಕ ಬ್ಲಾಕ್‌ಗಳಲ್ಲಿ ಉತ್ತಮ ಶಿಕ್ಷಕ ಪ್ರಶಸ್ತಿಗೆ ಆಯ್ಕೆ ಮಾಡುವುದು ಸವಾಲಿನ ಕೆಲಸವಾಗಿತ್ತು. ಕ್ಷೇತ್ರ ಶಿಕ್ಷಣಾಧಿಕಾರಿಗಳ ನೇತೃತ್ವದಲ್ಲಿ ಪರಿಶೀಲನಾ ತಂಡಗಳನ್ನು ನೇಮಿಸಲಾಗಿತ್ತು. ಪ್ರಶಸ್ತಿ ನೀಡಲು ಕೋರಿ ಬಂದ ಪ್ರಸ್ತಾವಗಳನ್ನು ಸ್ವೀಕರಿಸಿದ ತಂಡವು ಆಯಾ ಶಾಲೆಗಳಿಗೆ ತೆರಳಿ ಶಿಕ್ಷಕರ ಪೂರ್ವಾಪರಗಳ ಮಾಹಿತಿ ಪಡೆಯಿತು. ಪ್ರಸ್ತಾವದಲ್ಲಿನ ಅಂಶಗಳು ಹಾಗೂ ಶಾಲೆಗೆ ಭೇಟಿ ನೀಡಿದಾಗ ದೊರೆತ ಮಾಹಿತಿ ಪರಿಗಣಿಸಿ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. ಎಲೆಮರೆಯ ಕಾಯಿಯಂತೆ ಇದ್ದ ಶಿಕ್ಷಕರು ಅರ್ಜಿ ಹಾಕದೇ ಇದ್ದರೂ ಗುರುತಿಸಿ ಪ್ರಶಸ್ತಿ ನೀಡಲಾಗಿದೆ ಎಂದರು.

ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದ ಕಲಬುರ್ಗಿ ಉಪವಿಭಾಗದ ಮುಖ್ಯಸ್ಥೆ ವಿಜಯಾ ಅಕ್ಕ, ಜಿಲ್ಲಾ ನೌಕರರ ಸಂಘದ ಅಧ್ಯಕ್ಷ ರಾಜು ಲೇಂಗಟಿ ಹಾಗೂ ಶಿಕ್ಷಕರ ಸಂಘಟನೆಗಳ ಪ್ರತಿನಿಧಿಗಳು ಇದ್ದರು.

Post Comments (+)