ಭಾನುವಾರ, ಮಾರ್ಚ್ 26, 2023
23 °C
24 ಜನರಿಗೆ ‘ಜಿಲ್ಲಾ ಮಟ್ಟದ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ’ ಪ್ರದಾನ

‘ಮಕ್ಕಳ ಸಮಗ್ರ ಬೆಳವಣಿಗೆಗೆ ಶ್ರಮಿಸಿ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕಲಬುರ್ಗಿ: ‘ವಿಷಯಾಧಾರಿತ ಶಿಕ್ಷಣಕ್ಕೆ ಅಷ್ಟೇ ಒತ್ತು ನೀಡದೆ, ಶಿಕ್ಷಕರು ಮಕ್ಕಳ ಸಮಗ್ರ ಬೆಳವಣಿಗೆಗೆ ಶ್ರಮಿಸಬೇಕು’ ಎಂದು ನಗರ ಪೊಲೀಸ್ ಕಮಿಷನರ್ ವೈ.ಎಸ್.ರವಿಕುಮಾರ ತಿಳಿಸಿದರು.

ನಗರದ ಎಸ್.ಎಂ.ಪಂಡಿತ ರಂಗಮಂದಿರದಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆ ವತಿಯಿಂದ ಭಾನುವಾರ ನಡೆದ ಶಿಕ್ಷಕರ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

‘ಪ್ರಸ್ತುತ ದಿನಗಳಲ್ಲಿ ಅಂಕ ಗಳಿಕೆಗೆ ಹೆಚ್ಚು ಪ್ರಾಮುಖ್ಯತೆ ನೀಡಲಾಗುತ್ತಿದೆ. ವಿದ್ಯಾರ್ಥಿಗಳಲ್ಲಿ ಜೀವನ ಮೌಲ್ಯಗಳನ್ನು ಹೇಳಿಕೊಡುತ್ತಿಲ್ಲ. ಇಂಥ ಶಿಕ್ಷಣ ವ್ಯವಸ್ಥೆ ದೇಶದ ಪ್ರಗತಿಗೆ ಆಶಾದಾಯಕವಲ್ಲ’ ಎಂದರು.

‘ವಿದ್ಯಾರ್ಥಿಗಳಲ್ಲಿ ಸಾಮಾಜಿಕ ಕಳಕಳಿ, ಸೇವಾ ಮನೋಭಾವ, ಸಂವೇದನಾ ಶೀಲತೆ ಬೆಳೆಸಲು ಶಿಕ್ಷಕರು ಶ್ರಮಿಸಬೇಕು.  ಸಂಸ್ಕಾರಕ್ಕೆ ಹೆಚ್ಚು ಒತ್ತು ನೀಡಬೇಕು. ಉತ್ತಮ ಬೋಧನೆ ಮೂಲಕ ಜಿಲ್ಲೆಯ ಶೈಕ್ಷಣಿಕ ಪ್ರಗತಿಗೆ ಶ್ರಮಿಸಬೇಕು’ ಎಂದರು.

ಸಾರ್ವಜನಿಕ ಶಿಕ್ಷಣ ಇಲಾಖೆ ಉಪ ನಿರ್ದೇಶಕ ಅಶೋಕ ಬಿ.ಭಜಂತ್ರಿ ಪ್ರಾಸ್ತಾವಿಕ ನುಡಿಗಳನ್ನಾಡಿದರು.

ಕಾರ್ಯಕ್ರಮಕ್ಕೆ ಬಂದಿದ್ದ ಮುಖ್ಯ ಅತಿಥಿಗಳು ಚುನಾವಣೆ ಕಾರ್ಯಗಳಿಗೆ ಹೋಗಲು ಅವಸರ ಮಾಡಿದ ಕಾರಣ  ಆಯೋಜಕರು ಪ್ರಶಸ್ತಿ ಪ್ರದಾನ ಕಾರ್ಯಕ್ರಮವನ್ನು ತ್ವರಿತವಾಗಿ ಮುಗಿಸಬೇಕಾಯಿತು.

ಸಭಾಂಗಣದಲ್ಲಿ ಹೆಚ್ಚು ಜನರು ಸೇರಿದ್ದರಿಂದ ಕೋವಿಡ್ ಮಾರ್ಗಸೂಚಿ ಪಾಲನೆಯಾಗಲಿಲ್ಲ. ಪ್ರಶಸ್ತಿ ಪುರಸ್ಕೃತರ ಕುಟುಂಬದವರು, ಶಾಲೆಯ ಸಿಬ್ಬಂದಿ ವೇದಿಕೆ ಮೇಲೆ ಹತ್ತಿದ್ದರಿಂದ ಜನದಟ್ಟಣೆ ಹೆಚ್ಚಾಗಿತ್ತು. ಅವರನ್ನು ನಿಭಾಯಿಸಲು ಆಯೋಜಕರು ಹರಸಾಹಸ ಪಟ್ಟರು.

ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ದಿಲಿಷ್ ಶಶಿ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಮಲ್ಲಯ್ಯ ಗುತ್ತೇದಾರ, ಸಾರ್ವಜನಿಕ ಶಿಕ್ಷಣ ಇಲಾಖೆ (ಡಯೆಟ್) ಉಪ ನಿರ್ದೇಶಕಿ ಕಮಲಾ ಕುಲಕರ್ಣಿ, ಕರ್ನಾಟಕ ಸರ್ಕಾರಿ ನೌಕರರ ಸಂಘದ ಜಿಲ್ಲಾ ಅಧ್ಯಕ್ಷ ಹಣಮಂತ ಲೇಂಗಟಿ, ಶಿಕ್ಷಣಾಧಿಕಾರಿಗಳ ಸಂಘದ ಜಿಲ್ಲಾ ಅಧ್ಯಕ್ಷ ಹೆಚ್.ಎಸ್ ದೇಶಮುಖ, ಸರ್ಕಾರಿ ಪ್ರೌಢ ಶಾಲಾ ಮುಖ್ಯ ಶಿಕ್ಷಕರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಮರೆಪ್ಪ ಎಂ. ಮಿಣಜಗಿ, ಕರ್ನಾಟಕ ರಾಜ್ಯ ಪ್ರೌಢ ಶಾಲಾ ಸಹ ಶಿಕ್ಷಕರ ಸಂಘದ ಜಿಲ್ಲಾ ಅಧ್ಯಕ್ಷ ವಿಶ್ವನಾಥ ಕಟ್ಟಿಮನಿ, ದೈಹಿಕ ಶಿಕ್ಷಣ ಶಿಕ್ಷಕರ ಸಂಘ ಜಿಲ್ಲಾ ಅಧ್ಯಕ್ಷ ರಾಜು ದೊಡ್ಡಮನಿ ಪ್ರಮುಖರಾದ ಮರಿಯಪ್ಪ ಮಿಣಜಗಿ,  ನಾರಾಯಣ ದೇಸಾಯಿ, ಬಸನಗೌಡ ಬಿರಾದಾರ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.