ಬೇಡಿಕೆ ಈಡೇರಿಕೆಗಾಗಿ ಶಿಕ್ಷಕರ ರ್‍ಯಾಲಿ 16ರಂದು

7

ಬೇಡಿಕೆ ಈಡೇರಿಕೆಗಾಗಿ ಶಿಕ್ಷಕರ ರ್‍ಯಾಲಿ 16ರಂದು

Published:
Updated:

ಕಲಬುರ್ಗಿ: ಶಿಕ್ಷಕರ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಫೆ.16ರಂದು ರಾಜ್ಯದಾದ್ಯಂತ ಪ್ರತಿಭಟನಾ ರ‍್ಯಾಲಿ ಹಮ್ಮಿಕೊಳ್ಳಲಾಗಿದೆ ಎಂದು ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ವಿ.ಎಂ. ನಾರಾಯಣಸ್ವಾಮಿ, ಪ್ರಧಾನ ಕಾರ್ಯದರ್ಶಿ ಎನ್‌.ಎಸ್‌.ಚಂದ್ರಶೇಖರ್‌ ತಿಳಿಸಿದ್ದಾರೆ.

ಶಿಕ್ಷಕರ ವರ್ಗಾವಣೆ ಕಾಯ್ದೆ 2017ರ ಅನ್ವಯ ಶಿಕ್ಷಕರ ವರ್ಗಾವಣೆ ಪ್ರಕ್ರಿಯೆಯನ್ನು ಪ್ರತಿ ವರ್ಷ ಮಾರ್ಚ್‌/ಏಪ್ರಿಲ್‌ ತಿಂಗಳಲ್ಲೇ ಕೈಗೊಳ್ಳಬೇಕು. ಆದರೆ, ಮೂರು ವರ್ಷಗಳಿಂದ ಶಿಕ್ಷಕರ ವರ್ಗಾವಣೆ ಪ್ರಕ್ರಿಯೆ ನಡೆದಿಲ್ಲ. ಮೂರು ವರ್ಷದ ವರ್ಗಾವಣೆಯ ಶೇಕಡ ಮಿತಿಯನ್ನು ಪರಿಗಣಿಸಿ ಪ್ರಸಕ್ತ ವರ್ಗಾವಣೆ ಪ್ರಕ್ರಿಯೆ ಪೂರ್ಣಗೊಳಿಸಬೇಕು ಮತ್ತು ಜೂನ್‌ ತಿಂಗಳಲ್ಲಿ ಮೊತ್ತೊಮ್ಮೆ ವರ್ಗಾವಣೆ ಮಾಡಬೇಕು ಎಂದು ಅವರು ಆಗ್ರಹಿಸಿದ್ದಾರೆ.

ಸೇವಾನಿರತ ಪದವೀಧರ ಶಿಕ್ಷಕರಿಗೆ ಬಡ್ತಿ ನೀಡಬೇಕಿದೆ. ಬಡ್ತಿ ಪ್ರಕರಣ ಸಂಪೂರ್ಣ ಸ್ಥಗಿತವಾಗಿದ್ದು, ಎಲ್ಲದಕ್ಕೂ ‘ಪವಿತ್ರಾ ಪ್ರಕರಣ’ದ ಕಾರಣ ನೀಡಲಾಗುತ್ತಿದೆ. ಕನಿಷ್ಠಪಕ್ಷ ಷರತ್ತುಬದ್ಧ ಬಡ್ತಿ ನೀಡಬೇಕು ಎಂದು ಅವರು ಒತ್ತಾಯಿಸಿದ್ದಾರೆ.

ನೂತನ ಪಿಂಚಣಿ ಯೋಜನೆಗೆ ಸಂಬಂಧಿಸಿದಂತೆ ಸಮಿತಿಯ ವರದಿಯನ್ನು ಪಡೆದು ತಕ್ಷಣ ನೂತನ ಪಿಂಚಣಿ ಯೋಜನೆ ರದ್ದುಗೊಳಿಸಬೇಕು ಎಂದು ಕೋರಿದ್ದಾರೆ.

6ನೇ ವೇತನ ಆಯೋಗಕ್ಕೆ ಸಂಬಂಧಿಸಿದಂತೆ ಆಯೋಗದ ಶಿಫಾರಸಿನ ಅನ್ವಯ ಹಲವಾರು ಆದೇಶ ಹೊರಡಿಸಿದ್ದು, ಮುಖ್ಯಗುರುಗಳಿಗೆ ಹಾಗೂ ಬಡ್ತಿ ಹೊಂದುವವರಿಗೆ ಅವರ ಸೇವಾ ಜೇಷ್ಠತೆಯ ಆಧಾರದ ಮೇಲೆ 10,15,20,25 ವರ್ಷಗಳ ಕಾಲಮಿತಿ ವೇತನ ಬಡ್ತಿಗಳನ್ನು ನೀಡದೇ ಸೇವಾ ಹಿರಿತನದ ಮೂಲಕ ಬಡ್ತಿ ಹೊಂದಿದವರಿಗೆ ಸಾಕಷ್ಟು ಅನ್ಯಾಯವಾಗುತ್ತಿದೆ. 6ನೇ ವೇತನ ಆಯೋಗದ ಶಿಫಾರಸಿನಂತೆ ತಕ್ಷಣ ಆದೇಶ ಹೊರಡಿಸಿ ಬಡ್ತಿ ಹೊಂದಿದ ಮುಖ್ಯಗುರುಗಳಿಗೆ ಆರ್ಥಿಕ ಸೌಲಭ್ಯ ನೀಡಬೇಕು ಎಂದು ಅವರು ಒತ್ತಾಯಿಸಿದ್ದಾರೆ.

ಗ್ರಾಮೀಣ ಕೃಪಾಂಕ ಸೌಲಭ್ಯ ಪಡೆದುಕೊಂಡು ಸೇವೆಯಿಂದ ವಜಾ ಆಗಿರುವ ಶಿಕ್ಷಕರ ಪೂರ್ಣ ಸೇವೆಯನ್ನು ಪರಿಗಣಿಸಿ ಎಲ್ಲ ಸೌಲಭ್ಯ ನೀಡಬೇಕು. ಬಿಎಲ್‌ಒ ಹಾಗೂ ಇನ್ನಿತರ ಶಿಕ್ಷಣೇತರ ಕಾರ್ಯಗಳಿಂದ ಶಿಕ್ಷಕರನ್ನು ಮುಕ್ತಗೊಳಿಸಬೇಕು. ಈ ಎಲ್ಲ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಶಿಕ್ಷಕರ ರ‍್ಯಾಲಿ ನಡೆಯಲಿದೆ ಎಂದು ಅವರು ಜಂಟಿ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 1

  Sad
 • 0

  Frustrated
 • 0

  Angry

Comments:

0 comments

Write the first review for this !