ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಕ್ಕಳು ಬಂದರೂ ಪಾಠ ಮಾಡುವವರಿಲ್ಲ

ಶಿಕ್ಷಕರ ಕೊರತೆಯಿಂದ ಬಳಲುತ್ತಿವೆ ಜಿಲ್ಲೆಯ ಸರ್ಕಾರಿ ಶಾಲೆಗಳು, ಅತಿಥಿ ಶಿಕ್ಷಕರ ನೇಮಕಕ್ಕೂ ವಿಳಂಬ
Last Updated 26 ಅಕ್ಟೋಬರ್ 2021, 4:44 IST
ಅಕ್ಷರ ಗಾತ್ರ

ಕಲಬುರಗಿ: ಇಲ್ಲಿನ ಜೇವರ್ಗಿ ಕಾಲೊನಿಯಲ್ಲಿರುವ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆಯು ಶಿಕ್ಷಕರ ಕೊರತೆಯಿಂದ ಬಳಲುತ್ತಿದೆ. ಪ್ರಸಕ್ತ ವರ್ಷ ಈ ಶಾಲೆಗೆ ಪ್ರವೇಶ ಪಡೆದ ಮಕ್ಕಳ ಸಂಖ್ಯೆ ಗಣನೀಯವಾಗಿ ಹೆಚ್ಚಿದೆ. ಆದರೂ ಶಿಕ್ಷಕರು ಖುಷಿಪಡುವಂತಿಲ್ಲ. ಕಾರಣ, ಮೂರು– ನಾಲ್ಕು ತರಗತಿಗಳಿಗೆ ಒಬ್ಬರೇ ಪಾಠ ಮಾಡುವ ಸ್ಥಿತಿ ಇದೆ.

ಈ ಶಾಲೆಯಲ್ಲಿ ಕಳೆದ ವರ್ಷ 1ರಿಂದ 8ನೇ ತರಗತಿಯವರೆಗೆ 187 ಮಕ್ಕಳ ಹಾಜರಾತಿ ಇತ್ತು. ಆದರೆ, ಪ್ರಸಕ್ತ ವರ್ಷ ಈಗಾಗಲೇ 230 ಮಕ್ಕಳು ಪ್ರವೇಶ ಪಡೆದಿದ್ದಾರೆ. ಇನ್ನೂ ನವೆಂಬರ್‌ 30ರವರೆಗೆ ಪ್ರವೇಶಾವಕಾಶ ಇದೆ. ಇಷ್ಟು ದೊಡ್ಡ ಸಂಖ್ಯೆಯ ಮಕ್ಕಳಿಗೆ ಪಾಠ ಮಾಡಲು ಇಬ್ಬರೇ ಶಿಕ್ಷಕರಿದ್ದಾರೆ!

ಇಲ್ಲಿ 12 ಶಿಕ್ಷಕರ ಹುದ್ದೆ ಮಂಜೂರಾತಿ ಇದೆ. ಸದ್ಯಕ್ಕಿರುವುದು ಆರು ಮಂದಿ ಮಾತ್ರ. ಪ್ರಸಕ್ತ ವರ್ಷದಿಂದ ಇದೇ ಶಾಲೆಯಲ್ಲಿ ಇಂಗ್ಲಿಷ್‌ ಮಾಧ್ಯಮ ತರಗತಿಯನ್ನೂ ಆರಂಭಿಸಲಾಗಿದ್ದು, ಪೂರ್ಣ ಹಾಜರಾತಿಯೂ ಇದೆ. ಈ ತರಗತಿಗಳಿಗೆ ಪ್ರತ್ಯೇಕ ಶಿಕ್ಷಕರನ್ನು ನೀಡಿಲ್ಲ. ಬದಲಾಗಿ, ಇದ್ದವರಲ್ಲೇ ಇಬ್ಬರಿಗೆ ತರಬೇತಿ ನೀಡಲಾಗಿದೆ. ಅವರು ಇಂಗ್ಲಿಷ್‌ ಮಾಧ್ಯಮದ 1ನೇ ತರಗತಿ, ಕನ್ನಡ ಮಾಧ್ಯಮದ 6, 7ನೇ ತರಗತಿಗೆ ಏಕಕಾಲಕ್ಕೇ ಪಾಠ ಮಾಡಬೇಕು. ಉಳಿದ ನಾಲ್ವರಲ್ಲಿ ಒಬ್ಬರು ಮುಖ್ಯಶಿಕ್ಷಕ, ಇನ್ನೊಬ್ಬರು ದೈಹಿಕ ಶಿಕ್ಷಣ ಶಿಕ್ಷಕ. ಸದ್ಯಕ್ಕೆ ಇಬ್ಬರೇ ಇಡೀ ಶಾಲೆಗೆ ಪಾಠ ಮಾಡಬೇಕು.

ಇಲಾಖೆ ಮಾರ್ಗಸೂಚಿಯಂತೆ 20 ಮಕ್ಕಳಿಗೆ ಒಂದು ತಂಡ ಮಾಡಿ ಸರಣಿ ಪ್ರಕಾರ ಪಾಠ ಮಾಡಬೇಕು. ಅದರಂತೆ, ಈ ಶಾಲೆಯಲ್ಲಿ 11 ತಂಡಗಳಿವೆ. ಇಬ್ಬರು ಶಿಕ್ಷಕರು ಎಲ್ಲರಿಗೂ ಪಾಠ ಮಾಡಲು ಹೇಗೆ ಸಾಧ್ಯ? ಎನ್ನುವುದು ಪಾಲಕರ ಪ‍್ರಶ್ನೆ.

ಮಾತ್ರವಲ್ಲ; ಸುಂದರ ನಗರದ ಸರ್ಕಾರಿ ಶಾಲೆಯಲ್ಲೂ 70 ಮಕ್ಕಳಿದ್ದು, ಇಬ್ಬರೇ ಶಿಕ್ಷಕರಿದ್ದಾರೆ. ಅದರಲ್ಲಿ ಒಬ್ಬರು ಮುಖ್ಯಶಿಕ್ಷಕರ ಕೆಲಸ ನಿರ್ವಹಿಸುತ್ತಿದ್ದು, ಒಬ್ಬರು ಮಾತ್ರ 1ರಿಂದ 7ನೇ ತರಗತಿಯ ಮಕ್ಕಳಿಗೆ ಪಾಠ ಮಾಡುವ ಸ್ಥಿತಿ ಇದೆ. ಗ್ರಾಮೀಣ ಪ್ರದೇಶದಲ್ಲಂತೂ ಬಹುತೇಕ ಶಾಲೆಗಳು ಶಿಕ್ಷಕರ ಕೊರತೆ ಕಾರಣ ನರಳುತ್ತಿವೆ.

ಏಕೋಪಾಧ್ಯಾಯ ಶಾಲೆಗಳಿಗೂ ಸಂಕಷ್ಟ: ಜಿಲ್ಲೆಯಲ್ಲಿರುವ ಏಳು ಏಕೋಪಾಧ್ಯಾಯ ಶಾಲೆಗಳ ಸ್ಥಿತಿ ಭಿನ್ನವಾಗಿಲ್ಲ. ಒಬ್ಬರೇ ಶಿಕ್ಷಕ ಪಾಠ, ಸಭೆ, ಇಲಾಖೆಯ ಕಾರ್ಯಕ್ರಮ ಹೀಗೆ ಎಲ್ಲ ಕೆಲಸಗಳನ್ನೂ ಮಾಡಬೇಕಿದೆ. ಅವರಿಗೆ ಆರೋಗ್ಯ ಕೆಟ್ಟರೆ ಅಥವಾ ಅನಿವಾರ್ಯ ರಜೆ ತೆಗೆದುಕೊಂಡರೆ ಇಡೀ ಶಾಲೆಗೆ ಯಾರೂ ದಿಕ್ಕಿಲ್ಲ!

ನಗರದ ಗಾಜೀಪುರದಲ್ಲಿರುವ ಏಕೋಪಾಧ್ಯಾಯ ಶಾಲೆಯಲ್ಲಿ ಈಗಲೂ 26 ಮಕ್ಕಳು ಪ್ರವೇಶ ಪಡೆದಿದ್ದಾರೆ. ಇರುವ ಒಬ್ಬ ಶಿಕ್ಷಕ 1ರಿಂದ 5ನೇ ತರಗತಿವರೆಗೆ ಪಾಠ ಮಾಡಬೇಕಿದೆ.

*

ಸಮವಸ್ತ್ರವೂ ಇಲ್ಲ, ಬೂಟುಗಳೂ ಇಲ್ಲ!

ಎರಡು ವರ್ಷಗಳಿಂದ ಮಕ್ಕಳಿಗೆ ಶಾಲಾ ಸಮವಸ್ತ್ರ ನೀಡಿಲ್ಲ. ಈಗ ಎಲ್ಲ ತರಗತಿಗಳು ಆರಂಭವಾದರೂ ಚಿಣ್ಣರು ಹಳೆಯ, ಹರಕಲು ಸಮವಸ್ತ್ರದಲ್ಲೇ ಬರಬೇಕಿದೆ.

ಸಮವಸ್ತ್ರಗಳನ್ನು ಎರಡು ಕಂತಿನಲ್ಲಿ ನೀಡಲಾಗುತ್ತದೆ. ಮೊದಲಿಗೆ ಮಕ್ಕಳ ಸಂಖ್ಯೆಗೆ ತಕ್ಕಂತೆ ಬಟ್ಟೆ ಸರಬರಾಜು ಮಾಡಿ, ಅವುಗಳನ್ನು ಹೊಲಿಯುವುದಕ್ಕೆ ಹಣ ನೀಡಲಾಗುತ್ತದೆ. ಎರಡನೇ ಕಂತಿನಲ್ಲಿ ರೆಡಿಮೇಡ್‌ ಬಟ್ಟೆ ನೀಡಲಾಗುತ್ತದೆ. ಆದರೆ, ಎರಡು ವರ್ಷಗಳಿಂದ ಶಾಲೆಗಳು ಬಂದ್‌ ಇದ್ದ ಕಾರಣ ಸಮವಸ್ತ್ರ ನೀಡುವ ಆಲೋಚನೆಯನ್ನೂ ಸರ್ಕಾರ ಮಾಡಿಲ್ಲ.

ಬೂಟು, ಸಾಕ್ಸ್‌ ಕೊಳ್ಳುವುದಕ್ಕೆ ಪ್ರತಿ ಮಗುವಿಗೆ ಕನಿಷ್ಠ ₹ 225ರಿಂದ ಗರಿಷ್ಠ ₹ 300 ಹಣ ನೀಡಬೇಕು. ಈ ಹಣವನ್ನೂ ನೀಡಿಲ್ಲ. ಹೀಗಾಗಿ, ಚಿಣ್ಣರು ಬರಿಗಾಲಲ್ಲೇ, ಹರಕು ಸಮವಸ್ತ್ರದಲ್ಲೇ ಶಾಲೆಗೆ ಬರಬೇಕೆ ಎಂಬುದು ಪಾಲಕರಾದ ವಿಜಯಲಕ್ಷ್ಮಿ, ಶೀಲಾ, ಅಪ್ಸರಾಬೇಗಂ ಅವರ ಪ್ರಶ್ನೆ.

*

ಮಕ್ಕಳು– ಶಿಕ್ಷಕರ ಅನುಪಾತದಲ್ಲೂ ವ್ಯತ್ಯಾಸ

‘ಶಿಕ್ಷಣ ನೀತಿಯ ನಿಯಮಾವಳಿಯಂತೆ 30 ಮಕ್ಕಳಿಗೆ ಒಬ್ಬ ಶಿಕ್ಷಕ ಇರಬೇಕು. ಆದರೆ, ಜಿಲ್ಲೆಯಲ್ಲಿ ಕನಿಷ್ಠ 50 ಮಕ್ಕಳಿಗೂ ಒಬ್ಬ ಶಿಕ್ಷಕರಿಲ್ಲ. ಇದರಿಂದ ಮಕ್ಕಳು– ಶಿಕ್ಷಕರ ಮಧ್ಯದ ಅನುಪಾತದಲ್ಲೂ ಸಾಕಷ್ಟು ವ್ಯತ್ಯಾಸ ಉಂಟಾಗಿದ್ದು, ಗುಣಮಟ್ಟದ ಕಲಿಕೆಗೆ ತೊಡಕಾಗಿದೆ’ ಎಂಬುದು ಶಿಕ್ಷಣ ತಜ್ಞರ ಮಾಹಿತಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT