ಮಂಗಳವಾರ, ಸೆಪ್ಟೆಂಬರ್ 21, 2021
28 °C
ಆಳಂದ: ಸರ್ಕಾರಿ ಶಾಲೆಯ ಶಿಕ್ಷಕರ ಮಾದರಿ ನಡೆ

ವಠಾರ ಶಾಲೆಗೆ 80 ಮಕ್ಕಳು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಆಳಂದ: ತಾಲ್ಲೂಕಿನ ಕಮಲಾನಗರದಲ್ಲಿನ ಸರ್ಕಾರಿ ಪ್ರಾಥಮಿಕ ಶಾಲೆಯ ಶಿಕ್ಷಕರು ಕೊರೊನಾ ಹಾವಳಿಯ ನಡುವೆಯೂ ಒಂದು ವಾರದಿಂದ ವಠಾರ ಶಾಲೆ ಆರಂಭಿಸಿ ಮಕ್ಕಳಿಗೆ ಶಿಕ್ಷಣ ನೀಡುತ್ತಿದ್ದಾರೆ.

ಜೂನ್‌ ತಿಂಗಳಲ್ಲಿ ಆರಂಭವಾಗಬೇಕಿದ್ದ ಶಾಲೆಗಳು ಕೊರೊನಾ ಸಂಕಷ್ಟದಿಂದ ಇನ್ನೂ ತೆರದಿಲ್ಲ. ಗ್ರಾಮದ ಮಕ್ಕಳು ಇತ್ತ ಮನೆಯಲ್ಲಿಯೂ ಕುಳಿತುಕೊಳ್ಳದೆ, ಅತ್ತ ಶಾಲೆಗೂ ಹೋಗದೆ ಓದು, ಅಭ್ಯಾಸ ಮರೆಯುವ ಸ್ಥಿತಿ ಕಂಡು ಬಂತು. ಸರ್ಕಾರದ ನಿಯಮ ಪಾಲಿಸುವ ಅನಿವಾರ್ಯತೆ ನಡುವೆ ಇಲ್ಲಿಯ ಶಿಕ್ಷಕರು  ಎಸ್‌ಡಿಎಂಸಿ ಮತ್ತು ಪಾಲಕರ ಮನವೊಲಿಸಿ ವಠಾರ ಶಾಲೆ ಆರಂಭಿಸಿದ್ದಾರೆ.

ಗ್ರಾಮದ ಭಜರಂಗಬಲಿ ದೇವಸ್ಥಾನ, ಮಲ್ಲಯ್ಯ ದೇವಸ್ಥಾನ, ಹನುಮಾನ ದೇವಸ್ಥಾನದಲ್ಲಿ ಈಗ ಮಕ್ಕಳ ಕಲಿಕಾ ಚಟುವಟಿಕೆಗಳು ಶುರುವಾಗಿವೆ. ಶಾಲೆಯಲ್ಲಿ ಒಟ್ಟು 139 ಜನ ವಿದ್ಯಾರ್ಥಿಗಳಿದ್ದಾರೆ. ಇವರಲ್ಲಿ 80 ಮಕ್ಕಳು ಗ್ರಾಮದ ಆಯಾ ಓಣಿಯ ಮಕ್ಕಳಿಗೆ ಅನುಕೂಲವಾಗುವಂತೆ ವಠಾರ ಶಾಲೆ ಆರಂಭಿಸಿದ ಮೇಲೆ ಬರುತ್ತಿದ್ದಾರೆ ಎಂದು ಮುಖ್ಯಶಿಕ್ಷಕ ಗಿರೀಶ ಜಕಾಪುರೆ ತಿಳಿಸಿದರು.

ಕೊರೊನಾ ಭಯವು ಪಾಲಕರಲ್ಲಿ ಇದೆ. ಇದರಿಂದ ಕೆಲ ಪಾಲಕರು ಮಕ್ಕಳಿಗೆ ಶಾಲೆಗೆ ಹೋಗಲು ನಿರಾಕರಿಸುತ್ತಿದ್ದಾರೆ. ನಾವೂ ಸಹ 1ನೇ, 2ನೇ ತರಗತಿ ಮಕ್ಕಳಿಗೆ ವಿನಾಯಿತಿ ನೀಡಿ ಹಿರಿಯ ತರಗತಿ ಮಕ್ಕಳಿಗೆ ಹೆಚ್ಚು ಆದ್ಯತೆ ನೀಡಲಾಗಿದೆ.ಓದು, ಬರಹ, ಸರಳ ಕಲಿಕಾ ಸಾಮರ್ಥ್ಯದ ಚಟುವಟಿಕೆ ಮಾತ್ರ ಕಲಿಸಲಾಗುತ್ತಿದೆ. ಕೊರೊನಾದ ಕುರಿತು ನಿಗದಿತ ಅಂತರ, ಸುರಕ್ಷತೆ, ಸ್ವಚ್ಛತೆ ಹಾಗೂ ಮಾಸ್ಕ್‌ ಧರಿಸುವ ಕುರಿತು ವಿದ್ಯಾರ್ಥಿಗಳಿಗೆ ಮಾಹಿತಿ ನೀಡಲಾಗುತ್ತಿದೆ ಎಂದು ಸಿಆರ್‌ಸಿ ಬಸವರಾಜ ರೋಳೆ ‘ಪ್ರಜಾವಾಣಿ’ಗೆ ತಿಳಿಸಿದರು.

ಸ್ಥಳೀಯ ಪ್ರಾಥಮಿಕ ಆರೋಗ್ಯ ಕೇಂದ್ರದ ಸಿಬ್ಬಂದಿಯಿಂದ ಆರೋಗ್ಯ ತಪಾಸಣೆ ಕೈಗೊಳ್ಳಲಾಗುವುದು. ಮಕ್ಕಳು ಕಲಿಕೆಯಿಂದ ವಂಚಿತರಾಗದಿರಲಿ ಎಂಬ ಉದ್ದೇಶದಿಂದ ಅಗತ್ಯ ಮುನ್ನೆಚ್ಚೆರಿಕೆಯೊಂದಿಗೆ ವಠಾರ ಶಾಲೆ ಆರಂಭಿಸಲಾಗಿದೆ ಎಂದು ಶಿಕ್ಷಕ ಶಿವಾನಂದಯ್ಯ ಸ್ವಾಮಿ ಹೇಳಿದರು.

ಶಿಕ್ಷಕಿಯರಾದ ಸುಮಂಗಲಾ, ಪದ್ಮಾವತಿ, ಸುವರ್ಣಾ, ಸ್ನೇಹಾ, ಸಂಜುಕುಮಾರ, ರೂಪಸಿಂಗ್ ಅವರ ನೇತೃತ್ವದಲ್ಲಿ ಮಕ್ಕಳಿಗೆ ದಿನವೂ ಶಾಲಾ ವಾತಾವರಣ ನಿರ್ಮಿಸುವ ಪ್ರಯತ್ನವು ಗ್ರಾಮಸ್ಥರ ಮೆಚ್ಚುಗೆಗೆ ಪಾತ್ರವಾಗಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.