ಮಂಗಳವಾರ, ಆಗಸ್ಟ್ 20, 2019
27 °C
ರಾಷ್ಟ್ರೀಯ ಹೆದ್ದಾರಿ ಸಂಪರ್ಕ ಕಡಿತ

ಮಸ್ಕಿ: ಕೊಚ್ಚಿಹೋದ ತಾತ್ಕಾಲಿಕ ಸೇತುವೆ

Published:
Updated:
Prajavani

ಮಸ್ಕಿ (ರಾಯಚೂರು ಜಿಲ್ಲೆ): ತಾಲ್ಲೂಕಿನಲ್ಲಿ ಮಂಗಳವಾರ ರಾತ್ರಿ 30 ಮಿಲಿ ಮೀಟರ್‌ ಮಳೆ ಸುರಿದಿದ್ದು, ಸಂತೇಕಲ್ಲೂರ ಬಳಿಯ ಗಡ್ಡಿಹಳ್ಳದಲ್ಲಿ ರಾಷ್ಟ್ರೀಯ ಹೆದ್ದಾರಿ (ಸಂಖ್ಯೆ 150ಎ)ಗೆ ನಿರ್ಮಿಸಿದ್ದ ತಾತ್ಕಾಲಿಕ ಸೇತುವೆ ನೀರಿನ ರಭಸಕ್ಕೆ ಕೊಚ್ಚಿಹೋಗಿದೆ.

ಇದರಿಂದ ಮಸ್ಕಿ– ಲಿಂಗಸುಗೂರು ಮಾರ್ಗದಲ್ಲಿ ವಾಹನಗಳ ಸಂಚಾರ ಸ್ಥಗಿತಗೊಂಡಿದೆ. ಬೀದರ್‌, ಯಾದಗಿರಿ, ಕಲಬುರ್ಗಿ ಕಡೆಯಿಂದ ಮಸ್ಕಿ ಮಾರ್ಗವಾಗಿ ಬಳ್ಳಾರಿ ಮತ್ತು ಬೆಂಗಳೂರಿಗೆ ತೆರಳುವ ವಾಹನಗಳು ಲಿಂಗಸುಗೂರಿನಿಂದ ಮುದಗಲ್ ಹಾಗೂ ಚಿಕ್ಕ ಹೆಸರೂರು ಮಾರ್ಗವಾಗಿ ತೆರಳಬೇಕಾಗಿದೆ.

ಹೆದ್ದಾರಿಯ ಸೇತುವೆ ಶಿಥಿಲಗೊಂಡಿದ್ದು, ಅದರ ಮೇಲೆ ಸಂಚಾರ ನಿಷೇಧಿಸಲಾಗಿದೆ. ಇದಕ್ಕೆ ಪರ್ಯಾಯವಾಗಿ ಸೇತುವೆಯ ಪಕ್ಕದಲ್ಲಿ ಏಳು ತಿಂಗಳ ಹಿಂದೆ ₹ 25 ಲಕ್ಷ ವೆಚ್ಚದಲ್ಲಿ ತಾತ್ಕಾಲಿಕ ಕಿರುಸೇತುವೆ ನಿರ್ಮಿಸಿ ಸಂಚಾರಕ್ಕೆ ಅವಕಾಶ ಕಲ್ಪಿಸಲಾಗಿತ್ತು. ಇದೀಗ ತಾತ್ಕಾಲಿಕ ಸೇತುವೆ ಕೊಚ್ಚಿಹೋಗಿದೆ. 

‘ಗಡ್ಡಿಹಳ್ಳಕ್ಕೆ ಹೊಸ ಸೇತುವೆ ನಿರ್ಮಿಸಲು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದಿಂದ ₹3.5 ಕೋಟಿ ಬಿಡುಗಡೆಯಾಗಿದೆ. ಒಂದು ವಾರದಲ್ಲಿ ಟೆಂಡರ್ ಕರೆಯಲಾಗುವುದು. 45 ದಿನಗಳ ಒಳಗೆ ಸೇತುವೆ ಕಾಮಗಾರಿ ಆರಂಭವಾಗಲಿದೆ. ಕೊಚ್ಚಿಹೋಗಿರುವ ತಾತ್ಕಾಲಿಕ ಸೇತುವೆಯನ್ನು ಮೂರು ದಿನಗಳಲ್ಲಿ ರಿಪೇರಿ ಮಾಡಲಾಗುವುದು’ ಎಂದು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಹುನಗುಂದ ಉಪ ವಿಭಾಗದ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ವಿಜಯಕುಮಾರ ಪಾಟೀಲ ‘ಪ್ರಜಾವಾಣಿ’ಗೆ ತಿಳಿಸಿದರು.

ಮಳೆ: ಬೀದರ್ ನಗರ ಮತ್ತು ಭಾಲ್ಕಿಯಲ್ಲಿ 10 ನಿಮಿಷ ಮಳೆ ಸುರಿಯಿತು.

Post Comments (+)