ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಸುಡಾವೆ ಕಲೆ ಸಂಸ್ಕೃತಿಯ ಜೀವಾಳ’

Last Updated 13 ಅಕ್ಟೋಬರ್ 2018, 12:30 IST
ಅಕ್ಷರ ಗಾತ್ರ

ಕಲಬುರ್ಗಿ: ‘ಸುಡಾವೆ ಮಣ್ಣಿನ ಜಾನಪದ ಶಿಲ್ಪಗಳು ಭಾರತೀಯ ಸಂಸ್ಕೃತಿಯ ಜೀವಾಳವಾಗಿವೆ. ಪ್ರಾಚೀನ ಕಾಲದಿಂದಲೂ ನಮ್ಮ ಸಂಸ್ಕೃತಿಯಲ್ಲಿ ಮಿಳಿತಗೊಂಡಿವೆ’ ಎಂದು ಗುಲಬರ್ಗಾ ವಿಶ್ವವಿದ್ಯಾಲಯದ ಶಿಕ್ಷಣ ನಿಕಾಯದ ಡೀನ್‌ ಪ್ರೊ. ಸುರೇಖಾ ಕ್ಷೀರಸಾಗರ ಹೇಳಿದರು.

ಗುಲಬರ್ಗಾ ವಿಶ್ವವಿದ್ಯಾಲಯದ ದೃಶ್ಯಕಲಾ ಅಧ್ಯಯನ ವಿಭಾಗದಲ್ಲಿ ಈಚೆಗೆ ಆಯೋಜಿಸಿದ್ದ ಸುಡಾವೆ ಮಣ್ಣಿನ ಜಾನಪದ ಶಿಲ್ಪಗಳ ರಚನಾ ಕಾರ್ಯಾಗಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು.

‘ಭಾರತ ಹಳ್ಳಿಗಳ ದೇಶ, ಹಳ್ಳಿಗಳಲ್ಲಿರುವ ಜನರು ಹೆಚ್ಚಿನ ಶಿಕ್ಷಣ ಪಡೆಯದಿದ್ದರೂ ಒಂದಿಲ್ಲೊಂದು ಕಲೆಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ. ಅನೇಕ ಕಲಾ ಪ್ರಕಾರಗಳನ್ನು ಉಳಿಸಿ, ಬೆಳೆಸಿಕೊಂಡು ಬಂದಿದ್ದಾರೆ. ಅಂತಹ ಕಲಾ ಪ್ರಕಾರಗಳನ್ನು ಇಂದಿನ ಯುವ ಪೀಳಿಗೆಗೆ ಪರಿಚಯಿಸುವುದು ಅತ್ಯಂತ ಅವಶ್ಯಕವಾಗಿದೆ’ ಎಂದರು.

ವಿಕಾಸ ಅಕಾಡೆಮಿಯ ಮಾರ್ತಂಡ ಶಾಸ್ತ್ರಿ ಮಾತನಾಡಿ, ‘ಹಿಂದಿನ ಕಾಲದಲ್ಲಿ ಕಲಾವಿದರಿಗೆ ರಾಜಾಶ್ರಯ ಇತ್ತು. ಈಗ ಆ ಕೆಲಸವನ್ನು ಸರ್ಕಾರ ಮಾಡುತ್ತಿದೆ. ಕಲಾವಿದರಿಗೆ ಹಲವಾರು ಯೋಜನೆಗಳು ಇವೆ. ಇಂತಹ ಅವಕಾಶಗಳನ್ನು ಕಲಾ ವಿದ್ಯಾರ್ಥಿಗಳು ಸಮರ್ಪಕವಾಗಿ ಬಳಸಿಕೊಳ್ಳಬೇಕು. ಯಾವುದೇ ಕಲಾ ಪ್ರಕಾರ ಕಲಿಯಬೇಕಾದರೆ ಅದಕ್ಕೆ ಬದ್ಧತೆ ಅತ್ಯಗತ್ಯ. ಆದ್ದರಿಂದ ಈ ಕಾರ್ಯಾಗಾರದಲ್ಲಿ ಪಾಲ್ಗೊಳ್ಳುವ ಪ್ರತಿಯೊಬ್ಬರು ಬದ್ಧತೆಯನ್ನು ತೋರಬೇಕು. ಇದು ತಮಗೆ ಸಿಕ್ಕ ಅವಕಾಶ ಎಂದು ಪರಿಗಣಿಸಬೇಕು’ ಎಂದು ಹೇಳಿದರು.

ದೃಶ್ಯಕಲಾ ವಿಭಾಗದ ಸಂಯೋಜಕಿ ಪ್ರೊ.ಪರಿಮಳಾ ಅಂಬೇಕರ್ ಮಾತನಾಡಿ, ‘ದೃಶ್ಯಕಲಾ ವಿಭಾಗದಲ್ಲಿ ರಚನೆಗೊಂಡ ಕಲಾಕೃತಿಗಳನ್ನು ಪ್ರತಿಯೊಬ್ಬರಿಗೂ ತಲುಪಿಸಲು ಅನುಕೂಲವಾಗುವಂತೆ ನಗರದಲ್ಲಿ ಅಥವಾ ವಿಶ್ವವಿದ್ಯಾಲಯದ ಆವರಣದಲ್ಲಿ ಕಾಯಂ ಕಲಾಮಳಿಗೆ ಸ್ಥಾಪಿಸಲು ಕುಲಪತಿ ಪ್ರೊ.ಎಸ್.ಆರ್.ನಿರಂಜನ ಆಸಕ್ತಿ ತೋರಿಸಿದ್ದಾರೆ. ಇದರಿಂದ ಕಲಾವಿದರಿಗೆ ತಾವು ರಚಿಸಿದ ಕಲಾಕೃತಿಗಳ ಪ್ರದರ್ಶನ ಮತ್ತು ಮಾರಾಟ ಮಾಡಲು ಅನುಕೂಲವಾಗಲಿದೆ’ ಎಂದರು.

ಹಿರಿಯ ಶಿಲ್ಪಕಲಾವಿದ ಮಾನಯ್ಯ ಬಡಿಗೇರ ಇದ್ದರು. ನಟರಾಜ ಶಿಲ್ಪಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಡಾ. ಕಾಶೀನಾಥ ಡಿ.ವಡ್ಡರ ನಿರೂಪಿಸಿ, ಡಾ. ಪರಶುರಾಮ ಪಿ. ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT