ಸೋಮವಾರ, ಡಿಸೆಂಬರ್ 16, 2019
25 °C
ಕಾಳಗಿ ತಹಶೀಲ್ ಕಚೇರಿ ಸಿಬ್ಬಂದಿ ಬಗ್ಗೆ ಅಸಮಾಧಾನ

ಕಾಳಗಿ | ಜೀವ ಹಿಂಡುವ ತಹಶೀಲ್ದಾರ್ ಕಚೇರಿ ಸಿಬ್ಬಂದಿ: ಫಲಾನುಭವಿಗಳ ಆರೋಪ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕಾಳಗಿ (ಕಲಬುರ್ಗಿ ಜಿಲ್ಲೆ): ಪಟ್ಟಣದಲ್ಲಿರುವ ತಹಶೀಲ್ದಾರ್‌ ಕಚೇರಿಯಲ್ಲಿ ಸಾರ್ವಜನಿಕ ಸಣ್ಣಪುಟ್ಟ ಕೆಲಸಗಳಿಗೂ ಕೆಲ ಸಿಬ್ಬಂದಿ ಹಣ ಕೇಳುತ್ತಾರೆ. ಹಣ ಕೊಡದಿದ್ದಲ್ಲಿ ಕೆಲಸ ಮಾಡದೆ ವಿನಾ ಕಾರಣ ಸತಾಯಿಸುತ್ತಾರೆ ಎಂದು ಜನರು ದೂರಿದ್ದಾರೆ.

‘ಸಾಮಾಜಿಕ ಭದ್ರತಾ ಯೋಜನೆಯಡಿ ಅರ್ಜಿ ಸಲ್ಲಿಸಲು ಕಚೇರಿಗೆ ಬರುವ ಬಡ ಜನತೆಗೆ ಸಿಬ್ಬಂದಿ ಸರಿಯಾಗಿ ಸ್ಪಂದಿಸುವುದಿಲ್ಲ. ಏನಾದರೂ ಮಾಹಿತಿ ಕೇಳಿದರೆ ಬೇಕಾಬಿಟ್ಟಿಯಾಗಿ ವರ್ತಿಸುತ್ತಾರೆ. ಹಣ ನೀಡದಿದ್ದಾಗ ಕಂಪ್ಯೂಟರ್ ನಲ್ಲಿ ಅರ್ಜಿ ತಪ್ಪು ತಪ್ಪಾಗಿ ಬರೆಯುತ್ತಾರೆ’ ಎಂದು ಯುವ ಮುಖಂಡ ರಾಜೇಂದ್ರಬಾಬು ಹೀರಾಪುರ ಆರೋಪಿಸಿದ್ದಾರೆ.

‘ರೈತರ ಜಮೀನುಗಳಿಗೆ ಸಂಬಂಧಿಸಿ ಪಹಣಿ ತಿದ್ದುಪಡಿ, ಮುಟೇಶನ್, ಬ್ಯಾಂಕ್ ಸಾಲ ಮುಕ್ತಿ, ಹಕ್ಕು ಬದಲಾವಣೆ ಇತ್ಯಾದಿ ಕೆಲಸಗಳಿಗೆ ಹಣ ನೀಡಿದರೆ ಮಾತ್ರ ಯಾವುದೇ ನೀತಿ, ನಿಯಮಗಳಿಲ್ಲದೆ ಬೇಗ ಕೆಲಸ ಮಾಡಿಕೊಡುತ್ತಾರೆ. ಒಂದು ವೇಳೆ ಕಾಗದ ಪತ್ರಗಳು ಎಷ್ಟೇ ಸರಿಯಾಗಿದ್ದರೂ ಹಣ ಕೊಡದೆ ಹೋದರೆ ಕಾಲಹರಣ ಮಾಡಿ ಇಲ್ಲಸಲ್ಲದ ನೆಪ ಹೇಳಿ ಅರ್ಜಿ ತಿರಸ್ಕರಿಸುತ್ತಾರೆ’ ಎಂದು ಪ್ರತ್ಯಕ್ಷದರ್ಶಿಗಳು ಆಪಾದಿಸಿದ್ದಾರೆ.

‘ಯೋಜನಾ ನಿರಾಶ್ರಿತ, ಸಿಂಧುತ್ವಕ್ಕೆ ಸಂಬಂಧಿಸಿ ಫಲಾನುಭವಿಗಳಿಂದ ಕನಿಷ್ಠ ₹20,000 ಪಡೆಯದೆ ಕೆಲಸ ಮಾಡಿಕೊಡುವುದಿಲ್ಲ. ಈ ಬಗ್ಗೆ ಗ್ರೇಡ್-2 ತಹಶೀಲ್ದಾರ್ ಶಾಂತಗೌಡ ಬಿರಾದಾರ ರಾಜಾರೋಷವಾಗಿ ಹಣ ಕೇಳುತ್ತಾರೆ. ಅನೇಕರಲ್ಲಿ ಇವರು ಹಣ ಪಡೆದಿದ್ದಾರೆ’ ಎಂದು ಗ್ರಾಮ ಪಂಚಾಯಿತಿ ಮಾಜಿ ಸದಸ್ಯ ಸಂತೋಷ ಕಡಬೂರ ಗಂಭೀರ ಆರೋಪ ಮಾಡಿದ್ದಾರೆ.

‘ಗ್ರೇಡ್-2 ತಹಶೀಲ್ದಾರ್ ಶಾಂತಗೌಡ ಬಿರಾದಾರ ಅವರು ಕೆಲ ಆರ್ಥಿಕ ಸ್ಥಿತಿವಂತರಿಂದ ಸಿಕ್ಕಾಪಟ್ಟೆ ಹಣ ಪಡೆದು ಬಡವರ ಜಮೀನನ್ನು ಅವರ ಹೆಸರಿಗೆ ಹಕ್ಕು ಬದಲಾವಣೆ ಮಾಡಿದ್ದಾರೆ. ಮತ್ತು ಅರ್ಹತೆ ಇಲ್ಲದವರಿಗೆ ಮಾಸಾಶನ ಮಂಜೂರು ಮಾಡಿದ್ದಾರೆ. ಸೀದಾ ಸಾದಾ ವ್ಯಕ್ತಿಗಳ ಕೆಲಸಕ್ಕೆ ಕಂಪ್ಯೂಟರ್, ನೆಟ್ವರ್ಕ್ ಸಮಸ್ಯೆ ಇದೆ ಎಂದು ನೆಪ ಹೇಳುತ್ತ ಜನರನ್ನು ಸುಮ್ಮನೆ ಓಡಾಡಿಸಿಕೊಳ್ಳುತ್ತಾರೆ’ ಎಂದು ಅಣ್ಣರಾವ ಸಲಗರ ದೂರಿದ್ದಾರೆ.

ಈ ಕುರಿತು ಮೇಲಧಿಕಾರಿಗಳು ಪರಿಶೀಲನೆ ಮಾಡಿ ತಪ್ಪಿತಸ್ಥ ಸಿಬ್ಬಂದಿ ಮೇಲೆ ಸೂಕ್ತ ಕ್ರಮ ಕೈಗೊಳ್ಳಬೇಕು’ ಎಂದು ಜನರು ಆಗ್ರಹಿಸಿದ್ದಾರೆ.

ಪ್ರತಿಕ್ರಿಯಿಸಿ (+)