ಚಿಂಚೋಳಿ: ಶತಮಾನದ ಚಾರಿತ್ರಿಕ ಹಿರಿಮೆ ಹೊಂದಿರುವ ತಾಲ್ಲೂಕಿನ ಚಿಮ್ಮನಚೋಡ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಗುರುವಾರ ಶೌಚಾಲಯ ಸೌಲಭ್ಯ ಕಲ್ಪಿಸಲಾಗಿದೆ.
ಶಾಲೆಯ 316 ಮಕ್ಕಳು ಮತ್ತು 10 ಶಿಕ್ಷಕಿಯರು ಹಾಗೂ 5 ಶಿಕ್ಷಕರು ಶೌಚಾಲಯ ಇಲ್ಲದೇ ತೊಂದರೆ ಅನುಭವಿಸುತ್ತಿದ್ದರು. ಈ ಕುರಿತು ಬುಧವಾರ (ಆ.9) ಪ್ರಜಾವಾಣಿ ಪತ್ರಿಕೆಯಲ್ಲಿ ವರದಿ ಪ್ರಕಟವಾಗಿತ್ತು.
ವರದಿಗೆ ಸ್ಪಂದಿಸಿದ ಚಿಮ್ಮನಚೋಡ ಗ್ರಾಮ ಪಂಚಾಯಿತಿ ನೂತನ ಅಧ್ಯಕ್ಷ ಮಲ್ಲಿಕಾರ್ಜುನರಡ್ಡಿ ನರನಾಳ್ ಅವರ ಮುತುವರ್ಜಿಯಿಂದ ಸರ್ಕಾರಿ ಶಾಲೆ ಮಕ್ಕಳು ಶೌಚಾಲಯ ಸೌಲಭ್ಯ ಪಡೆದಿದೆ.
ಮಕ್ಕಳಿಗೆ ತುರ್ತಾಗಿ ತಾತ್ಕಾಲಿಕ ಸೌಲಭ್ಯ ಕಲ್ಪಿಸಲು ಎರಡು ಶೌಚಾಲಯ (ಹೆಣ್ಣು ಮತ್ತು ಗಂಡು ಮಕ್ಕಳಿಗೆ ಪ್ರತ್ಯೇಕ) ನಿರ್ಮಿಸಲಾಗಿದೆ. ರೆಡಿಮೇಡ್ ಶೌಚಾಲಯ ತಂದು ಅದರಲ್ಲಿ ಕುಡ್ಡಿ ಕೂಡಿಸಲಾಗಿದೆ. ನೀರಿನ ಸೌಲಭ್ಯ ಜತೆಗೆ ಆವರಣದಲ್ಲಿ ನೀರು ನಿಂತು ಆಗುತ್ತಿದ್ದ ಕೆಸರಿಗೂ ಮುಕ್ತಿ ನೀಡಲಾಗಿದೆ.
ದೌಡಾಯಿಸಿದ ಶಿಕ್ಷಣ ಇಲಾಖೆ ಅಧಿಕಾರಿಗಳು: ‘ಪ್ರಜಾವಾಣಿ’ಯಲ್ಲಿ ವರದಿ ಪ್ರಕಟವಾದ ಹಿನ್ನೆಲೆಯಲ್ಲಿ ಶಿಕ್ಷಣ ಸಂಯೋಜಕ ಅಶೋಕ ಹೂವಿನಭಾವಿ, ಸಿಆರ್‌ಪಿ ವಿಜಯಕುಮಾರ ಅವರು ಬುಧವಾರ ಶಾಲೆಗೆ ದೌಡಾಯಿಸಿದರು.
ಶಾಲೆಯಲ್ಲಿ ಮಕ್ಕಳ ಹಾಗೂ ಶಿಕ್ಷಕರ ಸಮಸ್ಯೆಗಳ ಮಾಹಿತಿ ಪಡೆದುಕೊಂಡರಲ್ಲದೇ, ಮುಖ್ಯ ಶಿಕ್ಷಕರು, ಗ್ರಾ.ಪಂ. ಮತ್ತು ಶಿಕ್ಷಣ ಇಲಾಖೆಯ ಅಧಿಕಾರಿಗಳಿಗೆ ಶೌಚಾಲಯ ಮತ್ತು ಕುಡಿಯುವ ನೀರಿನ ಸೌಲಭ್ಯಕ್ಕಾಗಿ ಕ್ರಮ ಕೈಗೊಳ್ಳಲು ಕೋರಿ ಬರೆದ ಪತ್ರಗಳ ವಿವರಣೆ ಪಡೆದು ಮರಳಿದರು.
ಹಳೆಯ ಶೌಚಾಲಯವನ್ನು ಇಲಾಖೆಯ ಅನುಮತಿ ಇಲ್ಲದೇ ನೆಲಸಮಗೊಳಿಸಲಾಗಿದೆ. ಈ ಕುರಿತು ಸೂಕ್ತ ಕ್ರಮಕ್ಕಾಗಿ ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ವರದಿ ನೀಡಿದ್ದೇನೆ.ಅಶೋಕ ಹೂವಿನಭಾವಿ, ಶಿಕ್ಷಣ ಸಂಯೋಜಕ
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.