ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜೀವನದಿ ಕಾಗಿಣಾದಲ್ಲಿ ನೀರು ಸಂಗ್ರಹ, ಸೇಡಂಗೆ ಸದ್ಯಕ್ಕಿಲ್ಲ ನೀರಿನ ಸಮಸ್ಯೆ

Last Updated 30 ಏಪ್ರಿಲ್ 2021, 4:39 IST
ಅಕ್ಷರ ಗಾತ್ರ

ಸೇಡಂ: ತಾಲ್ಲೂಕಿನ ಜೀವನದಿ ಕಾಗಿಣಾದಲ್ಲಿ ಸಾಕಷ್ಟು ನೀರು ಸಂಗ್ರಹವಾಗಿದ್ದು, ಇದರಿಂದ ಈ ವರ್ಷ ಬೇಸಿಗೆಯ ದಿನಗಳಲ್ಲಿ ಸೇಡಂ ಪಟ್ಟಣಕ್ಕೆ ಕುಡಿವ ನೀರಿನ ಸಮಸ್ಯೆ ಎದುರಾಗುವ ಸಾಧ್ಯತೆ ಇಲ್ಲ. ಈಗಿರುವ ಅಂದಾಜಿನ ಪ್ರಕಾರ ಜೂನ್ ತಿಂಗಳು ಸಹ ಈ ನೀರು ಪೂರೈಕೆಗೆ ಯಾವುದೆ ಅಡ್ಡಿ ಇಲ್ಲ.

35 ಸಾವಿರಕ್ಕೂ ಅಧಿಕ ಜನಸಂಖ್ಯೆ ಹೊಂದಿರುವ ಪಟ್ಟಣಕ್ಕೆ ಕಾಗಿಣಾ ನೀರೇ ಆಧಾರ. ಸುಮಾರು 5 ಕಿ.ಮೀ ದೂರದ ಸಟಪಟನಹಳ್ಳಿ ಗ್ರಾಮದ ಬಳಿಯಿಂದ ನೀರನ್ನು ಪಟ್ಟಣಕ್ಕೆ ಪೈಪ್‌ಲೈನ್‌ ಮೂಲಕ ತರಲಾಗುತ್ತದೆ. ಈ ವರ್ಷ ಭಾರಿ ಮಳೆಯಾಗಿರುವುದರಿಂದ ನದಿಯಲ್ಲಿ ಸಾಕಷ್ಟು ನೀರಿದೆ. ಜೊತೆಗೆ ಕಾಗಿಣಾ ನದಿಗೆ ವಿವಿಧೆಡೆಗಳಲ್ಲಿ ಜಾಕ್‌ವೆಲ್‌ಗಳನ್ನು ಹಾಕಿ ಸಂಗ್ರಹಿಸಲಾಗಿದೆ. ಇದರಿಂದಾಗಿ ನೀರಿನ ಸಮಸ್ಯೆ ಎದುರಾಗುವುದು ತೀರಾ ವಿರಳ ಎಂಬುದು ಅಧಿಕಾರಿಗಳ ಮಾತು.

‘ಪಟ್ಟಣದಲ್ಲಿ 6 ದೊಡ್ಡ ನೀರಿನ ಟ್ಯಾಂಕ್‌ಗಳಿದ್ದು, ಅವುಗಳಿಗೆ ನೀರು ಸಂಗ್ರಹಿಸಿ, ನಂತರ ಬಿಡಲಾಗುತ್ತದೆ. ಜೊತೆಗೆ 48 ವಿದ್ಯುತ್ ಚಾಲಿತ ಬೋರ್‌ವೆಲ್‌ ಇವೆ. ಅಲ್ಲದೇ 67 ಹ್ಯಾಂಡ್‌ಪಂಪ್‌ ಇದ್ದು, ಅದರಲ್ಲಿ 40 ಚಾಲ್ತಿಯಲ್ಲಿವೆ. ಪಟ್ಟಣದ ಎಲ್ಲಾ ಬಡಾವಣೆಗಳಲ್ಲಿ ನೀರು ಸಂಪೂರ್ಣ ಪೂರೈಕೆಯಾಗುತ್ತಿದೆ. ಪೈಪ್‌ಲೈನ್‌ ದುರಸ್ತಿ ಸೇರಿದಂತೆ, ನೀರು ಸೋರಿಕೆಯಂತಹ ಸಣ್ಣಪುಟ್ಟ ಸಮಸ್ಯೆಗಳು ಹೊರತುಪಡಿಸಿ ಪಟ್ಟಣದಲ್ಲಿ ಯಾವುದೇ ರೀತಿಯ ಕುಡಿವ ನೀರಿನ ಸಮಸ್ಯೆ ಇಲ್ಲ’ ಎನ್ನುತ್ತಾರೆ ಪುರಸಭೆ ಮುಖ್ಯಾಧಿಕಾರಿ ಸತೀಶ ಗುಡ್ಡೆ

ಪ್ರತಿವ್ಯಕ್ತಿಗೆ 150 ಲೀಟರ್‌ ನೀರು ಎಂದು ಲೆಕ್ಕ ಹಿಡಿದರೂ 52 ಲಕ್ಷ ಲೀಟರ್ ಅವಶ್ಯಕತೆ ಇದೆ. ಜೊತೆ ನಾವು ಇನ್ನಿತರ ಕ್ಷೇತ್ರಗಳಿಗೆ ನೀರಿನ ಅವಶ್ಯಕತೆ ಇರುವುದನ್ನು ಆಧಾರವಾಗಿಟ್ಟುಕೊಂಡು ಸುಮಾರು 70 ಲಕ್ಷ ಲೀಟರ್‌ಗೂ ಅಧಿಕ ನೀರನ್ನು ಪೂರೈಸುತ್ತಿದ್ದೇವೆ ಎಂದೂ ಅವರು ‘ಪ್ರಜಾವಾಣಿ’ಗೆ ಮಾಹಿತಿ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT