ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತೊಗರಿಗೆ ಅವೈಜ್ಞಾನಿಕ ಬೆಂಬಲ ಬೆಲೆ: ಆಕ್ರೋಶ

ಸರ್ಕಾರದ ನಡೆಗೆ ರೈತರು ಬೇಸರ; ಖರೀದಿ ಕೇಂದ್ರಗಳಿಗೆ ನೀಡಲು ನಿರಾಸಕ್ತಿ
Last Updated 13 ಜೂನ್ 2021, 4:36 IST
ಅಕ್ಷರ ಗಾತ್ರ

ಕಲಬುರ್ಗಿ: ಕೇಂದ್ರ ಸರ್ಕಾರ ಈ ಬಾರಿ ತೊಗರಿಗೆ ಕೇವಲ ₹ 6,300 ಬೆಂಬಲ ಬೆಲೆ ಘೋಷಿಸಿದೆ. ಇದರಿಂದ ಬೇಸರಗೊಂಡ ರೈತರು ಖರೀದಿ ಕೇಂದ್ರಗಳ ಗೊಡವೆಯೇ ಬೇಡವೆಂದು, ನೇರವಾಗಿ ಮಾರುಕಟ್ಟೆಗೆ ಉತ್ಪನ್ನ ಸಾಗಿಸುತ್ತಿದ್ದಾರೆ.

ಕಳೆದ ವರ್ಷ ₹ 6000 ಬೆಂಬಲ ಬೆಲೆ ಇತ್ತು. ಆಗ ತೊಗರಿ ದರ ₹ 5800ಕ್ಕೆ ಕುಸಿದಿದ್ದರಿಂದ ಹಲವು ರೈತರು
ಖರೀದಿ ಕೇಂದ್ರಗಳಿಗೆ ನೀಡಿದರು. ಆದರೆ, ಪ್ರಸಕ್ತ ವರ್ಷ ಮಾರುಕಟ್ಟೆಯಲ್ಲೇ
ಪ್ರತಿ ಕ್ವಿಂಟಲ್‌ಗೆ ₹ 6200ರಿಂದ ₹ 6300 ದರ ಇದೆ. ಹಾಗಿದ್ದ ಮೇಲೆ ಖರೀದಿ ಕೇಂದ್ರಕ್ಕೆ ಏಕೆ ಅಲೆದಾಡಬೇಕು ಎಂಬ
ನಿರ್ಧಾರಕ್ಕೆ ಹಲವು ರೈತರು
ಬಂದಿದ್ದಾರೆ.‌

ಹೆಸರು ಬೆಳೆಗೆ ₹ 7279 ಬೆಂಬಲ ಬೆಲೆ ನೀಡಲಾಗಿದೆ. ಲೆಕ್ಕದ ಪ್ರಕಾರ ತೊಗರಿ ಬೆಳೆಯಲು ಹೆಚ್ಚು ಸಮಯ ಹಾಗೂ ಹೆಚ್ಚು ಬಂಡವಾಳ ಹಾಕಬೇಕಾಗುತ್ತದೆ. ಹಾಗಾಗಿ, ಹೆಸರಿಗಿಂತ ತೊಗರಿಗೆ ₹ 1000 ಹೆಚ್ಚೇ ದರ ಇರಬೇಕಾದದ್ದು ನ್ಯಾಯ ಎಂಬುದು ರೈತರಾದ ಶಿವರುದ್ರಯ್ಯ ಮಠ, ಸಣ್ಣ ಶರಣಪ್ಪ ಬಿರಾದಾರ ಅವರ ಅನಿಸಿಕೆ.

ಕಳೆದ ವರ್ಷ ಕೇಂದ್ರ ಸರ್ಕಾರ ₹ 10 ಸಾವಿರ ದರ ನೀಡಿ ವಿದೇಶದ ತೊಗರಿ ಖರೀದಿ ಮಾಡಿದೆ. ಆದರೆ, ಅದಕ್ಕಿಂತಲೂ ಉತ್ಕೃಷ್ಟವಾದ ರೈತರ ತೊಗರಿಗೆ ಕೇವಲ ₹ 6000 ದರ ನೀಡಿ ಖರೀದಿಸಿದೆ. ಸಾಕಷ್ಟು ಹೋರಾಟ ಮಾಡಿದ ಮೇಲೆ ಈ ವರ್ಷ ಕೇವಲ ₹ 300 ಹೆಚ್ಚಿಸಿದ್ದಾರೆ. ಮೇಲಾಗಿ, ರೈತರು ಬೆಳೆದ ಎಲ್ಲ ತೊಗರಿಯನ್ನೂ ಖರೀದಿಸುವುದಿಲ್ಲ. ಅದಕ್ಕೂ
ಲಿಮಿಟ್‌ ಮಾಡಿದ್ದು ಖಂಡನಾರ್ಹ ಎನ್ನುತ್ತಾರೆ ಅವರು.

ಕನಿಷ್ಠ ₹ 8 ಸಾವಿರ ನೀಡಿ

‌ಒಂದು ಎಕರೆ ತೊಗರಿ ಬೆಳೆಯಲು ₹ 22 ಸಾವಿರ ಖರ್ಚಾಗುತ್ತದೆ. ಸಾಧಾರಣವಾಗಿ ಪ್ರತಿ ಎಕರೆಗೆ ಮೂರು ಕ್ವಿಂಟಲ್‌ ಬೆಲೆಯುತ್ತೇವೆ. ಸದ್ಯ ಸರ್ಕಾರ ₹ 6300 ದರ ನೀಡಿದೆ. ಪ್ರತಿ ಎಕರೆಗೆ ₹ 18,900 ಮಾತ್ರ ಗಳಿಕೆಯಾಯಿತು. ಅಂದರೆ, ಖರ್ಚು ಮಾಡಿದ್ದಕ್ಕಿಂತ ಸರ್ಕಾರದ ಬೆಂಬಲ ಬೆಲೆಯೇ ಕಡಿಮೆ ಇದೆ. ಕನಿಷ್ಠ ₹ 8 ಸಾವಿರ ಘೋಷಿಸಿದರೆ ಮಾತ್ರ ರೈತರು ಬದುಕಲು ಸಾಧ್ಯ.

–ಮಲ್ಲಿನಾಥ ಕೋಳೂರ,ಮೇಳಕುಂದ–ಬಿ ಗ್ರಾಮದ ರೈತ

ಸಿಎಂಗೆ ಮನವರಿಕೆ ಮಾಡುವೆ

ತೊಗರಿಗಿಂತ ಹೆಸರಿಗೆ ಹೆಚ್ಚು ಬೆಂಬಲ ಬೆಲೆ ಘೋಷಿಸಿದ್ದಾರೆ ಎಂಬುದು ಸಮಸ್ಯೆ ಅಲ್ಲ. ಆದರೆ, ತೊಗರಿಗೂ ಹೆಚ್ಚು ದರ ನೀಡಬೇಕಿತ್ತು ಎಂಬುದು ಸದ್ಯ. ಆದರೆ, ಮೊದಲಿನಿಂದಲೂ ಹೆಸರಿಗೇ ಹೆಚ್ಚಿನ ದರ ಸಿಗುತ್ತಿದೆ. ಸರ್ಕಾರಕ್ಕೆ ಇದರ ಬಗ್ಗೆ ಯಾರೋ ತಪ್ಪು ಮಾಹಿತಿ ನೀಡಿದಂತಿದೆ. ಈ ಬಗ್ಗೆ ಮುಖ್ಯಮಂತ್ರಿ ಯಡಿಯೂರಪ್ಪ ಅವರನ್ನು ಭೇಟಿಯಾಗಿ ತೊಗರಿ ಬೆಳೆದ ರೈತರ ಸ್ಥಿತಿ ಬಗ್ಗೆ ಮನವರಿಕೆ ಮಾಡುತ್ತೇನೆ.

–ಲಿಂಗಾರೆಡ್ಡಿಗೌಡ ಬಾಸರೆಡ್ಡಿ ಗೌಡ,ಅಧ್ಯಕ್ಷ, ದ್ವಿದಳ ಧಾನ್ಯ ಅಭಿವೃದ್ಧಿ ಮಂಡಳಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT