ಶುಕ್ರವಾರ, ಅಕ್ಟೋಬರ್ 23, 2020
26 °C
ಬಳವಡ್ಗಿ, ಕಡಬೂರು, ದೇವಾಪೂರ, ಕೊಂಚೂರು ಸಂಪರ್ಕ ಕಡಿತ

ವಾಡಿ: ಸಾವಿರಾರು ಎಕರೆ ಪ್ರದೇಶ ಜಲಾವೃತ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ವಾಡಿ: ಮಂಗಳವಾರ ರಾತ್ರಿ ಬಿರುಗಾಳಿ ಸಹಿತ ಸುರಿದ ಮಳೆಗೆ ಹಲವು ಗ್ರಾಮಗಳ ಸಂಪರ್ಕ ಕಡಿತಗೊಂಡಿದೆ. ಗಿಡಮರಗಳು ನೆಲಕ್ಕುರುಳಿವೆ.

ರಾಷ್ಟ್ರೀಯ ಹೆದ್ದಾರಿ ಮೇಲಿರುವ ಹಲಕರ್ಟಿ ಗ್ರಾಮಕ್ಕೆ ಹೊಂದಿಕೊಂಡು ಹರಿಯುವ ಹಳ್ಳ ಅಪಾಯದ ಮಟ್ಟ ಮೀರಿ ಹರಿಯುತ್ತಿದೆ. ಕೊಂಚೂರು, ಬಳವಡ್ಗಿ, ಕಡಬೂರು ಗ್ರಾಮಗಳ ಮೂಲಕ ಹಾಯ್ದು ಭೀಮಾ ನದಿ ಸೇರುವ ಹಳ್ಳ ದಾರಿಯುದ್ದಕ್ಕೂ ಭಾರಿ ಆತಂಕ ಸೃಷ್ಟಿಸಿದೆ. ನೀರಿನಿಂದ ದೇವಾಪೂರ, ಕೊಂಚುರು, ಕಡಬೂರು ಹಾಗೂ ಬಳವಡ್ಗಿ ಗ್ರಾಮಗಳು ಸಂಪರ್ಕ ಕಡಿದುಕೊಂಡಿವೆ.

ಹಳ್ಳದಲ್ಲಿ ಕಲ್ಲು ಗಣಿಗಳ ತ್ಯಾಜ್ಯ ಸುರಿಯಲಾಗಿದೆ. ಗಿಡಗಂಟಿಗಳು ಬೆಳೆದಿದ್ದು ನೀರಿನ ಸರಾಗ ಹರಿಯುವಿಕೆಗೆ ತೊಡಕುಂಟು ಮಾಡಿದೆ. ಬಳವಡ್ಗಿ ಗ್ರಾಮದ ಸುಮಾರು 100ಕ್ಕೂ ಅಧಿಕ ಮನೆಗಳಿಗೆ ನುಗ್ಗಿದ ಹಳ್ಳದ ನೀರು ಅಪಾರ ಹಾನಿಗೆ ಕಾರಣವಾಗಿದೆ. ಮಂಗಳವಾರ ಇಡೀ ರಾತ್ರಿ ಗ್ರಾಮಸ್ಥರು ಜಾಗರಣೆ ಮಾಡಿದ್ದಾರೆ. ರೇಣುಕಾ ಯಲ್ಲಮ್ಮ ದೇವಸ್ಥಾನದ ಸುತ್ತ 8 ಅಡಿಗೂ ಅಧಿಕ ನೀರು ನಿಂತಿದೆ.

ರೇಣುಕಾ ಯಲ್ಲಮ್ಮ ಬಡಾವಣೆ, ಅಂಬೇಡ್ಕರ್ ಬಡಾವಣೆಗಳು ಸಂಪೂರ್ಣ ನೀರಲ್ಲಿ ನಿಂತಿದ್ದು, ಜನರು ಸಹಾಯಕ್ಕಾಗಿ ಅಂಗಲಾಚುತ್ತಿರುವುದು ಕಂಡುಬಂದಿತು. ಬಹುತೇಕ ಬಡ ಕೂಲಿಕಾರ್ಮಿಕರೇ ವಾಸಿಸುವ ಬಳವಡ್ಗಿ ಗ್ರಾಮಕ್ಕೆ ಈ ತಿಂಗಳಲ್ಲಿ ನಾಲ್ಕನೇ ಬಾರಿ ಪ್ರವಾಹ ಅಪ್ಪಳಿಸಿದೆ. ಪ್ರವಾಹಕ್ಕೆ ಜನರ ಸಾಮಾನು ಸರಂಜಾಮು ಹಾಗೂ ದವಸ ಧಾನ್ಯಗಳು ಕೊಚ್ಚಿ ಹೋಗಿವೆ.

‘ಮನೆಹೊಕ್ಕ ನೀರು ತಳಪಾಯ ಸಡಿಲಿಸಿದೆ. ಇರುವ ಸೂರು ಕಳೆದುಕೊಂಡು ಬಯಲೇ ಗತಿಯಾಗುವ ಆತಂಕ ಉಂಟಾಗಿದೆ. ನಮ್ಮ ಗೋಳು ಕೇಳಲು ಯಾವ ಜನಪ್ರತಿನಿಧಿಗಳು ಬಂದಿಲ್ಲ’ ಎಂದು ‘ಪ್ರಜಾವಾಣಿ’ ಬಳಿ ಜನರು ಅಳಲು ತೋಡಿಕೊಂಡರು.

ತಾಲ್ಲೂಕು ಆಡಳಿತದ ವತಿಯಿಂದ ಕೊಂಚೂರು ಆಂಜನೇಯ ದೇವಸ್ಥಾನದಲ್ಲಿ 300 ಜನ ಸಂತ್ರಸ್ತರು ಉಳಿದುಕೊಳ್ಳಲು ಪರಿಹಾರ ಕೇಂದ್ರ ಸ್ಥಾಪಿಸಲಾಗಿದೆ.

7 ಮನೆಗಳಿಗೆ ಹಾನಿ: ಲಾಡ್ಲಾಪುರ, ಸನ್ನತಿ, ಉಳಂಡಿಗೇರಾ ಹಾಗೂ ನಾಲವಾರಗಳಲ್ಲಿ ಒಟ್ಟು 7 ಮನೆಗಳು ಬಿದ್ದಿವೆ ಎಂದು ತಹಶೀಲ್ದಾರ್ ಉಮಾಕಾಂತ ಹಳ್ಳೆ ಮಾಹಿತಿ ನೀಡಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು