500 ಗ್ರಾಂ ಚಿನ್ನಾಭರಣ ವಶ

7
ಚಿನ್ನಾಭರಣ ಕಳವು; ಮೂರು ಜನ ಆರೋಪಿಗಳ ಬಂಧನ

500 ಗ್ರಾಂ ಚಿನ್ನಾಭರಣ ವಶ

Published:
Updated:

ಕಲಬುರ್ಗಿ: ಚಿನ್ನಾಭರಣ ಹಾಗೂ ಬೆಳ್ಳಿ ಆಭರಣಗಳ ಕಳವು, ಮಾರಾಟ ಮತ್ತು ಖರೀದಿಗೆ ಸಂಬಂಧಿಸಿದಂತೆ ಮಹಿಳೆ ಸೇರಿ ಮೂರು ಜನ ಆರೋಪಿಗಳನ್ನು ಪೊಲೀಸರು ಶನಿವಾರ ಬಂಧಿಸಿದ್ದಾರೆ.

ತಾರಫೈಲ್ ಬಡಾವಣೆ ನಿವಾಸಿ ಭೀಮಾಶಂಕರ ಅಲಿಯಾಸ್ ಭೀಮ್ಯಾ, ಇವರೊಂದಿಗೆ ಸಹಜೀವನ ನಡೆಸುತ್ತಿರುವ ಜ್ಯೋತಿ ಹಾಗೂ ಚಿನ್ನಾಭರಣ ಖರೀದಿ ಮಾಡುತ್ತಿದ್ದ ಆಲಗೂಡ ಜ್ಯುವೆಲ್ಲರ್ಸ್‌ನ ಮಲ್ಲಿಕಾರ್ಜುನ ಶ್ರೀಮಂತ ಆಲಗೂಡ ಬಂಧಿತರು.

ಇವರಿಂದ ₹15.40 ಲಕ್ಷ ಮೌಲ್ಯದ 500 ಗ್ರಾಂ ಚಿನ್ನಾಭರಣ, 1ಕೆಜಿ ಬೆಳ್ಳಿ ಆಭರಣ ಮತ್ತು 7 ಮೊಬೈಲ್‌ಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎನ್.ಶಶಿಕುಮಾರ್, ‘ಆರೋಪಿ ಭೀಮಾಶಂಕರ ಜ್ಯೋತಿ ಎಂಬುವರೊಂದಿಗೆ ಸಹಜೀವನ ನಡೆಸುತ್ತಿದ್ದಾನೆ. ಈತ ಕಳವು ಮಾಡುತ್ತಿದ್ದ ಚಿನ್ನಾಭರಣಗಳನ್ನು ಸಂಶಯ ಬಾರದ ರೀತಿಯಲ್ಲಿ ಜ್ಯೋತಿ ಮಾರಾಟ ಮಾಡುತ್ತಿದ್ದಳು. ಆಲಗೂಡ ಜ್ಯುವೆಲ್ಲರ್ಸ್‌ನ ಮಲ್ಲಿಕಾರ್ಜುನ ಇವರ ಬಳಿ ಶೇ 25 ರಿಂದ 50ರಷ್ಟು ಕಡಿಮೆ ದರದಲ್ಲಿ ಚಿನ್ನಾಭರಣ ಖರೀದಿ ಮಾಡುತ್ತಿದ್ದ’ ಎಂದರು.

‘ಭೀಮಾಶಂಕರ ಮೇಲೆ ಕಳ್ಳತನಕ್ಕೆ ಸಂಬಂಧಿಸಿದಂತೆ 10ಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿದ್ದು, ಜಾಮೀನಿನ ಮೇಲೆ ಬಿಡುಗಡೆಯಾಗಿದ್ದಾನೆ. ಮದ್ಯ, ಮಾದಕ ವಸ್ತುಗಳ ಸೇವನೆ ಮತ್ತು ವಿಲಾಸಿ ಜೀವನ ನಡೆಸಲು ಚಿನ್ನಾಭರಣ ಕಳವು ಮಾಡುತ್ತಿರುವುದಾಗಿ ವಿಚಾರಣೆ ವೇಳೆ ಒಪ್ಪಿಕೊಂಡಿದ್ದಾನೆ’ ಎಂದು ಹೇಳಿದರು.

‘ಆರೋಪಿಗಳ ಬಂಧನದಿಂದ ಆರ್.ಜಿ.ನಗರ, ಬ್ರಹ್ಮಪುರ, ಸ್ಟೇಷನ್ ಬಜಾರ್, ಅಶೋಕ ನಗರ ಮತ್ತು ವಿಶ್ವವಿದ್ಯಾಲಯ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿರುವ 20 ಚಿನ್ನಾಭರಣ ಕಳವು ಪ್ರಕರಣಗಳು ಪತ್ತೆಯಾಗಿವೆ’ ಎಂದು ತಿಳಿಸಿದರು.

ಸಹಾಯಕ ಪೊಲೀಸ್ ವರಿಷ್ಠಾಧಿಕಾರಿ ಲೋಕೇಶ ಬಿ.ಜೆ., ಇನ್‌ಸ್ಪೆಕ್ಟರ್ ಎಸ್.ಎಂ.ಯಾಳಗಿ, ಪೊಲೀಸ್ ಸಬ್‌ ಇನ್‌ಸ್ಪೆಕ್ಟರ್ ಅಕ್ಕಮಹಾದೇವಿ ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !