ಸೋಮವಾರ, ಮಾರ್ಚ್ 1, 2021
19 °C

ಮುಖ್ಯಾಧಿಕಾರಿ ಮೇಲೆ ಪುರಸಭೆ ಸದಸ್ಯನಿಂದ ಹಲ್ಲೆ!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕಲಬುರ್ಗಿ: ‘ಚಿಂಚೋಳಿ ಪುರಸಭೆ ಕಚೇರಿಯಲ್ಲಿ ಪುರಸಭೆ ಸದಸ್ಯ ಆನಂದಕುಮಾರ್ ನಾಗೇಂದ್ರಪ್ಪ ಟೈಗರ್ ಹಾಗೂ ಸಹಚರ ಶಶಿಕುಮಾರ್ ಮೇತ್ರಿ ಎಂಬುವವರು ಮಂಗಳವಾರ ನನ್ನ ಮೇಲೆ ಹಲ್ಲೆ ನಡೆಸಿದ್ದಾರೆ’ ಎಂದು ಮುಖ್ಯಾಧಿಕಾರಿ ಅಭಯಕುಮಾರ್‌ ಅವರು ನೀಡಿದ ದೂರಿನ ಮೇರೆಗೆ ಚಿಂಚೋಳಿ ಪೊಲೀಸರು ಕ್ರಿಮಿನಲ್ ಪ್ರಕರಣ ದಾಖಲಿಸಿಕೊಂಡಿದ್ದಾರೆ.

‘ಮಂಗಳವಾರ ಪುರಸಭೆ ಕಚೇರಿಗೆ ಬಂದ ಆನಂದಕುಮಾರ್‌ ನಕಲಿ ಬಿಲ್‌ಗಳನ್ನು ತಯಾರಿಸಿ ಚೆಕ್‌ ನೀಡುವಂತೆ ಒತ್ತಾಯಿಸಿದ್ದಾರೆ. ಇದಕ್ಕೆ ಒಪ್ಪದೇ ಇದ್ದಾಗ ನನ್ನ ಕುತ್ತಿಗೆ ಹಿಸುಕಿ ಕೆಳಗೆ ಕೆಡವಿ ಒದ್ದಿದ್ದಾರೆ. ಇದರಿಂದಾಗಿ ಕುತ್ತಿಗೆಗೆ ಗಾಯವಾಗಿದೆ. ಕಚೇರಿಯಲ್ಲಿದ್ದ ಸಿಬ್ಬಂದಿಯಾದ ಅನ್ವರ್, ಶೋಭಾರಾಣಿ, ಮಹ್ಮದ್ ಏಜಾಜ್, ಪೌರಕಾರ್ಮಿಕ ಬಸಪ್ಪ ರಕ್ಷಿಸಿದರು. ನಂತರ ಆನಂದಕುಮಾರ್ ಹಾಗೂ ಶಶಿಕುಮಾರ್ ಅಲ್ಲಿಂದ ಪರಾರಿಯಾಗಿದ್ದಾರೆ’ ಎಂದು ಅಭಯಕುಮಾರ್‌ ದೂರಿನಲ್ಲಿ ತಿಳಿಸಿದ್ದಾರೆ.

ಘಟನೆ ಕುರಿತು ಪ್ರತಿಕ್ರಿಯೆ ನೀಡಿದ ಆನಂದಕುಮಾರ್, ‘ಮೂರ್ನಾಲ್ಕು ತಿಂಗಳಿಂದ ಗುತ್ತಿಗೆ ಪೌರಕಾರ್ಮಿಕರಿಗೆ ವೇತನ ಬಿಡುಗಡೆಯಾಗಿರಲಿಲ್ಲ. ಈ ಬಗ್ಗೆ ಮಾಹಿತಿ ಪಡೆಯಲು ಕರೆ ಮಾಡಿದಾಗ ಮುಖ್ಯಾಧಿಕಾರಿಗಳು ಫೋನ್ ತೆಗೆಯಲಿಲ್ಲ. ಕಚೇರಿಗೆ ಹೋಗಿ ಈ ಬಗ್ಗೆ ವಿಚಾರಿಸಿದಾಗ ಮಾತಿಗೆ ಮಾತು ಬೆಳೆದು ಕೈ ಕೈ ಮಿಲಾಯಿಸಿದೆವು. ಅವರ ವಿರುದ್ಧ ಜಾತಿ ನಿಂದನೆ ಪ್ರಕರಣ ದಾಖಲಿಸಿದ್ದೇನೆ. ನಾನು ಬೀದರ್‌ ಆಸ್ಪತ್ರೆಗೆ ದಾಖಲಾಗಿದ್ದು, ಪೊಲೀಸರು ಹೇಳಿಕೆ ಪಡೆದುಕೊಂಡಿದ್ದಾರೆ’ ಎಂದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು