ಗುರುವಾರ , ಮೇ 26, 2022
23 °C
ಚಿಂಚೋಳಿ ತಾಲ್ಲೂಕಿನಲ್ಲಿಯೂ 33 ಕಿ.ಮೀ ಹಾದುಹೋಗಲಿದೆ ಈ ಹೆದ್ದಾರಿ: ನಿತಿನ್‌ ಗಡ್ಕರಿ ಟ್ವೀಟ್‌

ರಾಷ್ಟ್ರೀಯ ಹೆದ್ದಾರಿಗೆ ₹ 703.68 ಕೋಟಿ ಅನುದಾನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಚಿಂಚೋಳಿ: ಬಾಪೂರ– ಮಹಿಬೂಬ್‌ನಗರ ರಾಷ್ಟ್ರೀಯ ಹೆದ್ದಾರಿ 167(ಎನ್)ರ ಅಭಿವೃದ್ಧಿಗೆ ₹ 703.68 ಕೋಟಿ ಅನುದಾನ ನೀಡಿದ್ದಾಗಿ ಕೇಂದ್ರ ಭೂಸಾರಿಗೆ ಸಚಿವ ನಿತಿನ್ ಗಡ್ಕರಿ ಅವರು ಶುಕ್ರವಾರ ಟ್ವೀಟ್‌ ಮಾಡಿದ್ದಾರೆ.

ಬೀದರ್ ಜಿಲ್ಲೆಯ ಬಾಪೂರಿನಿಂದ ತೆಲಂಗಾಣದ ಮಹಿಬೂಬ್‌ನಗರಕ್ಕೆ ಸಂಪರ್ಕ ಕಲ್ಪಿಸುವ ಈ ಹೆದ್ದಾರಿ; ತಾಲ್ಲೂಕು ಕೇಂದ್ರ ಚಿಂಚೋಳಿ ಮತ್ತು ತೆಲಂಗಾಣದ ತಾಂಡೂರು ಕೊಡಂಗಲ್ ಮೂಲಕ ಹಾದು ಹೋಗುತ್ತದೆ. ಹೀಗಾಗಿ, ಚಿಂಚೋಳಿ ತಾಲ್ಲೂಕು ಕೇಂದ್ರದ ಅಭಿವೃದ್ಧಿಗೂ ಇದು ವರವಾಗಲಿದೆ.

ಪ್ರವಾಸೋದ್ಯಮಕ್ಕೆ ಪೂರಕ ವಾತಾವರಣ ಹೊಂದಿದ ಚಿಂಚೋಳಿಯಲ್ಲಿ ಇದೂವರೆಗೆ ರಾಷ್ಟ್ರೀಯ ಹೆದ್ದಾರಿ ಸಂಪರ್ಕವೇ ಇರಲಿಲ್ಲ. ಆದರೆ, ಕೇಂದ್ರ ಸರ್ಕಾರ ಕಳೆದ ವರ್ಷ ರಾಜ್ಯ ಹೆದ್ದಾರಿಯನ್ನು ಮೇಲ್ದರ್ಜೆಗೇರಿಸಿ ರಾಷ್ಟ್ರೀಯ ಹೆದ್ದಾರಿಯಾಗಿ ಘೋಷಿಸಿತ್ತು. ಇದರ ಬೆನ್ನಲ್ಲಿಯೇ ಕೇಂದ್ರದ ಭೂಸಾರಿಗೆ ಸಚಿವವರು ಬೃಹತ್‌ ಯೋಜನೆಗೆ ಅನುಮೋದನೆ ನೀಡಿದ್ದು, ತಾಲ್ಲೂಕಿನ ಜನರಿಗೆ ಹರ್ಷ ತಂದಿದೆ.

ಚನ್ನೈ– ಸೂರತ್ ‘ಭಾರತಮಾಲಾ ಗ್ರೀನ್ ಫೀಲ್ಡ್ ಎಕ್ಸಪ್ರೆಸ್’ ಹೆದ್ದಾರಿ ಹೊರತುಪಡಿಸಿ; ಕಲಬುರಗಿ ಜಿಲ್ಲಾ ಕೇಂದ್ರದ ವ್ಯಾಪ್ತಿಯಲ್ಲಿ ಈವರೆಗೆ ಐದು ಹೆದ್ದಾರಿಗಳು ಬಂದಂತಾಗಿದೆ. ಇದು ಬೀದರ್ ಜಿಲ್ಲೆಯಲ್ಲಿ 16 ಕಿ.ಮೀ ಹಾಗೂ ಚಿಂಚೋಳಿ ತಾಲ್ಲೂಕಿನಲ್ಲಿ 33 ಕಿ.ಮೀ ವ್ಯಾಪಿಸುತ್ತದೆ. ಈ ರಾಷ್ಟ್ರೀಯ ಹೆದ್ದಾರಿಯಿಂದ ಬೆಂಗಳೂರಿಗೆ ತೆರಳುವವರಿಗೆ ಹೆಚ್ಚಿನ
ಅನುಕೂಲವಾಗಲಿದೆ. ಈ ಹೆದ್ದಾರಿಯ ಘೋಷಣೆ ಹಾಗೂ ಅನುದಾನ ಮಂಜೂರಾತಿಯಲ್ಲಿ ಸಂಸದ ಡಾ.ಉಮೇಶ ಜಾಧವ ವಿಶೇಷ ಪ್ರಯತ್ನ ಮಾಡಿದ್ದಾರೆ. ಕೇಂದ್ರ ಸಚಿವ ಭಗವಂತ ಖೂಬಾ ಅವರೂ ಕೈಜೋಡಿಸಿದ್ದಾರೆ ಎಂದು ಬಿಜೆಪಿ ಮುಖಂಡರು ತಿಳಿಸಿದ್ದಾರೆ.

‘ಅನುದಾನಕ್ಕೆ ಅನುಮೋದನೆ ನೀಡಿದ ಸಚಿವರಿಗೆ ಧನ್ಯವಾದ ಅರ್ಪಿಸುತ್ತೇನೆ. ಬೈಪಾಸ್ ರಸ್ತೆ ಸೇರಿದಂತೆ ಅಗತ್ಯವಾದ ಕಾಮಗಾರಿ ಕೈಗೆತ್ತಿಕೊಂಡು ಅಭಿವೃದ್ಧಿ ಹೊಸ ಅಧ್ಯಾಯ ಸೃಷ್ಟಿಯಾಗಲಿದೆ’ ಎಂದುಸಂಸದ ಡಾ.ಉಮೇಶ ಜಾಧವ ತಿಳಿಸಿದ್ದಾರೆ.

ಪ್ರಸ್ತುತ ಈ ಹೆದ್ದಾರಿಯಲ್ಲಿ ಕೈಗೆತ್ತಿಕೊಳ್ಳಬೇಕಿರುವ ಕಾಮಗಾರಿಗೆ ಸಂಬಂಧಿಸಿದಂತೆ ವಿಸ್ತೃತ ಯೋಜನಾ ವರದಿ ತಯಾರಿಸಿಕೊಡಲು ₹ 1 ಕೋಟಿ ಮಂಜೂರು ಮಾಡಲು ಹೆದ್ದಾರಿಯ ಪ್ರಾದೇಶಿಕ ಕಚೇರಿಗೆ ಪತ್ರ ಕೂಡ ಬರೆಯಲಾಗಿದೆ. ವಾರದಲ್ಲಿ ಮಂಜೂರಾತಿ ಸಿಗುವ ವಿಶ್ವಾಸವಿದೆ ಎಂದು ಹೆದ್ದಾರಿ ವಿಭಾಗದ ಕಾರ್ಯಪಾಲಕ ಎಂಜಿನಿಯರ್ ಗುರುರಾಜ ಜೋಷಿ ‘ಪ್ರಜಾವಾಣಿ’ಗೆ ತಿಳಿಸಿದರು.

ಪ್ರಸ್ತುತ ಇದೇ ಹೆದ್ದಾರಿ ವ್ಯಾಪ್ತಿಯಲ್ಲಿ ಬರುವ ಚಿಂಚೋಳಿಯಿಂದ ಮನ್ನಾಎಖ್ಖೇಳಿವರೆಗೆ ಕರ್ನಾಟಕ ರಾಜ್ಯ ರಸ್ತೆ ಅಭಿವೃದ್ಧಿ ನಿಗಮದಿಂದ ಖಾಸಗಿ ಸಹಭಾಗಿತ್ವದಲ್ಲಿ ಟೋಲ್ ಗೇಟ್ ಸ್ಥಾಪಿಸಿ, ಕಾಮಗಾರಿ ನಡೆಸಿದ್ದು ಬಹುತೇಕ ಪೂರ್ಣಗೊಂಡಿದೆ. ಒಪ್ಪಂದದ ಪ್ರಕಾರ ಈ ರಸ್ತೆಯನ್ನು 8 ವರ್ಷಗಳ ವರೆಗೆ ಖಾಸಗಿ ಸಂಸ್ಥೆ ನಿರ್ವಹಣೆ ಮಾಡಲಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು