ಕಲಬುರಗಿ: ನಗರದ ಮಾರುಕಟ್ಟೆಗಳಲ್ಲಿ ಕಳೆದ ಒಂದು ತಿಂಗಳಿನಿಂದ ಪ್ರತಿ ಕೆ.ಜಿಗೆ ₹ 120ರಿಂದ ₹1 40 ಇದ್ದ ಟೊಮೆಟೊ ಬೆಲೆ ಭಾನುವಾರ ದಿಢೀರನೇ ₹ 160ರಿಂದ ₹180ಕ್ಕೆ ಏರಿಕೆಯಾಗಿದೆ.
ಕಳೆದ ವಾರಪೂರ್ತಿ ಸುರಿದ ಮಳೆಯ ಪರಿಣಾಮ ಟೊಮೆಟೊ ಸೇರಿ ತರಕಾರಿ ಬೆಳೆಗಳಷ್ಟೇ ಅಲ್ಲದೆ ಹೆಸರು ಬೆಳೆಯಲ್ಲೂ ನೀರು ನಿಂತ ಪರಿಣಾಮ ನಿರೀಕ್ಷಿತ ಪ್ರಮಾಣದಲ್ಲಿ ಪೂರೈಕೆಯಾಗಿಲ್ಲ. ಹೀಗಾಗಿ ಬೆಲೆ ಏರಿಕೆಯಾಗಿದೆ.
‘ಭಾನುವಾರ ನಸುಗಿಜಾವ ಮಾರುಕಟ್ಟೆಗೆ ಬಂದ 17 ಕೆ.ಜಿ ಟೊಮೆಟೊದ ಒಂದು ಕ್ರೇಟ್‌ನ್ನು ₹ 2500ಕ್ಕೆ ಖರೀದಿಸಿದ್ದೇನೆ’ ಎಂದು ಚಿಲ್ಲರೆ ವ್ಯಾಪಾರಿ ಸಿದ್ದಮ್ಮ ತಿಳಿಸಿದರು.
ಸದ್ಯ ನಗರದ ವಿವಿಧ ಮಾರುಕಟ್ಟೆಗಳಲ್ಲಿ ಎರಡು ಗುಣಮಟ್ಟದ ಟೊಮೆಟೊ ಲಭ್ಯವಿದ್ದು ಎರಡನೇ ಗ್ರೇಡ್‌ನ ಟೊಮೆಟೊಗಳನ್ನೇ ಜನರು ಹೆಚ್ಚು ಖರೀದಿಸುತ್ತಿದ್ದಾರೆ.
‘ಟೊಮೆಟೊ ಬೆಲೆ ಏರಿಕೆಗೂ ಮುನ್ನ ₹ 30 ಕೆ.ಜಿಯಂತೆ ಖರೀದಿಸುತ್ತಿದ್ದ ಟೊಮೆಟೊ ಬೆಲೆ ಈಗ ಆ ಬೆಲೆಗೆ ಮೂರನೇ ಗ್ರೇಡ್‌ನ ಉತ್ಪನ್ನವೂ ಸಿಗುತ್ತಿಲ್ಲ’ ಎಂದು ಖಾಸಗಿ ಕಂಪನಿ ಉದ್ಯೋಗಿ ಸಿದ್ಧಾರೂಢ ತಿಳಿಸಿದರು.
ನಗರದ ಸುತ್ತಲಿನ ಹಳ್ಳಿಗಳಿಂದ, ಪಕ್ಕದ ಜಿಲ್ಲೆಗಳಿಂದ ಅಲ್ಲದೆ ಮಹಾರಾಷ್ಟ್ರದಿಂದಲೂ ನಗರಕ್ಕೆ ಟೊಮೊಟೊ ಆವಕವಾಗುತ್ತವೆ.