ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕ.ಕ ಭಾಗಕ್ಕೆ ಮತ್ತೊಂದು ಹೊಡೆತ; ತೊಗರಿ ತಂತ್ರಜ್ಞಾನ ಪಾರ್ಕ್‌ ಕೂಡ ರದ್ದು!

ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಮಹತ್ವಾಕಾಂಕ್ಷಿ ಯೋಜನೆ ಮಣ್ಣುಪಾಲು
Last Updated 20 ಮಾರ್ಚ್ 2021, 5:22 IST
ಅಕ್ಷರ ಗಾತ್ರ

ಕಲಬುರ್ಗಿ: ದಶಕದ ಹಿಂದೆ ಕಲಬುರ್ಗಿಗೆ ಮಂಜೂರಾಗಿದ್ದ ತೊಗರಿ ತಂತ್ರಜ್ಞಾನ ಪಾರ್ಕ್‌ ಅನ್ನೂ ಸರ್ಕಾರ ಶಾಶ್ವತವಾಗಿ ರದ್ದು ಮಾಡಿದೆ!

ವಿಧಾನ ಪರಿಷತ್ ಸದಸ್ಯ ಬಿ.ಜಿ. ಪಾಟೀಲ ಅವರು ಕೇಳಿದ ಚುಕ್ಕೆ ಗುರುತಿನ ಪ್ರಶ್ನೆಗೆ ಉತ್ತರಿಸಿದ ಸಹಕಾರ ಸಚಿವ ಎಸ್‌.ಟಿ. ಸೋಮಶೇಖರ್‌ ಅವರು ಈ ವಿಷಯ
ಸ್ಪಷ್ಟಪಡಿಸಿದ್ದಾರೆ.

ಕಲಬುರ್ಗಿಯಲ್ಲಿ ತೊಗರಿ ಟೆಕ್ನಾಲಜಿ ಪಾರ್ಕ್‌ ಸ್ಥಾಪನೆ ಸಂಬಂಧ 250 ಎಕರೆ ಜಮೀನನ್ನು ಕೆಐಎಡಿಬಿ ಮೂಲಕ ಪಡೆಯಲು ಕ್ರಮ ವಹಿಸಲಾಗಿತ್ತು. ಆದರೆ, ನಂತರದ ದಿನಗಳಲ್ಲಿ ಕೆಐಎಡಿಬಿಯು ಭೂಸ್ವಾಧೀನ ಪ್ರಕ್ರಿಯೆಯನ್ನು ಕೈಬಿಟ್ಟಿದೆ. ಈ ಹಿನ್ನೆಲೆಯಲ್ಲಿ ಪಾರ್ಕ್‌ ಸ್ಥಾಪನೆಗೆ ಸೂಕ್ತ ಜಮೀನು ಸಿಗದ ಕಾರಣ ಉದ್ದೇಶಿತ ಯೋಜನೆಯನ್ನು ಕೈ ಬಿಡಲಾಗಿದೆ. ಮಾತ್ರವಲ್ಲದೇ, ಭೂಸ್ವಾಧೀನಕ್ಕಾಗಿ ಠೇವಣಿ ಇಡಲಾಗಿದ್ದ ₹ 4.9 ಕೋಟಿ ಹಣವನ್ನೂ ಮರಳಿ ಪ‍ಡೆಯಲಾಗಿದೆ ಎಂದು ಸಚಿವರು ತಮ್ಮ ಉತ್ತರದಲ್ಲಿ ತಿಳಿಸಿದ್ದಾರೆ.

‘ಈ ಮೂಲಕ ತೊಗರಿ ನಾಡಿನ ಮತ್ತೊಂದು ಮಹತ್ವಾಕಾಂಕ್ಷಿ ಯೋಜನೆಗೆ ಎಳ್ಳು– ನೀರು ಬಿಟ್ಟಂತಾಗಿದೆ. ಜವಳಿ ಪಾರ್ಕ್‌, ಐಟಿ ಪಾರ್ಕ್‌, ರೈಲ್ವೆ ವಿಭಾಗೀಯ ಕಚೇರಿ, ಏಮ್ಸ್‌, ನಿಮ್ಜ್‌, ಐಐಐಟಿ ಗಾಗಲೇ ಕೈಬಿಟ್ಟು ಹೋಗಿವೆ. ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಜಂಟಿ ಯೋಜನೆಗಳಿಂದ ಈ ಭಾಗದಲ್ಲಿ ಉದ್ಯೋಗ ಸೃಷ್ಟಿಯಾಗಲಿದೆ
ಎಂಬುದು ಈಗ ಹಗಲುಗನಸಾಗಿದೆ. ಜನರು ಈ ಹೊಡೆತಗಳಿಂದ ಚೇತರಿಸಿಕೊಳ್ಳುವ ಮುನ್ನವೇ ಈಗ ಮತ್ತೊಂದು ಬರಡಿಸಲು ಬಡಿದಂತಾಗಿದೆ’ ಎಂದು ವಿರೋಧ ಪಕ್ಷಗಳವರು
ಆರೋಪಿಸುತ್ತಿದ್ದಾರೆ.

ಏನಿದು ಪಾರ್ಕ್‌:ಕಲ್ಯಾಣ ಕರ್ನಾಟಕ ಭಾಗದಲ್ಲಿ ವಿಶ್ವದಲ್ಲೇ ಗುಣಮಟ್ಟದ ತೊಗರಿ ಉತ್ಪಾದನೆ ಆಗುತ್ತದೆ. ಇದಕ್ಕೆ ಇನ್ನಷ್ಟು ಆಧುನಿಕ ಸ್ಪರ್ಶ ನೀಡಿ, ವಿಶ್ವಮಟ್ಟದ ಮಾರುಕಟ್ಟೆ ಒದಗಿಸುವ ಉದ್ದೇಶದಿಂದ ಹಿಂದಿನ ಯುಪಿಎ ಸರ್ಕಾರ ತೊಗರಿ ಟೆಕ್ನಾಲಜಿ ಪಾರ್ಕ್‌ ನಿರ್ಮಿಸಲು ಉದ್ದೇಶಿಸಿತ್ತು. ಅರುಣಕುಮಾರ ಲೋಯಾ ಎನ್ನುವವರು ಇದರ ಮೊದಲ ಅಧ್ಯಕ್ಷರಾಗಿ ನೇಮಕ ಗೊಂಡಿದ್ದರು. ಕೈಗಾರಿಕಾ ಪ‍್ರದೇಶದಲ್ಲಿ ಇದಕ್ಕಾಗಿ ಭೂಸ್ವಾಧೀನ ಪ್ರಕ್ರಿಯೆ ಕೂಡ ಆರಂಭಿಸಿದ ಕೆಲವೇ ದಿನಗಳಲ್ಲಿ ಪ್ರಕ್ರಿಯೆ ನಿಂತಿತು. ಅಂದಿನಿಂದ ಈ ಪಾರ್ಕ್‌ ನನೆಗುದಿಗೆ ಬಿದ್ದಿತ್ತು.

ವಿನೂತನ ತಂತ್ರಜ್ಞಾನ ಬಳಸಿ ತೊಗರಿ ಮಾರುಕಟ್ಟೆಯನ್ನು ಮೇಲ್ದರ್ಜೆಗೆ ಕೊಂಡೊಯ್ಯುವುದು ಇದರ ಉದ್ದೇಶವಾಗಿತ್ತು. ಪಾರ್ಕ್‌ ಸ್ಥಾಪನೆಗೆ ಶೇ 50ರಷ್ಟು
ಪಾಲನ್ನು ಕೇಂದ್ರ ಸರ್ಕಾರ, ಶೇ 25ರಷ್ಟನ್ನು ರಾಜ್ಯ ಸರ್ಕಾರ ಹಾಗೂ ಉಳಿದ ಶೇ 25ರಷ್ಟನ್ನು ಹೂಡಿಕೆದಾರರು ಭರಿಸಬೇಕಾಗಿತ್ತು. ಆದರೆ, ದಶಕ ಕಳೆದರೂ ಹೂಡಿಕೆದಾರರು ಇದಕ್ಕೆ ಆಸಕ್ತಿ ತೋರದ ಕಾರಣ ಚಟುವಟಿಕೆಗಳು ಮೂಲೆಗುಂಪಾಗಿದ್ದವು.

ಲಕ್ಷ ಜನರಿಗೆ ನೆರವಾಗಬಲ್ಲ ಪಾರ್ಕ್‌

‘ತೊಗರಿ ತಂತ್ರಜ್ಞಾನ ಪಾರ್ಕ್‌ ಅಂದಾಜು ಒಂದು ಲಕ್ಷ ಜನರಿಗೆ ಜೀವನಾಧಾರವಾಗುವಂಥದ್ದು. ತೊಗರಿಯನ್ನು ವಿಶ್ವಮಟ್ಟದಲ್ಲಿ ಮಾರುಕಟ್ಟೆ ಮಾಡಲು ಬೇಕಾದ ಎಲ್ಲ ಅನುಕೂಲತೆಗಳನ್ನೂ ಇದು ಹೊಂದಿತ್ತು. ಅದನ್ನು ರದ್ದುಪಡಿಸಿದ್ದು ಈ ಭಾಗಕ್ಕೆ ಉಂಟಾದ ದೊಡ್ಡ ಹಾನಿ’ ಎಂದು ದಾಲ್‌ ಮಿಲ್ಲರ್ಸ್‌ ಅಸೋಸಿಯೇಷನ್‌ ಅಧ್ಯಕ್ಷ ಶಿವಶರಣಪ್ಪ ಸಿ. ನಿಗ್ಗುಡಗಿ ಪ್ರತಿಕ್ರಿಯಿಸಿದ್ದಾರೆ.

‘ಇಂದೋರ್‌ನಲ್ಲಿ ಈಗಾಗಲೇ ಕಡಲೆ ತಂತ್ರಜ್ಞಾನ ಪಾರ್ಕ್ ಇದೆ. ಅದೇ ಮಾದರಿಯಲ್ಲಿದಕ್ಷಿಣ ಭಾರತದಲ್ಲೇ ಮೊದಲ ಬಾರಿಗೆ ಇಂಥ ದೊಡ್ಡ ಪಾರ್ಕ್‌ ಸ್ಥಾಪನೆಯಾಗುತ್ತಿದೆ ಎಂಬ ಖುಷಿ ನಮ್ಮಲ್ಲಿ ಇತ್ತು. ರೈತರು, ವರ್ತಕರು, ತೊಗರಿ ನಂಬಿದ ಕಾರ್ಮಿಕರು, ಸಾರಿಗೆ ಹೀಗೆ ಅನ್ಯ ಉದ್ಯೋಗಗಳು ಇದರಿಂದ ಸೃಷ್ಟಿಯಾಗುತ್ತಿದ್ದವು’ ಎಂದೂ ಅವರು ವಿವರಿಸಿದರು.

ಮತ್ತೊಮ್ಮೆ ಗಮನ ಸೆಳೆಯುತ್ತೇವೆ: ಬಾಸರೆಡ್ಡಿ

‘ತೊಗರಿ ತಂತ್ರಜ್ಞಾನ ಪಾರ್ಕ್‌ ರದ್ದು ಮಾಡಿದ ಸಂಗತಿ ಬೇಸರ ತರುವಂಥದ್ದು. ಈಗಾಗಲೇ ನಮ್ಮ ಮಿಲ್‌ಗಳು ಬಹಳಷ್ಟು ಸಂಕಷ್ಟದಲ್ಲಿವೆ. ಇಂಥ ಸಂದರ್ಭದಲ್ಲಿ ಉದ್ಯಮ ಬೆಳೆಯಲು ಪೂರಕವಾದ ನಿರ್ಧಾರ ಕೈಗೊಳ್ಳಬೇಕಾಗಿತ್ತು. ಸರಿಯಾದ ಭೂಮಿ ಸಿಗದ ಕಾರಣ ಇದನ್ನು ರದ್ದು ಮಾಡಿದ್ದಾಗಿ ಸರ್ಕಾರ ಹೇಳಿದೆ. ಆದರೆ, ಮತ್ತೊಮ್ಮೆ ಕೇಂದ್ರ ಸರ್ಕಾರಕ್ಕೆ ಇದರ ಬಗ್ಗೆ ಮನವರಿಕೆ ಮಾಡುತ್ತೇವೆ. ನಮ್ಮ ಭಾಗದ ಸಂಸದರ ನೇತೃತ್ವದಲ್ಲಿ ಪಾರ್ಕ್‌ ಅನುಷ್ಠಾನಕ್ಕೆ ಕೋರುತ್ತೆವೆ’ ಎಂದು ಕರ್ನಾಟಕ ರಾಜ್ಯ ದ್ವಿದಳ ಧಾನ್ಯ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಲಿಂಗಾರೆಡ್ಡಿ ಗೌಡ ಜಿ. ಬಾಸರೆಡ್ಡಿ ತಿಳಿಸಿದರು.

‘ನಮ್ಮಲ್ಲಿನ ಬೇಳೆ ಗುಣಮಟ್ಟದ್ದಾಗಿದ್ದರೂ ಏಕರೂಪತೆ ಇಲ್ಲ. ಗುಜರಾತ್‌ನಲ್ಲಿ ಉತ್ಪಾದನೆ ಆಗುವ ‘ಶಿವಲಿಂಗ್‌ ಬ್ರ್ಯಾಂಡ್‌’ ಎಂಬ ತೊಗರಿ ದೊಡ್ಡ ಮಾರುಕಟ್ಟೆ ಪಡೆದಿದೆ. ಅದೇ ರೀತಿ ನಮ್ಮಲ್ಲಿಯೂ ಏಕರೂಪದ ಉತ್ಪ‍ದನೆ ಪ್ರೋತ್ಸಾಹಿಸುವ ಉದ್ದೇಶದಿಂದ ಈ ಪಾರ್ಕ್‌ ಮಂಜೂರಾಗಿತ್ತು’ ಎಂದೂ ಅವರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT