ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಚಾರ ಕಾನೂನು ಅರಿವು ಜಾಗೃತಿ ಜಾಥಾ: ‘ಸಂಚಾರ ನಿಯಮ ಪಾಲನೆ ಕಡ್ಡಾಯ’

ನ್ಯಾಯಾಧೀಶರ ಚಾಲನೆ
Last Updated 23 ಅಕ್ಟೋಬರ್ 2021, 7:55 IST
ಅಕ್ಷರ ಗಾತ್ರ

ಕಲಬುರಗಿ: ‘ವೇಗವಾಗಿ ಚಲಿಸುವ ಆಂಬುಲೆನ್ಸ್‌ಗಳಿಗೆ ದಾರಿ ಬಿಡುವುದರಿಂದ ಜೀವ ಉಳಿಸಲು ಸಹಾಯವಾಗುತ್ತದೆ. ಆದರೆ, ನಿಮ್ಮ ವಾಹನಗಳನ್ನು ನಿಧಾನವಾಗಿ ಓಡಿಸುವುದರಿಂದ ನಿಮ್ಮ ಜೀವವನ್ನೂ ಉಳಿಸಿಕೊಳ್ಳಲು ಸಾಧ್ಯ’ ಎಂದು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷ ಹಾಗೂ ಜಿಲ್ಲಾ ಸೆಷನ್ಸ್‌ ನ್ಯಾಯಾಧೀಶ ಕೆ.ಸುಬ್ರಮಣ್ಯ ಹೇಳಿದರು.

ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ನ್ಯಾಯಾಲಯ ಮತ್ತು ಪೊಲೀಸ್ ಆಯುಕ್ತಾಲಯದ ಆಶ್ರಯದಲ್ಲಿ ಶುಕ್ರವಾರ ನಗರದಲ್ಲಿ ನಡೆದ ಸಂಚಾರ ಕಾನೂನು ಅರಿವು ಜಾಗೃತಿ ಜಾಥಾಗೆ ಚಾಲನೆ ನೀಡಿ ಅವರು ಮಾತನಾಡಿದರು.

‘ಅತಿವೇಗದ ಚಾಲನೆಯೇ ಅಪಘಾತಕ್ಕೆ ಕಾರಣ. ವೇಗವಾಗಿ ವಾಹನ ಚಲಾಯಿಸಬೇಡಿ. ವೃತ್ತಗಳಲ್ಲಿ ಸುರಕ್ಷತೆಯಿಂದ ವಾಹನ ಓಡಿಸಿ. ಸಿಗ್ನಲ್‌ಗಳಲ್ಲಿ ಸಂಚಾರ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಿ. ಹೆಲ್ಮೆಟ್‌ ಇಲ್ಲದ ಸವಾರಿ, ತ್ರಿಬಲ್‌ ರೈಡಿಂಗ್‌, ವಾಹನದಲ್ಲಿ ಮಿತಿಗಿಂತ ಹೆಚ್ಚಿನ ಪ್ರಯಾಣಿಕರನ್ನು ಸಾಗಿಸುವುದು,ಮೊಬೈಲ್‌ನಲ್ಲಿ ಮಾತನಾಡುತ್ತ ವಾಹನ ಓಡಿಸುವುದು ಕಾನೂನು ಬಾಹಿರ. ಇಂಥ ಕೆಟ್ಟ ರೂಢಿಗಳನ್ನು ಯುವಜನರು ಕೈ ಬಿಡಬೇಕು’ ಎಂದು ಸಲಹೆ ನೀಡಿದರು.

‘ಮಿತಿಗಿಂತ ಹೆಚ್ಚಿನ ಭಾರವನ್ನು ಸರಕು ಸಾಗಣೆ ವಾಹನಗಳಲ್ಲಿ ಸಾಗಿಸಬಾರದು. ಟಾಟಾಏಸ್‌, ಲಾರಿ, ಟ್ರ್ಯಾಕ್ಟರ್, ಮ್ಯಾಜಿಕ್, ಬುಲೆರೊ ಪಿಕಪ್ ಮುಂತಾದ ಗೂಡ್ಸ್ ವಾಹನಗಳಲ್ಲಿ ಪ್ರಯಾಣಿಕರನ್ನು ಸಾಗಿಸುವುದು ಶಿಕ್ಷಾರ್ಹ ಅಪರಾಧ. ಆದ್ದರಿಂದ ವಾಹನ ಖರೀದಿಸಿದವರು ಹಾಗೂ ಚಾಲಕರು ಆಯಾ ವಾಹನಗಳಿಗೆ ಇರುವ ಅನುಮತಿಗಳ ಬಗ್ಗೆಯೂ ಮಾಹಿತಿ ಪಡೆದುಕೊಳ್ಳಬೇಕು. ತಮ್ಮ ವಾಹನಗಳು ಸುರಕ್ಷಿತವಾಗಿ ಇವೆಯೇ ಎಂಬುದನ್ನೂ ಪದೇಪದೇ ಖಚಿತ ಮಾಡಿಕೊಳ್ಳಬೇಕು. ವಾಹನದ ಕ್ಲಚ್, ಬ್ರೇಕ್‌, ಗೇರ್, ಹಾರ್ನ್ ಮತ್ತು ಟಯರ್‌ ಮುಂತಾದವು ಪರಿಶೀಲಿಸಿ ಚಲಾಯಿಸಬೇಕು’ ಎಂದರು.

‘ಆಟೊಗಳಲ್ಲಿ, ಒಮ್ನಿ ಹಾಗೂ ಇತರೆ ಶಾಲಾ ವಾಹನಗಳಲ್ಲಿ ಮಿತಿಗಿಂತ ಹೆಚ್ಚಿನ ವಿದ್ಯಾರ್ಥಿಗಳನ್ನು ಸಾಗಿಸುವುದು ಸುರಕ್ಷತೆಗೆ ಧಕ್ಕೆ ತರುತ್ತದೆ. ಆಸ್ಪತ್ರೆ ಹಾಗೂ ಶಾಲಾ ವಲಯಗಳಲ್ಲಿ ಸುರಕ್ಷತೆ ನಿಟ್ಟಿನಲ್ಲಿ ಕಡಿಮೆ ವೇಗದಲ್ಲಿ ವಾಹನ ಚಲಾಯಿಸಬೇಕು. ವಾಹನ ಚಲಿಸುವವರು ವಿವೇಚನೆ ಬಳಸಿದರೆ ಅಪ‍ಘಾತಗಳನ್ನು ತಪ್ಪಿಸಬಹುದು’ ಎಂದರು. ಇದೇ ವೇಳೆ ನ್ಯಾಯಾಧೀಶರು ಕಾನೂನು ಅರಿವು ಮೂಡಿಸುವ ಭಿತ್ತಿಪತ್ರಗಳನ್ನೂ ವಿತರಿಸಿದರು. ಜಿಲ್ಲಾ ನ್ಯಾಯಾಲಯದಿಂದ ಆರಂಭವಾದ ಜಾಥಾ ಸರ್ದಾರ್‌ ವಲ್ಲಭಭಾಯಿ ಪಟೇಲ್‌ ವೃತ್ತದವರೆಗೂ ನಡೆಯಿತು. ಎನ್‌ಸಿಸಿ ಅಧಿಕಾರಿ ಶರಣಬಸಪ್ಪ ಪಾಟೀಲ, ಚನಬಸಯ್ಯ ಸ್ವಾಮಿ, 32ನೇ ಕರ್ನಾಟಕ ಬಟಾಲಿಯನ್ ಎಚ್‌ಸಿಸಿ ಪ್ರಶಿಕ್ಷಣಾರ್ಥಿಗಳು, ಎಸ್‌ಬಿಆರ್‌ ಕಾಲೇಜಿನ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಈ ಜಾಥಾದಲ್ಲಿ ಪಾಲ್ಗೊಂಡರು. ಡಿಸಿಪಿಗಳಾದ ಅಡ್ಡೂರು ಶ್ರೀನಿವಾಸಲು, ಶರಣಬಸವ ಸುಬೇದಾರ, ಎಸಿಪಿ ಸುಧಾ ಆದಿ, ಇನ್‌ಸ್ಪೆಕ್ಟರ್‌ಗಳಾದ ಅಮರೇಶ, ಶಾಂತಿನಾಥ, ಪ್ರಾಧಿಕಾರದ ಸದಸ್ಯ ಶುಶಾಂತ ಚೌಗಲೆ, ಜಿಲ್ಲಾ ನ್ಯಾಯವಾದಿಗಳ ಸಂಘದ ಅಧ್ಯಕ್ಷ ರಾಜಕುಮಾರ ಕಡಗಂಚಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT