ಗುರುವಾರ , ಜುಲೈ 29, 2021
22 °C
ಕಲಬುರ್ಗಿ ಪೊಲೀಸ್‌ ಕಮಿಷನರ್‌ ಸತೀಶಕುಮಾರ್ ಎನ್. ಅವರೊಂದಿಗೆ ಪ್ರಜಾವಾಣಿ ಫೋನ್ ಇನ್

‘ಸಂಚಾರ ವ್ಯವಸ್ಥೆ ಸುಧಾರಣೆ; ಅಪರಾಧ ನಿಯಂತ್ರಣ‘

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಸತೀಶಕುಮಾರ್ ಎನ್.

ಕಲಬುರ್ಗಿ: ಅಪರಾಧ ನಿಯಂತ್ರಣಕ್ಕೆ ತರಲು ಇನ್ನು ಮುಂದೆ ರಾತ್ರಿ ವೇಳೆ ಗಸ್ತು ಹೆಚ್ಚಿಸಲಾಗುವುದು. ಪ್ರಮುಖ ಸ್ಥಳಗಳಲ್ಲಿ ಸಿ.ಸಿ.ಟಿ.ವಿ. ಕ್ಯಾಮೆರಾಗಳನ್ನು ಅಳವಡಿಸಲಾಗುವುದು ಎಂದು ಕಲಬುರ್ಗಿ ಪೊಲೀಸ್‌ ಕಮಿಷನರ್ ಸತೀಶಕುಮಾರ್‌ ಎನ್. ಭರವಸೆ ನೀಡಿದರು.

ಕಮಿಷನರ್‌ ಹುದ್ದೆ ವಹಿಸಿಕೊಂಡ ಬಳಿಕ ಮೊದಲ ಬಾರಿಗೆ ‘ಪ್ರಜಾವಾಣಿ’ ಫೋನ್‌ ಇನ್ ಕಾರ್ಯಕ್ರಮದಲ್ಲಿ ಸೋಮವಾರ ಭಾಗವಹಿಸಿ ಓದುಗರ ಪ್ರಶ್ನೆಗಳಿಗೆ ಅವರು ಉತ್ತರಿಸಿದರು. ಸುಮಾರು ಒಂದೂವರೆ ತಾಸು ನಡೆದ ಫೋನ್ ಇನ್‌ನಲ್ಲಿ ಓದುಗರ ಅಪರಾಧ ನಿಯಂತ್ರಣ, ಟ್ರಾಫಿಕ್ ವ್ಯವಸ್ಥೆ ಸುಧಾರಣೆ, ಸಿ.ಸಿ. ಟಿ.ವಿ. ಕ್ಯಾಮೆರಾ ಅಳವಡಿಕೆ, ಸರಿ ಬೆಸ ಸಂಖ್ಯೆಯ ವಾಹನಗಳ ನಿಲುಗಡೆಗೆ ಅವಕಾಶ, ರೌಡಿಗಳನ್ನು ಮಟ್ಟ ಹಾಕುವ ಕಾರ್ಯ ಯೋಜನೆಗಳು, ಸಿಬ್ಬಂದಿಯಲ್ಲಿ ಆತ್ಮಸ್ಥೈರ್ಯ ಮೂಡಿಸುವ ಕ್ರಮ ಹಾಗೂ ಪೊಲೀಸ್‌ ವ್ಯವಸ್ಥೆ ಆಧುನೀಕರಣಕ್ಕೆ ಕೈಗೊಂಡ ಕ್ರಮಗಳ ಬಗ್ಗೆ ವಿವರಿಸಿದರು.

ಈ ಸಂದರ್ಭದಲ್ಲಿ ಗ್ರಾಮಾಂತರ ಪೊಲೀಸರ ವ್ಯಾಪ್ತಿಗೆ ಬರುವ ಚಿಂಚೋಳಿ, ಸುಲೇಪೇಟ, ಜೇವರ್ಗಿಯಿಂದಲೂ ಕರೆಗಳು ಬಂದವು. ಅವುಗಳನ್ನೂ ಆಲಿಸಿದ ಸತೀಶಕುಮಾರ್‌ ಅವರು ಎಸ್ಪಿ ಯಡಾ ಮಾರ್ಟಿನ್ ಮಾರ್ಬನ್ಯಾಂಗ್ ಅವರ ಗಮನಕ್ಕೆ ತರುವುದಾಗಿ ತಿಳಿಸಿ ಅವರ ಫೋನ್‌ ಸಂಖ್ಯೆಗಳನ್ನೂ ಪಡೆದುಕೊಂಡರು.

 ಓದುಗರ ಪ್ರಶ್ನೆ ಹಾಗೂ ಅದಕ್ಕೆ ಪೊಲೀಸ್‌ ಕಮಿಷನರ್‌ ನೀಡಿದ ಉತ್ತರ ಈ ಕೆಳಕಂಡಂತಿವೆ.

ಅಭಿಷೇಕ್, ಸಂಜೀವ ಕಲಬುರ್ಗಿ

l ನಗರದಲ್ಲಿ ಕೊಲೆ ಸೇರಿದಂತೆ ಅಪರಾಧ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿದೆ. ಅಲ್ಲದೆ, ರಾತ್ರಿ ವೇಳೆ ಗಸ್ತು ಹೆಚ್ಚಿಸಬೇಕು

–ಕೊರೊನಾ ಇರುವುದರಿಂದ ಅಪರಾಧ ನಿಯಂತ್ರಣದಲ್ಲಿ ಸ್ವಲ್ಪ ಹಿನ್ನಡೆಯಾಗುತ್ತಿದೆ. ಆರೋಪಿಗಳನ್ನು ಬಂಧಿಸಲು ಹೋದಾಗ ಪೊಲೀಸರಿಗೆ ಸೋಂಕು ತಗುಲಿದೆ. ಆದರೂ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುವುದು. ಎಲ್ಲೆಲ್ಲಿ ಹೆಚ್ಚು ಅಪರಾಧ ಪ್ರಕರಣಗಳು ನಡೆಯುತ್ತಿವೆ ಎಂಬುದನ್ನು ಆಧರಿಸಿ ಆ ಪ್ರದೇಶಗಳಲ್ಲಿ ಗಸ್ತು ತಿರುಗಲು ವ್ಯವಸ್ಥೆ ಮಾಡಲಾಗುವುದು.

 ಮಹಾದೇವ, ವೆಂಕಟೇಶನಗರ, ಕಲಬುರ್ಗಿ

l ನಗರದಲ್ಲಿ ಟ್ರಾಫಿಕ್ ಸಮಸ್ಯೆ ಬಹಳ ಇದೆ. ಇದನ್ನು ಹೇಗೆ ನಿಭಾಯಿಸುತ್ತೀರಿ?

ಎಸ್‌ವಿಪಿ ಸರ್ಕಲ್‌ನಿಂದ ಜಗತ್‌ ಸರ್ಕಲ್‌ವರೆಗೆ ಹಲವು ಕಚೇರಿಗಳು, ವಾಣಿಜ್ಯ ಮಳಿಗೆಗಳು ಇವೆ. ಜೊತೆಗೆ ಪ್ರಮುಖ ರಸ್ತೆಯೂ ಹೌದು. ಹೀಗಾಗಿ, ವಾಹನಗಳ ಓಡಾಟವೂ ಹೆಚ್ಚಿರುತ್ತದೆ. ಇದನ್ನು ನಿಯಂತ್ರಿಸುವುದಕ್ಕಾಗಿ ಸರಿ–ಬೆಸ ಸಂಖ್ಯೆಯ ವಾಹನಗಳನ್ನು ಒಂದೊಂದು ದಿನ ಪಾರ್ಕಿಂಗ್‌ಗೆ ಅವಕಾಶ ನೀಡುವ ಚಿಂತನೆ ಇದೆ. ಮಹಾನಗರ ಪಾಲಿಕೆ ಆಯುಕ್ತರೊಂದಿಗೆ ಚರ್ಚಿಸಿ ಈ ಬಗ್ಗೆ ಶೀಘ್ರವೇ ಅಂತಿಮ ನಿರ್ಣಯ ತೆಗೆದುಕೊಳ್ಳಲಾಗುವುದು.

‌ಡಾ.ಶ್ರೀಪಾದ ಬೋಳಶೆಟ್ಟಿ, ಕಲಬುರ್ಗಿ

l ಕಮಿಷನರೇಟ್‌ ವ್ಯಾಪ್ತಿಯಲ್ಲಿ ಪೊಲೀಸ್‌ ಸಿಬ್ಬಂದಿ ಕೊರತೆ ಇದೆಯೇ?

ಕಲಬುರ್ಗಿ ಕಮಿಷನರೇಟ್‌ ಪೂರ್ಣ ಪ್ರಮಾಣದಲ್ಲಿ ಆರಂಭವಾಗಿದೆ. ಸಿಬ್ಬಂದಿ ಕೊರತೆ ಇದೆ. ಶೇ 40ರಷ್ಟು ಸಿಬ್ಬಂದಿ ಕೊರತೆ ಇದೆ. ಸಿಬ್ಬಂದಿ ನೇಮಕಾತಿಗಾಗಿ ಅಧಿಸೂಚನೆ ಹೊರ
ಡಿಸಲಾಗಿದ್ದು, ಪರೀಕ್ಷೆ, ತರಬೇತಿ ಮುಗಿಯಬೇಕಾದರೆ ಸಮಯ ಬೇಕಾಗುತ್ತದೆ. 

‌ಸುದೀಪ್, ವೆಂಕಟೇಶ ನಗರ, ಕಲಬುರ್ಗಿ

l ನಗರದಲ್ಲಿ ಪುಡಿ ರೌಡಿಗಳ ಹಾವಳಿ ಮಿತಿ ಮೀರಿದೆ. ಇದನ್ನು ಮಟ್ಟ ಹಾಕಲು ಕ್ರಮ ಕೈಗೊಳ್ಳುತ್ತೀರಾ?

ಲಾಕ್‌ಡೌನ್‌ ಸಡಿಲಿಕೆಯಾದ ಎರಡು ದಿನಗಳಲ್ಲಿ ಎರಡು ಕೊಲೆಗಳು ನಡೆದವು. ಇತ್ತೀಚೆಗೆ ಮೂರು ಕೊಲೆಗಳು ಒಂದು ಕೊಲೆ ಯತ್ನ ನಡೆದಿದ್ದು, ಅಷ್ಟೂ ಪ್ರಕರಣಗಳಲ್ಲಿ ಪರಸ್ಪರ ಸಂಬಂಧಿಕರು, ಸ್ನೇಹಿತರೇ ಹೊಡೆದಾಡಿಕೊಂಡಿದ್ದಾರೆ. ಹೀಗಾಗಿ, ಇದು ವೃತ್ತಿಪರ ರೌಡಿಗಳ ಕೃತ್ಯ ಎನ್ನಲಾಗದು. ಇತ್ತೀಚೆಗೆ ಮಿಜಗುರಿ ಪ್ರದೇಶದಲ್ಲಿ ಅಪರಿಚಿತರು ಯುವಕನನ್ನು ಹೊತ್ತೊಯ್ದು ಕೊಂದು ಹಾಕಿದ್ದಾರೆ. ಆ ಪ್ರಕರಣವನ್ನು ಬಹಳ ಗಂಭೀರವಾಗಿ ತನಿಖೆ ನಡೆಸುತ್ತಿದ್ದೇವೆ.

ಜಯತೀರ್ಥ ದೇಸಾಯಿ, ಕೃಷ್ಣಾ ನಗರ, ಕಲಬುರ್ಗಿ

l ಹಲವು ಬಡಾವಣೆಗಳು ಯಾವ ಪೊಲೀಸ್‌ ಠಾಣೆಯ ವ್ಯಾಪ್ತಿಗೆ ಬರುತ್ತದೆ ಎಂಬ ಬಗ್ಗೆ ಗೊಂದಲಗಳಿವೆ.

ನೀವು ಹೇಳುವುದು ನಿಜ. ಅದಕ್ಕಾಗಿ ವಿವಿಧ ಬಡಾವಣೆಗಳನ್ನು ಸಮೀಪದ ಪೊಲೀಸ್‌ ಠಾಣೆಯ ವ್ಯಾಪ್ತಿಗೊಳಪಡಿಸಬೇಕಿದೆ. ಅದಕ್ಕಾಗಿ ವಿವಿಧ ಬಡಾವಣೆಗಳ ವ್ಯಾಪ್ತಿಯ ಪುನರ್‌ ನಿಗದಿ ಮಾಡಲಾಗುವುದು.

ಮಾಳಿಂಗರಾಯ, ಕಲಬುರ್ಗಿ

l ಬಡ್ಡಿ ದಂಧೆಕೋರರ ಹಾವಳಿ ಮಿತಿ ಮೀರಿದ್ದು, ತಡೆಗಟ್ಟಲು ಯಾವ ಕ್ರಮ ಕೈಗೊಂಡಿದ್ದೀರಿ?

ಕಲಬುರ್ಗಿ ನಗರದಲ್ಲಿ ಬಡ್ಡಿ ದಂಧೆ ಹೆಚ್ಚುತ್ತಿರುವ ಬಗ್ಗೆ ದೂರುಗಳು ಬಂದಿವೆ.
ಇದನ್ನು ತಡೆಗಟ್ಟಲು ಹಿರಿಯ ಪೊಲೀಸ್‌ ಅಧಿಕಾರಿಗಳ ನೇತೃತ್ವದಲ್ಲಿ ತಂಡವನ್ನು ರಚಿಸಲಾಗುವುದು.

‘ಬೀದಿ ಬದಿ ವ್ಯಾಪಾರಿ ಮುಕ್ತ ವಲಯ ಘೋಷಿಸಿ’

ಕಲಬುರ್ಗಿಯ ಕಪಡಾ ಬಜಾರ್, ಬಂಬೂ ಬಜಾರ್, ಫೋರ್ಟ್‌ ರೋಡ್‌, ಮಸೀದಿ ರೋಡ್‌, ಸರಾಫ್‌ ಗಲ್ಲಿಯಲ್ಲಿ ರಸ್ತೆ ಮಧ್ಯದಲ್ಲೇ ಬಂಡಿ ಇಟ್ಟುಕೊಂಡು ವ್ಯಾಪಾರ ಮಾಡುತ್ತಾರೆ. ಇದರಿಂದ ದೈಹಿಕ ಅಂತರ ಕಾಯ್ದುಕೊಳ್ಳಲು ತೊಂದರೆಯಾಗಿದೆ. ಈ ರಸ್ತೆಗಳನ್ನು ಬೀದಿ ಬದಿ ವ್ಯಾಪಾರಿ ಮುಕ್ತ ವಲಯ ಎಂದು ಘೋಷಿಸುವಂತೆ ಹೈದರಾಬಾದ್‌ ಕರ್ನಾಟಕ ವಾಣಿಜ್ಯೋದ್ಯಮ ಸಂಸ್ಥೆಯ ಅಧ್ಯಕ್ಷ ಅಮರನಾಥ ಸಿ.ಪಾಟೀಲ ಮನವಿ ಮಾಡಿದರು.

ಇದಕ್ಕೆ ಪ್ರತಿಕ್ರಿಯಿಸಿದ ಸತೀಶಕುಮಾರ್‌, ‘ಲಾಕ್‌ಡೌನ್‌ ಸಡಿಲಿಕೆಯಾದ ಬಳಿಕ ಈ ಪ್ರದೇಶಗಳಲ್ಲಿ ಜನದಟ್ಟಣಿ ಹೆಚ್ಚಾಗಿದ್ದು, ರಸ್ತೆ ಮಧ್ಯದಲ್ಲೇ ನಿಂತು ವ್ಯಾಪಾರ ಮಾಡುವ ಬಗ್ಗೆ ಮಾಹಿತಿ ಇದೆ. ಶೀಘ್ರವೇ ನಮ್ಮ ಸಂಚಾರ ವಿಭಾಗದ ಅಧಿಕಾರಿಗಳು ಹಾಗೂ ಮಹಾನಗರ ಪಾಲಿಕೆ ಅಧಿಕಾರಿಗಳೊಂದಿಗೆ ಸ್ಥಳಕ್ಕೆ ಭೇಟಿ ನೀಡುವೆ. ದೈಹಿಕ ಅಂತರ ಕಾಪಾಡಿಕೊಂಡು ವ್ಯಾಪಾರ ನಡೆಸುವಂತೆ ತಿಳಿ ಹೇಳುತ್ತೇವೆ. ಸೂಪರ್‌ ಮಾರ್ಕೆಟ್‌ನಲ್ಲಿ ವಾಹನಗಳನ್ನು ಎಲ್ಲೆಂದರಲ್ಲಿ ನಿಲ್ಲಿಸುವುದನ್ನು ತಡೆಯಲು ಪ್ರತ್ಯೇಕ ಪಾರ್ಕಿಂಗ್ ಸ್ಥಳ ನಿಗದಿಯಂತಹ ಮೂಲಸೌಕರ್ಯಕ್ಕಾಗಿ ಪಾಲಿಕೆಯಿಂದ ಇಲಾಖೆಗೆ ಹಣ ಬಿಡುಗಡೆ ಆಗಿರುವ ಬಗ್ಗೆ ಕೇಳಿದ್ದೇನೆ. ಶೀಘ್ರ ಟೆಂಡರ್ ಕರೆದು ಕೆಲಸ ಆರಂಭಿಸಲು ಕ್ರಮ ಕೈಗೊಳ್ಳುತ್ತೇನೆ’ ಎಂದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು