ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೈಬರ್‌ ಅಪರಾಧ ನಿಯಂತ್ರಣಕ್ಕೆ ಸಂಶೋಧನೆ ಅಗತ್ಯ

ದೆಹಲಿಯ ಹ್ಯಾಕ್‌ದೇವ ಟೆಕ್ನಾಲಜಿಯ ವ್ಯವಸ್ಥಾಪಕ ನಿರ್ದೇಶಕ ರಕ್ಷಿತ ಟಂಡೆಸ ಅಭಿಮತ
Last Updated 8 ಡಿಸೆಂಬರ್ 2020, 15:25 IST
ಅಕ್ಷರ ಗಾತ್ರ

ಕಲಬುರ್ಗಿ: ‘ಕಂಪ್ಯೂಟರೀಕರಣ, ಡಿಜಿಟಲೀಕರಣಗಳಿಂದ ಜಗತ್ತಿಗೆ ಬಹು ಉಪಯೋಗವಿದ್ದರೂ ಅದರ ಜೊತೆಗೆ ಹೆಚ್ಚುತ್ತಿರುವ ಸೈಬರ್ ಅಪರಾಧಗಳು ಆತಂಕಕಾರಿ ಆಗಿವೆ. ಕಾರಣ, ಸೈಬರ್ ಅಪರಾಧಗಳ ನಿಯಂತ್ರಣ ಮತ್ತು ವಿಧಿವಿಜ್ಞಾನಗಳ ತರಬೇತಿ ಇಂದು ಬಹು ಅಗತ್ಯವಾಗಿದೆ’ ಎಂದು ದೆಹಲಿಯ ಹ್ಯಾಕ್‌ದೇವ ಟೆಕ್ನಾಲಜಿಯ ವ್ಯವಸ್ಥಾಪಕ ನಿರ್ದೇಶಕ ರಕ್ಷಿತ ಟಂಡೆಸ ಹೇಳಿದರು.

‌ಇಲ್ಲಿನ ಪಿಡಿಎ ಎಂಜಿನಿಯರಿಂಗ್ ಕಾಲೇಜಿನ ಕಂಪ್ಯೂಟರ್ ವಿಭಾಗವು ತಾಂತ್ರಿಕ ಶಿಕ್ಷಣ ಗುಣಮಟ್ಟ ಅಭಿವೃದ್ಧಿ ಕಾರ್ಯಕ್ರಮದಡಿ ‘ಸೈಬರ್ ಸೆಕ್ಯುರಿಟಿ ಮತ್ತು ಫಾರೆನ್ಸಿಕ್’ ಎಂಬ ವಿಷಯದ ಕುರಿತು ಆಯೋಜಿಸಿದ ಒಂದು ವಾರದ ಆನ್‍ಲೈನ್ ಪ್ರಾಧ್ಯಾಪಕ ತರಬೇತಿ ಕಾರ್ಯಕ್ರಮದಲ್ಲಿ ಅವರು ದಿಕ್ಸೂಚಿ ಭಾಷಣ ಮಾಡಿದರು.‌

‘ಸೈಬರ್‌ ಅಪರಾಧಗಳನ್ನು ಈಗಲೇ ಮಟ್ಟಹಾಕದಿದ್ದರೆ ಮುಂದೆ ಗಂಭೀರ ಸಮಸ್ಯೆಗಳು ಎದುರಾಗಲಿವೆ. ತಂತ್ರಜ್ಞಾನ ಎಷ್ಟು ಅನುಕೂಲವಾಗಿದೆಯೇ ಅದರ ದುಪ್ಪಟ್ಟು ಅನಾನುಕೂಲ ಆಗುವ ಸಾಧ್ಯತೆ ಇದೆ. ಹಾಗಾಗಿ, ಎಂಜಿನಿಯರಿಂಗ್ ಸಂಸ್ಥೆಗಳು ಹಾಗೂ ಸಂಶೋಧಕರು ಈ ನಿಟ್ಟಿನಲ್ಲಿ ಹೆಚ್ಚು ಜಾಗ್ರತವಾಗಬೇಕಿದೆ’ ಎಂದರು.

ಕಾರ್ಯಕ್ರಮ ಉದ್ಘಾಟಿಸಿದ ಹೈದರಾಬಾದ್‌ ಕರ್ನಾಟಕ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಡಾ.ಭೀಮಾಶಂಕರ ಬಿಲಗುಂದಿ ಮಾತನಾಡಿ, ‘ಸೈಬರ್ ಭದ್ರತೆಯ ಕುರಿತ ಎಲ್ಲಾ ಕಾರ್ಯಕ್ರಮಕ್ಕೂ ನನ್ನ ಸಂಪೂರ್ಣ ಬೆಂಬಲವಿದೆ. ಇಂತಹ ಹೊಸ ಹೊಸ ಕೋರ್ಸ್‌ಗಳು ಇಂದಿನ ವಿದ್ಯಾರ್ಥಿಗಳಿಗೆ ಬಹು ಅವಶ್ಯಕ. ವಿದ್ಯಾರ್ಥಿಗಳಿಗೆ ಕಲಿಸುವ ಉಪನ್ಯಾಸಕರಿಗೂ ಇಂತಹ ತರಬೇತಿ ಕಾರ್ಯಕ್ರಮಗಳು ಬಹು ಮುಖ್ಯ’ ಎಂದರು.

ಇಂಡಿಯನ್ ಸರ್ವೀಸಸ್‍ನ ಸಿಇಒ ಸಾಯಿಸತೀಶ್ ಅತಿಥಿಗಳಾಗಿ ಮಾತನಾಡಿದರು. ಡೀನ್ ಡಾ.ಸಿದ್ಧರಾಮ ಪಾಟೀಲ್, ವಿಭಾಗದ ಮುಖ್ಯಸ್ಥರಾದ ಡಾ.ಸುವರ್ಣಾ ನಂದ್ಯಾಳ್, ಡಾ.ಶ್ರೀದೇವಿ ಸೋಮಾ, ಡಾ.ಸುಜಾತಾ ತೇರದಾಳ, ಡಾ.ವಿಶ್ವನಾಥ ಬುರಕಪಲ್ಲಿ, ಪ್ರೊ.ಜ್ಯೋತಿ ಪಾಟೀಲ, ಡಾ.ಪ್ರಕಾಶ ಪಟ್ಟಣ, ಡಾ.ರಾಕೇಶ ಹುಡೇದ, ಶರಣಕುಮಾರ ಹುಲಿ, ಮಿಸ್. ರಾಜಲಕ್ಷ್ಮಿ ಬಿಲಗುಂದಿ, ವಿಶ್ವನಾಥ ಗುಗ್ಗವಾಡ, ಖಾಜಾ ಮೊಯುನಿದ್ದೀನ್, ಸಿರಾಜುದ್ದೀನ್, ಡಾ.ಬಾಬುರಾವ್ ಶೇರಿಕಾರ, ವಿವಿಧ ವಿಭಾಗಗಳ ಮುಖ್ಯಸ್ಥರು ಇದ್ದರು.

ಪ್ರಾಚಾರ್ಯ ಡಾ.ಎಸ್.ಎಸ್. ಹೆಬ್ಬಾಳ ಸ್ವಾಗತಿಸಿದರು. ಪೂಜಾ ಹತ್ತರಕಿ ಪ್ರಾರ್ಥಿಸಿದರು. ಉಪಪ್ರಾಚಾರ್ಯ ಡಾ.ಎಸ್.ಎಸ್ ಕಲಶೆಟ್ಟಿ ಮಾತನಾಡಿದರು. ಟೆಕ್ಯೂಫ್ ಸಂಯೋಜಕ ಪ್ರೊ.ಶರಣ.ಸಿ. ಪಡಶೆಟ್ಟಿ ಅತಿಥಿಗಳನ್ನು ಪರಿಚಯಿಸಿದರು. ಕಾರ್ಯಕ್ರಮದ ಸಂಯೋಜಕಿ ಡಾ.ಜಯಶ್ರೀ ಅಗರಖೇಡ ವಂದಿಸಿದರು. ಡಾ.ಶೈಲಜಾ ಶಾಸ್ತ್ರಿ ನಿರೂಪಿಸಿದರು.

ಕರ್ನಾಟಕ ಮತ್ತು ಆಂಧ್ರಪ್ರದೇಶ ರಾಜ್ಯಗಳ ವಿವಿಧ ಕಾಲೇಜಿನ 130 ಜನ ಈ ಕಾರ್ಯಕ್ರಮದಲ್ಲಿ ನೋಂದಾಯಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT