ಸೋಮವಾರ, ಆಗಸ್ಟ್ 8, 2022
21 °C

ಸಾರಿಗೆ ಸಿಬ್ಬಂದಿ ಮುಷ್ಕರ ಕಾನೂನು ಬಾಹಿರ: ಕಾರ್ಮಿಕ ಸಚಿವ ಶಿವರಾಮ ಹೆಬ್ಬಾರ್‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕಲಬುರ್ಗಿ: ‘ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಸಿಬ್ಬಂದಿ ನಡೆಸುತ್ತಿರುವ ಮುಷ್ಕರ ಕಾನೂನು ಬಾಹಿರವಾಗಿದೆ. ಅವರು ರಾಜಕೀಯ ಪ್ರೇರಿತವಾಗಿ ಇದನ್ನು ಮಾಡುತ್ತಿದ್ದಾರೆ. ನಾವು ಮಾತುಕತೆಗೆ ಕರೆದರೂ ಬಂದಿಲ್ಲ’ ಎಂದು ಕಾರ್ಮಿಕ ಸಚಿವ ಶಿವರಾಮ ಹೆಬ್ಬಾರ್‌ ಹೇಳಿದರು.

ನಗರದಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಈ ರೀತಿ ಮುಷ್ಕರ ನಡೆಸುವುದು ನಿಯಮಾವಳಿಯಲ್ಲಿ  ಇಲ್ಲ. ಸಂಘಕ್ಕೆ ಗೌರವ ಅಧ್ಯಕ್ಷರನ್ನು ನೇಮಿಸಿಕೊಳ್ಳಲು ಅನುಮತಿ ಇಲ್ಲ. ಅದನ್ನು ತಿಳಿಸಿ ಹೇಳಿದರೂ ಅವರು ತಿಳಿದುಕೊಳ್ಳಲು ತಯಾರಿಲ್ಲ. ಸಾರಿಗೆ ಸಂಸ್ಥೆಯ ಕಾರ್ಮಿಕರಿಗೆ ಕಳಂಕ ತರುವ ಕೆಲವನ್ನು ಹೊರಗಿನ ಶಕ್ತಿಗಳು ಮಾಡುತ್ತಿವೆ’ ಎಂದರು.

‘ಮುಷ್ಕರದಿಂದ ‍ನಿತ್ಯವೂ ₹ 3,800 ಕೋಟಿ ಆದಾಯ ಕೈತಪ್ಪುತ್ತಿದೆ. ಕಳೆದ ಬಾರಿ ರಾಜ್ಯ ಸರ್ಕಾರ ₹ 4,000 ಕೋಟಿ ಹಣವನ್ನು ನಿಗಮಕ್ಕೆ ನೀಡಿ, ನೌಕರರ ನೆರವಿಗೆ ಸ್ಪಂದಿಸಿದೆ. ಸದ್ಯದ ಬೇಡಿಕೆಯಾದ ವೇತನ ಪರಿಷ್ಕರಣೆ ಬಗ್ಗೆಯೂ ಮೇ 5ರ ನಂತರ ಸ್ಪಷ್ಟ ನಿರ್ಧಾರ ಕೈಗೊಳ್ಳುವುದಾಗಿ ಸಾರಿಗೆ ಸಚಿವರು ಈಗಾಗಲೇ ಹೇಳಿದ್ದಾರೆ. ಆದರೂ ಸಂಧಾನಕ್ಕೆ ಬಾರದೇ ಮುಷ್ಕರದಲ್ಲಿ ಭಾಗಿಯಾಗಿದ್ದಾರೆ. ಅನ್ಯಮಾರ್ಗವಿಲ್ಲದೇ ಅವರ ವಿರುದ್ಧ ಕ್ರಮ ಜರುಗಿಸಲಾಗುತ್ತಿದೆ’ ಎಂದೂ ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

‘ಪ್ರತಿಯೊಬ್ಬ ಕಾರ್ಮಿಕನ ರಕ್ಷಣೆಗೆ ಇಲಾಖೆ ಬದ್ಧವಾಗಿದೆ. ಆದರೆ, ಇವರು ಕಾನೂನು ವಿರುದ್ಧವಾಗಿ ಹೋಗುತ್ತಿದ್ದಾರೆ. ಈಗಾಗಲೇ ಸಾರಿಗೆ ಇಲಾಖೆಯಿಂದ ವಜಾಗೊಂಡವರು ಕಾರ್ಮಿಕ ಇಲಾಖೆ ಮುಂದೆ ಬಂದರೆ ವಿಚಾರಿಸಿ ತೀರ್ಮಾನ ಕೈಗೊಳ್ಳುತ್ತೇವೆ’ ಎಂದರು.

‘ಸಾರಿಗೆ ಸಂಸ್ಥೆ ಕಾರ್ಮಿಕರು ರಾಜಕೀಯ ದಾಳವಾಗಿ ಬಳಕೆಯಾಗುತ್ತಿದ್ದಾರೆ. ಮೇ 4ರವರೆಗೆ ಕಾದು ನೋಡಿದರೆ ಅವರ ಭವಿಷ್ಯ ಉಜ್ವಲವಾಗಲಿದೆ. ಮೊಂಡುತನ ಅನುಸರಿಸುವುದು ಯಾರಿಗೂ ಒಳ್ಳೆಯದಲ್ಲ’ ಎಂದು ಬಿಜೆಪಿ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ ಕೂಡ ಪ್ರತಿಕ್ರಿಯಿಸಿದರು.

ಕಾರ್ಮಿಕರಿಗೆ ಪ‍್ರತ್ಯೇಕ ವೆಬ್‌ಸೈಟ್‌
‘ಕಾರ್ಮಿಕರ ನೋಂದಣಿಗಾಗಿ ಪ್ರತ್ಯೇಕ ವೆಬ್‌ಸೈಟ್‌ ಒಂದನ್ನು ಆರಂಭಿಸಲು ನಿರ್ಧರಿಸಲಾಗಿದೆ. ಮುಂದಿನ ಮೂರು ತಿಂಗಳ ಒಳಗೆ ಇದು ಕಾರ್ಯರೂಪಕ್ಕೆ ಬರಲಿದೆ. ಹೀಗೆ ಕಾರ್ಮಿಕರಿಗಾಗಿಯೇ ಪ್ರತ್ಯೇಕ ವೆಬ್‌ಸೈಟ್‌ ಮಾಡುತ್ತಿರುವುದ ದೇಶದಲ್ಲೇ ಮೊದಲು’ ಎಂದು ಸಚಿವ ಶಿವರಾಮ ತಿಳಿಸಿದರು.

‘ರಾಜ್ಯದಲ್ಲಿ 22 ಲಕ್ಷ ಕಾರ್ಮಿಕರು ಇದ್ದಾರೆ. ಅವರ ನೋಂದಣಿಗೆ ‘ಸೇವಾಸಿಂಧು’ದಲ್ಲಿ ಮಾತ್ರ ನೋಂದಣಿ ಮಾಡಿಕೊಳ್ಳಲು ಅವಕಾಶವಿತ್ತು. ಎಲ್ಲರಿಗೂ ಒಂದೇ ವೆಬ್‌ಸೈಟ್‌ ಆಗಿದ್ದರಿಂದ ನೋಂದಣಿಗೆ ಸಮಸ್ಯೆ ಆಗುತ್ತಿತ್ತು. ಹಾಗಾಗಿ, ನೂತನ ವೆಬ್‌ಸೈಟ್‌ ಸಿದ್ಧಪಡಿಸಲಾಗುತ್ತಿದೆ’ ಎಂದೂ ಹೇಳಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು

 
SMTP error: Could not authenticate.