6
ನಗರದ ಶಹಾಬಜಾರ್‌ ನಾಕಾ ವೃತ್ತದಿಂದ ಆಳಂದ ರಿಂಗ್‌ ರಸ್ತೆಯ ಪಾದಚಾರಿ ಮಾರ್ಗದ ಮರಗಳಿಗೆ ದುಸ್ಥಿತಿ

ಮರಗಳ ಬುಡ ಮುಚ್ಚಿದ ಸಿಮೆಂಟ್

Published:
Updated:

ಕಲಬುರ್ಗಿ: ರಾಜ್ಯದಲ್ಲಿ ಕಲಬುರ್ಗಿ ನಗರವು ಬಿಸಿಲು ನಾಡು ಎಂದೇ ಹೆಸರಾಗಿದೆ. ಸಸಿ, ಮರಗಳ ಪೋಷಣೆ, ಸಂರಕ್ಷಣೆ ಇಲ್ಲಿ ತುಸು ಕಡಿಮೆ ಎನ್ನಬಹುದು. ಕೆಲವೆಡೆ ರಸ್ತೆ ಬದಿಯಲ್ಲಿ ಇರುವ ಮರಗಳನ್ನು ಪೋಷಿಸದೇ ಅವುಗಳ ಬುಡಗಳಿಗೆ ಕಾಂಕ್ರೀಟ್‌ ಹಾಗೂ ಚಪ್ಪಡಿ ಕಲ್ಲು ಹಾಕುವ ಮೂಲಕ ಪರೋಕ್ಷವಾಗಿ ಅವುಗಳ ಮಾರಣಹೋಮ ಮಾಡಲಾಗುತ್ತಿದೆ.

ಇಲ್ಲಿನ ಶಹಾಬಜಾರ್‌ ನಾಕಾ ವೃತ್ತದಿಂದ ಆಳಂದ ರಿಂಗ್‌ ರಸ್ತೆ ಬದಿಯ ಉದ್ದಕ್ಕೂ ಇರುವ ಹೊಂಗೆ, ಬೇವು ಸೇರಿದಂತೆ ವಿವಿಧ ಜಾತಿಯ ಹತ್ತಾರು ಮರಗಳ ಬುಡಗಳಿಗೆ ಕಾಂಕ್ರೀಟ್‌ ಎಳೆಯಲಾಗಿದೆ. ಚಿಂಚೋಳಿ ಲೇಔಟ್‌ನ ಶಿವಲಿಂಗ ನಗರದ ಮುಖ್ಯರಸ್ತೆಯಲ್ಲಿನ ಬೃಹತ್‌ ಬೇವಿನ ಮರದ ಬುಡಕ್ಕೂ ಸಿಮೆಂಟ್‌ ಹಾಕುವ ಮೂಲಕ ಅದರ ಬೇರುಗಳು ಉಸಿರಾಡದಂತೆ ಮಾಡಲಾಗಿದೆ.

‘ಮರಗಳ ಬೆಳವಣಿಗೆಗೆ ಪೂರಕವಾಗಿ ಬೇರುಗಳಿಗೆ ನೀರು ಹಾಗೂ ಪೋಷಕಾಂಶದ ಅಗತ್ಯವಿರುತ್ತದೆ. ಹೊಸದಾಗಿ ಬೆಳೆಯುತ್ತಿರುವ ಮರಗಳ ಬೇರು ನೆಲದಾಳಕ್ಕೆ ಹೋಗಿರುವುದಿಲ್ಲ. ಬೆಳವಣಿಗೆಯ ಹಂತದಲ್ಲಿರುವ ಮರಗಳು ಬುಡದಿಂದಲೇ ಅಗತ್ಯ ನೀರನ್ನು ಹೀರುತ್ತವೆ. ಇಂತಹ ಮರಗಳ ಬುಡಗಳಿಗೆ ರಸ್ತೆ ಬದಿಯ ಕೆಲ ಅಂಗಡಿಗಳ ಮಾಲೀಕರು ಕಾಂಕ್ರೀಟ್‌ನಿಂದ ಮುಚ್ಚಿದ್ದಾರೆ. ಮರದ ವಿಶಾಲ ಬೆಳವಣಿಗೆಗೆ ಅದರ ಬುಡದಲ್ಲಿ ಜಾಗ ಬಿಡಬೇಕು. ಈ ರೀತಿ ಮಾಡದೇ ಸಿಮೆಂಟ್‌ ಹಾಕಿದರೆ ಅವುಗಳ ಬೆಳವಣಿಗೆಗೆ ಕುಂಠಿತವಾಗುತ್ತದೆ’ ಎನ್ನುತ್ತಾರೆ ಶಿವಲಿಂಗನಗರದ ನಿವಾಸಿ ನಿವೃತ್ತ ಉಪನ್ಯಾಸಕ ಹಣಮಂತ್ರಾಯಪ್ಪ.

‘ಮರಗಳ ಬುಡಗಳಿಗೆ ಸಿಮೆಂಟ್‌ ಹಾಕುವುದರಿಂದ ಆಗುವ ಹಾನಿಯ ಬಗ್ಗೆ ಪಾಲಿಕೆ ಹಾಗೂ ಅರಣ್ಯ ಇಲಾಖೆ ಅಧಿಕಾರಿಗಳು ಸಾರ್ವಜನಿಕರಲ್ಲಿ ಅರಿವು ಮೂಡಿಸಬೇಕು. ಜತೆಗೆ ರಸ್ತೆ ಕಾಮಗಾರಿ ನಡೆಸುವ ಗುತ್ತಿಗೆದಾರರಿಗೂ ತಿಳಿಹೇಳಬೇಕು. ಈಗಾಗಲೇ ರಸ್ತೆ ಬದಿಯಲ್ಲಿನ ಮರಗಳ ಬುಡಕ್ಕೆ ಹಾಕಿರುವ ಸಿಮೆಂಟ್‌ನ್ನು ತೆಗೆಸುವ ಕೆಲಸವನ್ನೂ ಮಾಡಬೇಕು. ಇದರೊಂದಿಗೆ ಸಂಬಂಧಪಟ್ಟ ಅಧಿಕಾರಿಗಳು ನಗರದೆಲ್ಲೆಡೆ ಇನ್ನೂ ಹೆಚ್ಚಿನ ಸಸಿಗಳನ್ನು ನೆಟ್ಟು ಪೋಷಿಸುವ ಕೆಲಸ ಮಾಡಬೇಕು’ ಎಂದು ಒತ್ತಾಯಿಸುತ್ತಾರೆ.

‘ನಗರೀಕರಣಕ್ಕೆ ಪರಿಸರ ಸಂರಕ್ಷಣೆ ಅವಶ್ಯ’

‘ನಗರೀಕರಣದ ಜೊತೆಗೆ ಪರಿಸರವನ್ನೂ ಸಂರಕ್ಷಿಸಬೇಕು. ಇದಕ್ಕೆ ಸಾರ್ವಜನಿಕರ ಸಹಕಾರ ತುಂಬಾ ಅಗತ್ಯ. ಮರಗಳ ಬುಡದ ಸುತ್ತಲೂ ಕನಿಷ್ಠ 2ರಿಂದ 3 ಅಡಿ ಜಾಗ ಬಿಡಬೇಕು. ಆದರೆ, ಕೆಲ ಮಾಲೀಕರು ಜಾಗದ ಸಮಸ್ಯೆ ಎಂಬ ನೆಪವೊಡ್ಡಿ ಅವುಗಳ ಬುಡದ ತನಕ ಕಲ್ಲು ಹಾಕುತ್ತಾರೆ. ಇದು ಸರಿಯಲ್ಲ’ ಎನ್ನುತ್ತಾರೆ ಜಿಲ್ಲಾ ಅರಣ್ಯಸಂರಕ್ಷಣಾಧಿಕಾರಿ ಶಿವಶಂಕರ್ ಹೇಳುತ್ತಾರೆ.

‘ರಸ್ತೆ ಅಭಿವೃದ್ಧಿ ಹಾಗೂ ಸ್ವಚ್ಛತೆಯ ನೆಪದಲ್ಲಿ ಮರಗಳ ಬೆಳವಣಿಗೆಗೆ ಸಹಕರಿಸದೇ ಇದ್ದಲ್ಲಿ ಮುಂದಿನ ದಿನಗಳಲ್ಲಿ ಕೇವಲ ನಗರ ಇರುತ್ತದೆ. ಆದರೆ, ಜನರು ಬದುಕಲು ಹರಸಾಹಸ ಪಡಬೇಕಾಗುತ್ತದೆ. ಶೀಘ್ರದಲ್ಲಿ ಪಾಲಿಕೆ ಅಧಿಕಾರಿಗಳ ಸಭೆ ಕರೆದು ಪಾದಚಾರಿ ಮಾರ್ಗದಲ್ಲಿನ ಮರಗಳ ಬಳಿ ಹಾಕಿರುವ ಸಿಮೆಂಟ್‌ ತೆಗೆಸುವ ಬಗ್ಗೆ ಚರ್ಚೆ ನಡೆಸಲಾಗುವುದು’ ಎಂದು ಅವರು ಹೇಳಿದರು.

ಮರಗಳ ಪೋಷಣೆ ಮಾಡಬೇಕೆ ವಿನಾ, ಅವುಗಳ ಬುಡಕ್ಕೆ ಕಾಂಕ್ರೀಟ್‌ ಹಾಕುವುದು ತಪ್ಪು. ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ, ಸಿಮೆಂಟ್‌ ತೆಗೆಸಲಾಗುವುದು.
–ಆರ್‌.ಪಿ.ಜಾಧವ್, ಪಾಲಿಕೆಯ ಉಪ ಆಯುಕ್ತ (ಅಭಿವೃದ್ಧಿ)

ಮರದ ಬುಡದ ಮಣ್ಣು ಮನೆ ಹಾಗೂ ಅಂಗಡಿಯ ಅಂಗಳಕ್ಕೆ ಬರುತ್ತದೆ ಎಂದು ಜನರು ಬುಡದ ತನಕ ಸಿಮೆಂಟ್‌ ಹಾಕುತ್ತಾರೆ. ಇದರಿಂದ ಮಳೆ ನೀರು ಭೂಮಿಯಲ್ಲಿ ಇಂಗಲ್ಲ.
- ಶಿವಕುಮಾರ ದುಡೂತಿ, ಬಂಡಿ ಹೋಟೆಲ್‌ ಮಾಲೀಕ, ಆಳಂದ ರಸ್ತೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !