ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಳೆ: ಭತ್ತ ಬೆಳೆದ ರೈತರು ಕಂಗಾಲು

ಬಿರುಗಾಳಿ: ಸಿರವಾರ ಸುತ್ತಮುತ್ತ ಕಟಾವಿಗೆ ಬಂದಿದ್ದ ಪೈರು ಧರೆಗೆ
Last Updated 17 ಏಪ್ರಿಲ್ 2018, 10:34 IST
ಅಕ್ಷರ ಗಾತ್ರ

ಸಿರವಾರ: ಮೂರು ದಿನಗಳಿಂದ ಸುರಿದ ಅಕಾಲಿಕ ಮಳೆಯಿಂದ ಕಟಾವಿಗೆ ಬಂದು ನಿಂತಿದ್ದ ಭತ್ತದ ಬೆಳೆಯು ನೆಲಕಚ್ಚಿದ್ದು, ರೈತರು ಸಂಕಷ್ಟ ಅನುಭವಿಸುವಂತಾಗಿದೆ.

ಪಟ್ಟಣ ಸೇರಿದಂತೆ ಸುತ್ತಲಿನ ಗ್ರಾಮಗಳ ರೈತರು ತುಂಗಾಭದ್ರಾ ಎಡದಂಡೆ ನಾಲೆಯ ನೀರು ಮತ್ತು ಜಮೀನಿನಲ್ಲಿ ಕೊಳವೆಬಾವಿಯ ನೀರಿನಿಂದ ನೂರಾರು ಎಕರೆಯಲ್ಲಿ ಭತ್ತ ನಾಟಿ ಮಾಡಿದ್ದರು. ಉತ್ತಮ ಫಸಲು ಕೈಸೇರುವ ನಿರೀಕ್ಷೆಯಲ್ಲಿ ಇದ್ದರು. ಕೆಲ ರೈತರು ಕಟಾವು ಮಾಡಿಕೊಂಡಿದ್ದರೆ, ಇನ್ನು ಕೆಲವರು ಭತ್ತ ಕಟಾವಿಗೆ ಸಿದ್ದಮಾಡಿಕೊಂಡಿದ್ದರು.

ಮೂರು ದಿನಗಳ ಮೋಡ ಕವಿದ ವಾತಾವರಣ ಮತ್ತು ಭಾನುವಾರ ಬೀಸಿದ ಗಾಳಿ ಮತ್ತು ಅಕಾಲಿಕ ಮಳೆಯಿಂದ ಕಟಾವಿಗೆ ಸಿದ್ದವಾಗಿದ್ದ ಭತ್ತ ನಾಶವಾಗಿದೆ. ಕೆಲವು ರೈತರು ಭತ್ತವನ್ನು ಕಟಾವು ಮಾಡಿ, ಜಮೀನಿನಲ್ಲಿ ಒಣಗಲು ರಾಶಿ ಹಾಕಿದ್ದರು.

ಏಕಾಏಕಿ ಸುರಿದ ಮಳೆಯಿಂದ ಸಂಗ್ರಹಿಸಿದ್ದ ಭತ್ತ ಜಲಾವೃತಗೊಂಡಿದೆ. ರೈತರು ತೊಂದರೆ ಅನುಭವಿಸುವಂತಾಗಿದೆ.

ಬೆಲೆ ಕುಸಿತ: ತಿಂಗಳ ಹಿಂದೆ ಪ್ರತಿ 75 ಕೆ.ಜಿ ಭತ್ತಕ್ಕೆ ₹1,450ರಿಂದ 1,600ರ ವರೆಗೆ ಬೆಲೆ ಸಿಗುತ್ತಿತ್ತು. ವಾರದಿಂದ ಈಚೆಗೆ ಬೆಲೆಯು ₹1,400 ರಿಂದ ₹1,450ಕ್ಕೆ ಕುಸಿದಿದೆ. ಈಗ ಮಳೆಯಿಂದ ₹1,200 ಕಡಿಮೆ ಬೆಲೆಗೂ ಖರೀದಿ ಮಾಡಲು ಪರಿಸ್ಥಿತಿ ನಿರ್ಮಾಣವಾಗಿದೆ.

ಕೆಲ ವರ್ಷಗಳ ಹಿಂದೆ ದಲ್ಲಾಳಿಗಳು ಭತ್ತ ಕಟಾವು ಮಾಡುವ ಮೊದಲೇ ಜಮೀನುಗಳಿಗೆ ಬಂದು ಬೆಲೆ ನಿಗದಿ ಪಡಿಸುತ್ತಿದ್ದರು. ಆದರೆ, ಕಳೆದ ವರ್ಷದಿಂದ ಬೆಲೆಯಲ್ಲಿ ತಾರತಮ್ಯ ಮಾಡಲಾಗುತ್ತಿದೆ. ಬೇಕಾಬಿಟ್ಟಿ ಬೆಲೆ ನಿಗದಿ ಮಾಡುತ್ತಿದ್ದಾರೆ ಎಂದು ರೈತರು ದೂರುತ್ತಿದ್ದಾರೆ.

ಈಗ ಅಕಾಲಿಕ ಮಳೆಯಿಂದ ಕಂಗಾಲಾದ ರೈತರು ದಲ್ಲಾಳಿಗಳಿಗೆ ಸಂಪರ್ಕಿಸುತ್ತಿದ್ದಾರೆ. ಆದರೆ, ಅವರು ‘ನೋಡೋಣ’ ಎನ್ನುತ್ತಾ ಖರೀದಿಗೆ ನಿರಾಸಕ್ತಿ ತೋರುತ್ತಿದ್ದಾರೆ. ಇದು ರೈತರಿಗೆ ನುಂಗಲಾರದ ತುತ್ತಾಗಿದೆ.

**

ಅಕಾಲಿಕೆ ಮಳೆಯಿಂದ ಕಟಾವು ಮಾಡಿದ್ದ ಭತ್ತ ಹಸಿಯಾಗಿದೆ. ಬೆಲೆ ಕುಸಿತ, ಇಳುವರಿ ಕಡಿಮೆ ಚಿಂತೆ ತಂದಿದೆ. ಬೆಲೆ ಹೆಚ್ಚಾಗ ದಿದ್ದರೆ ಇನ್ನು ಹೆಚ್ಚು ತೊಂದರೆ ಯಾಗುತ್ತದೆ – ಶ್ರೀನಿವಾಸ,‌ ಸಿರವಾರ ರೈತ.

**

ರೈತರು ದಲ್ಲಾಳಿಗಳಿಗೆ ಸಂಪರ್ಕಿಸಿದರೆ ಅವರು ಖರೀದಿಗೆ ನಿರಾಸಕ್ತಿ ತೋರುತ್ತಿದ್ದಾರೆ. ಇನ್ನು ಹೆಚ್ಚಿನ ಬೆಲೆ ಕುಸಿತದ ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಇದು ರೈತರಿಗೆ ಮಾರಕ ಆಗುತ್ತಿದೆ – ಅಮರೇಶಪ್ಪ ಹರಕಂಚಿ, ಸಿರವಾರ ರೈತ.

**

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT