ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತ್ರಿವಳಿ ಶಿಶುಗಳಿಗೆ ಜನ್ಮ ನೀಡಿದ ತಾಯಿ!

ಕೋಣಿನ್‌ ನರ್ಸಿಂಗ್‌ ಹೋಮ್‌ನಲ್ಲಿ ಸುರಕ್ಷಿತ ಹೆರಿಗೆ ಮಾಡಿಸಿದ ಡಾ.ಸವಿತಾ ಕೋಣಿನ್‌
Last Updated 23 ಜನವರಿ 2021, 12:20 IST
ಅಕ್ಷರ ಗಾತ್ರ

ಕಲಬುರ್ಗಿ: ಇಲ್ಲಿನ ಸಂಗಮೇಶ್ವರ ನಗರದಲ್ಲಿರುವ ಕೋಣಿನ್‌ ನರ್ಸಿಂಗ್‌ ಹೋಮ್‌ನಲ್ಲಿ 21 ವರ್ಷದ ಮಹಿಳೆ ತ್ರಿವಳಿ ಶಿಶುಗಳಿಗೆ ಜನ್ಮ ನೀಡಿದ್ದು ತಡವಾಗಿ ಬೆಳಕಿಗೆ ಬಂದಿದೆ. ಬಾಣಂತಿ ಹಾಗೂ ಮೂವರೂ ಶಿಶುಗಳು ಆರೋಗ್ಯವಾಗಿದ್ದಾರೆ.

ಬೀದರ್‌ ಜಿಲ್ಲೆಯ ಬಸವಕಲ್ಯಾಣ ತಾಲ್ಲೂಕಿನ ಕೊಯಿನೂರ ಗ್ರಾಮದ ಮೀನಾಕ್ಷಿ ರವೀಂದ್ರ ಅಪ್ಪೆ ಅವರು ಎರಡು ಹೆಣ್ಣು ಹಾಗೂ ಒಂದು ಗಂಡು ಶಿಶುವಿಗೆ ಜನ್ಮ ನೀಡಿದ ಮಹಾತಾಯಿ! ಮದುವೆಯಾದ ಎರಡು ವರ್ಷಗಳ ನಂತರ ಇದು ಅವರ ಚೊಚ್ಚಲ ಹೆರಿಗೆಯಾಗಿದೆ.

ಹೆರಿಗೆ ನೋವು ಕಾಣಿಸಿಕೊಂಡ ಮೀನಾಕ್ಷಿ ಅವರು ಜನವರಿ 11ರಂದು ತಡರಾತ್ರಿ ಕೋಣಿನ್‌ ಹೆರಿಗೆ ಆಸ್ಪತ್ರೆಗೆ ದಾಖಲಾದರು. ಅವರ ಗರ್ಭದಲ್ಲಿ ಮೂರು ಶಿಶುಗಳು ಇರುವ ಕಾರಣ ಪ್ರಾರಂಭದ ಎರಡು ತಾಸು ತುಸು ಆತಂಕ ಉಂಟಾಗಿತ್ತು. ಸುರಕ್ಷಿತ ಹೆರಿಗೆ ನಂತರ ಆಸ್ಪತ್ರೆಯಲ್ಲಿ ಸಡಗರ ಮನೆ ಮಾಡಿತು.

‘ಆರ್ಥಿಕವಾಗಿ ಅಷ್ಟೊಂದು ಅನುಕೂಲಸ್ಥರಲ್ಲದ ಮೀನಾಕ್ಷಿ ಅವರಿಗೆ ಸುರಕ್ಷಿತ ಹೆರಿಗೆಯ ಭರವಸೆ ನೀಡಿದ್ದೆವು. ಎರಡೂವರೆ ತಿಂಗಳ ಕಾಲ ಗರ್ಭಿಣಿಯನ್ನು ನಮ್ಮ ನರ್ಸಿಂಗ್‌ ಹೋಮ್‌ನ ಹಿಂದಿನ ಕೋಣೆಯಲ್ಲಿ ಇರಿಸಿಕೊಂಡು ಪರಿಶೀಲಿಸಿದೆವು. ಪ್ರಸವ ಪೂರ್ವ ತೆಗೆದುಕೊಳ್ಳಬೇಕಾದ ಎಲ್ಲ ಕಾಳಜಿ ಮಾಡಿದೆವು. ಆದರೂ ಈಚೆಗೆ ಅವರು ತಮ್ಮ ತವರೂರಾದ ಕಮಲಾಪುರಕ್ಕೆ ಹೋಗಿದ್ದರು. ಜ. 11ರಂದು ಮೀನಾಕ್ಷಿ ಅವರಿಗೆ ಏಕಾಏಕಿ ಗರ್ಭಕೋಶದಿಂದ ನೀರು ಸ್ರವಿಸುವಿಕೆ ಆರಂಭವಾಗಿತ್ತು. ಭಯದಿಂದ ನಡಗುತ್ತಿದ್ದ ಅವರನ್ನು ಸಮಾಧಾನ ಮಾಡಿ, ಧೈರ್ಯ ತುಂಬಿದೆವು. ರಾತ್ರಿ 11.45ರ ಸುಮಾರಿಗೆ ಶಸ್ತ್ರಚಿಕಿತ್ಸೆ ಮೂಲಕ ಸುರಕ್ಷಿವಾಗಿ ಹೆರಿಗೆ ಮಾಡಿಸಲಾಯಿತು’ ಎಂದು ಆಸ್ಪತ್ರೆಯ ಮುಖ್ಯಸ್ಥರಾದ ಡಾ.ಸವಿತಾ ಭರತ ಕೋಣಿನ್‌ ತಿಳಿಸಿದ್ದಾರೆ.

ಹೆರಿಗೆ ಆದ ತಕ್ಷಣ ಮಕ್ಕಳ ತಜ್ಞೆ ಡಾ.ಅಪೂರ್ವ ಅವರು ಮೂರೂ ನವಜಾತ ಶಿಶುಗಳನ್ನು ತಮ್ಮ ಕಾರಿನಲ್ಲಿಯೇ ತಮ್ಮ ನರ್ಸಿಂಗ್‌ ಹೋಮ್‌ಗೆ ಕರೆದೊಯ್ದು ‘ನವಜಾತ ಶಿಶುಗಳ ಐಸಿಯು’ದಲ್ಲಿ ಇರಿಸಿ ಉಪಚರಿಸಿದರು.

ಅರಿವಳಿಕೆ ತಜ್ಞರಾದ ಡಾ.ಗಿರಿಜಾಶಂಕರ ಮತ್ತು ಮಕ್ಕಳ ತಜ್ಞೆ ಡಾ.ಅಪೂರ್ವ ಆಂವಟಿ ಅವರ ನೆರವಿನೊಂದಿಗೆ ಈ ಶಸ್ತ್ರಚಿಕಿತ್ಸೆ ಯಶಸ್ವಿಯಾಗಿದೆ ಎಂದು ಅವರು ಪ್ರತಿಕ್ರಿಯಿಸಿದ್ದಾರೆ.

ತ್ರಿವಳಿ ಹೆರಿಗೆ ಸವಾಲುಗಳೇನು?: ‘ಮೀನಾಕ್ಷಿಯ ಗರ್ಭದಲ್ಲಿ 35 ವಾರಗಳ ಕಾಲ 1.6 ಕೆ.ಜಿ. ತೂಕದ ಒಂದು ಮಗು ಮತ್ತು 2 ಕೆ.ಜಿ. ತೂಕದ ಇನ್ನೊಂದು ಮಗು ಕಾಲು ಮುಂದು ಮಾಡಿಕೊಂಡು ಮಲಗಿದ ಸ್ಥಿತಿಯಲ್ಲಿ ಇದ್ದವು. 1.9 ಕೆ.ಜಿ. ತೂಕದ ಇನ್ನೊಂದು ಮಗು ಅಡ್ಡಲಾಗಿ ಮಲಗಿದ ಸ್ಥಿತಿಯಲ್ಲಿತ್ತು. ಹೀಗೆ ಬೇರೆಬೇರೆ ಸ್ಥಿತಿಯಲ್ಲಿರುವ ಶಿಶುಗಳ ಹೆರಿಗೆ ಅತ್ಯಂತ ಸವಾಲಿನ ಕೆಲಸ. ನನ್ನ ವೃತ್ತಿ ಬದುಕಿನಲ್ಲಿ ಇದೊಂದು ಅಪರೂಪದ ಹೆರಿಗೆ’ ಎಂದು ಅವರು ಹೇಳಿದರು.

‘ಸಾಮಾನ್ಯ ಗರ್ಭಧಾರಣೆಯಲ್ಲಿ ಹೆರಿಗೆಗೆ 40 ವಾರಗಳಾದರೆ (281 ದಿನ), ಅವಳಿ ಗರ್ಭದ ಅವಧಿ 37 ವಾರಕ್ಕೆ (260) ಇಳಿಯುತ್ತದೆ. ಆದರೆ, ತ್ರಿವಳಿಗಳ ಭ್ರೂಣಗಳಿದ್ದರೆ ಹೆರಿಗೆ ಅವಧಿ 35 ವಾರಕ್ಕೆ ಇಳಿಯುವ ಸಾಧ್ಯತೆ ಹೆಚ್ಚು. ಮೂರು ಭ್ರೂಣಗಳು ಇದ್ದಾಗ ಗರ್ಭಾಶಯದಲ್ಲಿ ಪೌಷ್ಟಿಕಾಂಶ ಹಾಗೂ ಸ್ಥಳಕ್ಕಾಗಿ ಅವುಗಳ ಮಧ್ಯೆ ಸ್ಪರ್ಧೆ ಏರ್ಪಡುತ್ತದೆ. ಹಾಗಾಗಿ, ಶಿಶುಗಳ ತೂಕ ಕೂಡ ಅತ್ಯಂತ ಕಡಿಮೆ ಆಗುತ್ತದೆ’ ಎಂದೂ ಡಾ.ಸವಿತಾ ವಿವರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT