ಪೂರ್ಣ ಅನುದಾನ ಪಡೆಯಲು ಯತ್ನ: ಸಚಿವ ಬಂಡೆಪ್ಪ ಕಾಶೆಂಪುರ

7
ಎಚ್‌ಕೆಆರ್‌ಡಿಬಿ ವಿಶೇಷ ಅನುದಾನ ಕಡಿತ

ಪೂರ್ಣ ಅನುದಾನ ಪಡೆಯಲು ಯತ್ನ: ಸಚಿವ ಬಂಡೆಪ್ಪ ಕಾಶೆಂಪುರ

Published:
Updated:
Deccan Herald

ಕಲಬುರ್ಗಿ: ‘ಹೈದರಾಬಾದ್‌ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಗೆ ಹಿಂದಿನ ಸರ್ಕಾರ ಮೀಸಲಿಟ್ಟ ₹ 1,500 ಕೋಟಿ ವಿಶೇಷ ಅನುದಾನವನ್ನು ಪೂರ್ಣಪ್ರಮಾಣದಲ್ಲಿ ಪಡೆಯಲಾಗುವುದು. ಈ ಬಗ್ಗೆ ಗೊಂದಲ ಬೇಡ’ ಎಂದು ಸಹಕಾರ ಸಚಿವ ಬಂಡೆಪ್ಪ ಕಾಶೆಂಪುರ ಸ್ಪಷ್ಟಪಡಿಸಿದರು.

‘ಸಿ.ಎಂ ಕುಮಾರಸ್ವಾಮಿ ಅವರು ಮಂಡಿಸಿದ ಬಜೆಟ್‌ನಲ್ಲಿ ₹ 1000 ಕೋಟಿಗೆ ಮಾತ್ರ ಅನುಮೋದನೆ ನೀಡಲಾಗಿದೆ. ಇದರಲ್ಲಿ ₹ 580 ಕೋಟಿ ಸಾಮಾನ್ಯ ಅನುದಾನವಿದ್ದು, ಉಳಿದ ₹ 420 ಕೋಟಿ ಮಾತ್ರ ಎಚ್‌ಕೆಆರ್‌ಡಿಬಿಗೆ ಸೇರಿದೆ ಎಂಬ ಕೂಗು ಜಿಲ್ಲೆಯಿಂದ ಕೇಳಿಬಂದಿದೆ. ಹಂತಹಂತವಾಗಿ ಎಲ್ಲ ವಿಶೇಷ ಅನುದಾನವನ್ನೂ ನೀಡಲು ಮುಖ್ಯಮಂತ್ರಿ ಅವರಿಗೆ ಮನವರಿಕೆ ಮಾಡಲಾಗುವುದು’ ಎಂದು ಅವರು ಶನಿವಾರ ಮಾಧ್ಯಮಗಳಿಗೆ ಉತ್ತರಿಸಿದರು.

‘ಉದ್ಯೋಗ ನೇಮಕಾತಿ ಹಾಗೂ ಶೈಕ್ಷಣಿಕ ಕ್ಷೇತ್ರದಲ್ಲಿ ಈ ಭಾಗಕ್ಕೆ ನಿಗದಿತ ಸ್ಥಾನಗಳು ಸಿಗುತ್ತಿಲ್ಲ. ಈ ಕೊರತೆ ನೀಗಿಸಲು ‘ವಿಶೇಷ ಘಟಕ’ ನಿರ್ಮಾಣ ಮಾಡಬೇಕು ಎಂದೂ ಕುಮಾರಸ್ವಾಮಿ ಅವರಿಗೆ ಮನವಿ ಮಾಡಿದ್ದೇನೆ’ ಎಂದರು.

ರೈತರನ್ನು ಪೀಡಿಸದಿರಲು ತಾಕೀತು: ‘ರೈತರ ರಾಷ್ಟ್ರೀಕೃತ ಬ್ಯಾಂಕುಗಳ ಸಾಲವನ್ನೂ ಮನ್ನಾ ಮಾಡಲು ಅನುಮೋದನೆ ಸಿಕ್ಕಿದೆ. ಆದರೆ, ಬ್ಯಾಂಕ್‌ ಅಧಿಕಾರಿಗಳು ಸಾಲ ವಸೂಲಾತಿಗೆ ಪೀಡಿಸುತ್ತಿದ್ದಾರೆ ಎಂಬ ದೂರು ಕೇಳಿಬಂದಿದೆ. ಅಂಥವರ ಮೇಲೆ ಕ್ರಮ ಕೈಗೊಳ್ಳಬೇಕು, ರೈತರಿಗೆ ರಕ್ಷಣೆ ನೀಡಬೇಕು ಎಂದು ಆಯಾ ಜಿಲ್ಲಾಧಿಕಾರಿಗಳು ಹಾಗೂ ಎಸ್ಪಿಗೆ ಸೂಚಿಸಿದ್ದೇನೆ’ ಎಂದು ಸಚಿವರು ತಿಳಿಸಿದರು.

ಸಮ್ಮಿಶ್ರ ಸರ್ಕಾರ ಸುಭದ್ರ: ‘ನಮ್ಮ ಸಮ್ಮಿಶ್ರ ಸರ್ಕಾರವು ಪೂರ್ಣ ಅವಧಿ ಮುಗಿಸಲಿದೆ. ಸ್ಥಳೀಯ ಸಂಸ್ಥೆಗಳ ಚುನಾವಣೆಯ ಫಲಿತಾಂಶ ಕೂಡ ಸಮ್ಮಿಶ್ರ ಮಾದರಿಯಲ್ಲಿದೆ. ಅಂದರೆ; ಜನ ಕೂಡ ಇದನ್ನು ಸ್ವೀಕರಿಸಿದ್ದಾರೆ ಎಂದರ್ಥ’ ಎಂದು ಕಾಶೆಂಪುರ ತಿಳಿಸಿದರು.

ಈ ಬಗ್ಗೆ ಇಲ್ಲಸಲ್ಲದ ಊಹಾಪೋಹಗಳು ದಿನೇದಿನೇ ಹರಡುತ್ತಿವೆ. ಕೆಲವು ವ್ಯಕ್ತಿಗಳು ಅಥವಾ ಶಾಸಕರ ಮಧ್ಯದಲ್ಲಿ ಸಣ್ಣಪುಟ್ಟ ಗೊಂದಲ ಉಂಟಾದರೂ ಅದು ನೇರವಾಗಿ ಸರ್ಕಾರದ ಮೇಲೆ ಪರಿಣಾಮ ಬೀರುವ ಹಾಗೆ ಬಿಂಬಿಸುವುದು ಸರಿಯಲ್ಲ’ ಎಂದು ಅವರು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !