ಮಂಗಳವಾರ, ಮಾರ್ಚ್ 2, 2021
19 °C
‘ಕನ್ನಡ ಕಾಯಕ ವರ್ಷ’ದ ಅಂಗವಾಗಿ ರಾಜ್ಯಮಟ್ಟದ ವಿಚಾರ ಸಂಕಿರಣ ಉದ್ಘಾಟಿಸಿ ನಾಗಾಭರಣ

ಕಲ್ಯಾಣ ಕರ್ನಾಟಕವೇ ಕನ್ನಡದ ಆದಿ: ಟಿ.ಎಸ್‌. ನಾಗಾಭರಣ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕಲಬುರ್ಗಿ: ‘ಇಡೀ ಕನ್ನಡದ ಮೂಲ, ಪರಂಪರೆ ಹಾಗೂ ಸಂಸ್ಕೃತಿಯ ಬುನಾದಿ ಹಾಕಿದವರೇ ಈ ಭಾಗದವರು. ಆದರೆ, ನಾವುಗಳೇ ಕನ್ನಡದ ಆದಿಸತ್ವ ಎಂದು ಗಟ್ಟಿ ದನಿಯಲ್ಲಿ ಹೇಳಿಕೊಳ್ಳದ ಕಾರಣ ನೀವು ಇನ್ನೂ ತಾರತಮ್ಯ ಅನುಭವಿಸುತ್ತಿದ್ದೀರಿ. ಇನ್ನಾದರೂ ನಾವೇ ಮೂಲ ಎಂದು ಹೇಳಿಕೊಳ್ಳುವಂಥ ಧಾರ್ಷ್ಟ್ಯ ಬೆಳೆಸಿಕೊಳ್ಳಬೇಕು’ ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ, ಚಲನಚಿತ್ರ ನಿರ್ದೇಶಕ ಟಿ.ಎಸ್‌. ನಾಗಾಭರಣ ಕರೆ ನೀಡಿದರು.

ಕನ್ನಡ ಅಭಿವೃದ್ಧಿ ಪ್ರಾಧಿಕಾರ ಹಾಗೂ ಗುಲಬರ್ಗಾ ವಿಶ್ವವಿದ್ಯಾಲಯದ ಕನ್ನಡ ಅಧ್ಯಯನ ಸಂಸ್ಥೆ ಆಶ್ರಯದಲ್ಲಿ ವಿಶ್ವವಿದ್ಯಾಲಯದಲ್ಲಿ ಸೋಮವಾರ ಆಯೋಜಿಸಿದ್ದ ‘ಕವಿರಾಜ ಮಾರ್ಗ ಪರಿಸರದ ಭಾಷೆ ಮತ್ತು ಸಂಸ್ಕೃತಿ’ ಕುರಿತ ರಾಜ್ಯಮಟ್ಟದ ವಿಚಾರ ಸಂಕಿರಣ ಉದ್ಘಾಟಿಸಿ ಅವರು ಮಾತನಾಡಿದರು.

‘ಹಿಂದುಳಿದ ಹಾಗೂ ಮುಂದುವರಿದ ಪ್ರದೇಶಗಳು ಎಂಬುದನ್ನು ಭೌತಿಕವಾಗಿ ಅರ್ಥೈಸುವುದನ್ನು ನಾನು ಒಪ್ಪುವುದಿಲ್ಲ. ರಸ್ತೆ, ಕಟ್ಟಡಗಳು ಅಭಿವೃದ್ಧಿಯ ಸಂಕೇತಗಳಲ್ಲ. ಸಿಮೆಂಟ್‌ ಸಂಸ್ಕೃತಿ ಹೆಚ್ಚಾದರೆ ಅಭಿವೃದ್ಧಿಯನ್ನೇ ನುಂಗಿ ಹಾಕುತ್ತದೆ. ನಮ್ಮ ಸಾಂಸ್ಕೃತಿಕ ಶ್ರೀಮಂತಿಕೆಯೇ ನಿಜವಾದ ಅಭಿವೃದ್ಧಿ’ ಎಂದು ಪ್ರತಿಪಾದಿಸಿದರು.

‘ಕನ್ನಡಿಗರು ಆದಿಯಿಂದಲೂ ಎಲ್ಲರನ್ನೂ ಒಳಗೊಳ್ಳುವ ಮನೋಭಾವದವರು. 10ನೇ ಶತಮಾನದ ಪಂಪ ‘ಮನುಷ್ಯ ಕುಲ ತಾನೊಂದೇ ವಲಂ’ ಎಂದು ಬರೆದಿದ. 12ನೇ ಶತಮಾನದಲ್ಲಿ ಬಸವಣ್ಣ ‘ಇವ ನಮ್ಮವ, ಇವ ನಮ್ಮವ’ ಎಂದು ಬರೆದರು, 20ನೇ ಶತಮಾನದಲ್ಲಿ ಕುವೆಂಪು ‘ಮನುಜಮತ ವಿಶ್ವಪಥ’ವೆಂದರು. ಹೀಗೆ ಕನ್ನಡಿಗರು ಯಾವಾಗಲೂ ಇಡೀ ವಿಶ್ವವನ್ನೇ ನಮ್ಮ ಮನೆ ಎಂದು ಭಾವಿಸಿದ್ದಾರೆ. ಇದೇ ನಿಜವಾದ ಅಭಿವೃದ್ಧಿ’ ಎಂದು ಅಭಿಪ್ರಾಯ ಪಟ್ಟರು.

ಗುಲಬರ್ಗಾ ವಿ.ವಿ ಹಂಗಾಮಿ ಕುಲಪತಿ ಪ್ರೊ.ಚಂದ್ರಕಾಂತ ಯಾತನೂರು ಅಧ್ಯಕ್ಷತೆ ವಹಿಸಿದ್ದರು. ಸಿಂಡಿಕೇಟ್ ಸದಸ್ಯ ಲಕ್ಷ್ಮಣ ರಾಜನಾಳಕರ, ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಸದಸ್ಯ ಸುರೇಶ ಬಡಿಗೇರ ವೇದಿಕೆ ಮೇಲಿದ್ದರು.

‘ಭವಿಷ್ಯದ ಕನ್ನಡ ಕಟ್ಟಲು ತಾಂತ್ರಿಕ ಸಾಮರ್ಥ್ಯ ಬಳಸಿಕೊಳ್ಳಿ’

‘ಇಂದು ಮೊಬೈಲ್‌ ಇಲ್ಲದಿರುವ ಕೈಗಳೇ ಇಲ್ಲ. ಶಿಲಾಯುಗದಲ್ಲಿ ಚಿತ್ರಗಳನ್ನು ಬಳಸಿ ಸಂವಹನ ನಡೆಸುತ್ತಿದ್ದರು. ಇಂದು ಸಾಮಾಜಿಕ ಮಾಧ್ಯಮಗಳಲ್ಲಿಯೂ ಅದೇ ತರದ ಭಾಷೆ ಪುನರಾವರ್ತನೆ ಆಗುತ್ತದೆ. ಆದರೆ, ಭವಿಷ್ಯದ ಪೀಳಿಗೆಗೆ ಕನ್ನಡ ಉಳಿಯಬೇಕಾದರೆ ಆಧುನಿಕ ಪ್ರಪಂಚದ ಎಲ್ಲ ಸಾಧ್ಯೆಗಳನ್ನೂ ನಾವು ವಿವೇಚನೆಯಿಂದ ಬಳಸಿಕೊಳ್ಳಬೇಕು’ ಎಂದು ಟಿ.ಎಸ್‌. ನಾಗಾಭರಣ ಸಲಹೆ ನೀಡಿದರು.

‘ಚಂದಮಾಮನನ್ನೂ ತೋರಿಸಿ ಮಗುವಿಗೆ ತುತ್ತು ನೀಡುತ್ತಿದ್ದ ತಾಯಿ, ಈಗ ಮೊಬೈಲ್‌ ಕೈಯಲ್ಲಿ ಕೊಟ್ಟು ಬಾಯಿಗೆ ಅನ್ನ ‘ತುರುಕು’ತ್ತಾಳೆ. ಆ ತುತ್ತಿನ ಜತೆಗೇ ಕನ್ನಡವನ್ನೂ ತಿನ್ನಿಸಬೇಕಿದೆ. ಮುಂದಿನ ದಿನಗಳಲ್ಲಿ ರೋಬಾಟ್‌ಗಳೇ ಎಲ್ಲ ಕೆಲಸವನ್ನೂ ಮಾಡುವ ಕಾಲ ಬರಬಹುದು. ಆ ಸಂದರ್ಭಕ್ಕೆ ನಮ್ಮ ಸವಾಲು ಹಾಗೂ ನಮಗೆ ಉಳಿದ ಸಾಧ್ಯತೆಗಳೇನು ಎಂಬುದನ್ನು ಮುಂದಾಲೋಚನೆ ಮಾಡಿ, ಕನ್ನಡ ಕಟ್ಟಬೇಕಿದೆ’ ಎಂದರು.

‘ರಾಷ್ಟ್ರಕೂಟರ ಕಾಲದಲ್ಲಿ ರಚನೆಯಾದ ‘ಕವಿರಾಜಮಾರ್ಗ’ ಇದೂವರೆಗಿನ ಕನ್ನಡಿಗ ಅಸ್ತಿತ್ವದ ದೊಡ್ಡ ದಾಖಲೆ. ಕನ್ನಡ ಸಾಹಿತ್ಯ, ಸಂಸ್ಕೃತಿ, ಪರಂಪರೆ, ಶೌರ್ಯ, ದಯಾಗುಣ ಹೀಗೆ ಎಲ್ಲ ಆಯಾಮಗಳಲ್ಲೂ ಪೂರ್ಣಪ್ರಜ್ಞ ಕನ್ನಡಿಗ ಹಾಗೂ ಪರಿಪೂರ್ಣ ಕರ್ನಾಟಕ ಹೇಗಿತ್ತು ಎಂಬುದನ್ನು ಈ ಗ್ರಂಥ ಹೇಳುತ್ತದೆ. ನನಗಿಂತಲೂ ಮುಂಚೆ 10 ಕನ್ನಡ ಕವಿಗಳು ಇದ್ದರು ಎಂದೂ ಕವಿರಾಜಮಾರ್ಗಕಾರ ದಾಖಲಿಸಿದ್ದಾನೆ’ ಎಂದು ವಿಶ್ರಾಂತ ಪ್ರಾಧ್ಯಾಪಕ ಶಾಂತಿನಾಥ ದಿಬ್ಬದ ಹೇಳಿದರು.

ಆಶಯ ಭಾಷಣ ಮಾಡಿದ ಅವರು, ‘ಕವಿರಾಜ ಮಾರ್ಗದಲ್ಲಿ ‘‍ಕನ್ನಡಗಳ್‌’ ಎಂಬ ಪದವಿದೆ. ಅದು ಕನ್ನಡ ಭಾಷೆ ವೈವಿಧ್ಯವಾಗಿತ್ತು ಎಂಬುದನ್ನು ದಾಖಲಿಸುತ್ತದೆ. ಪ್ರತಿ 20 ಕಿ.ಮೀ ಕನ್ನಡ ಭಾಷೆಶೈಲಿ ಬದಲಾಗುತ್ತದೆ ಎಂಬುದು ಆಧುನಿಕ ಸಂಶೋಧನೆ ಆಗಿದ್ದರೂ ಮೂಲದಲ್ಲೇ ಇದನ್ನು ಕವಿರಾಜ ಮಾರ್ಗ ದಾಖಲಿಸಿದೆ’ ಎಂದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.