ಕಲಬುರಗಿ: ನಗರದ ಗುಲಬರ್ಗಾ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ(ಜಿಮ್ಸ್)ಯಲ್ಲಿ ಒಂದು ದಿನದಲ್ಲಿ ವರದಿ ಸಿಗುವಂಥ ಎಎಫ್‌ಡಿ ಕಫ ಪರೀಕ್ಷೆಯನ್ನು ಸ್ಥಗಿತಗೊಳಿಸಲಾಗಿದ್ದು, ಕೆಮ್ಮು, ದಮ್ಮು, ಉಸಿರಾಟದ ತೊಂದರೆ ಇರುವ ರೋಗಿಗಳು ಪರದಾಡುವಂತಾಗಿದೆ. ಕ್ಷಯ(ಟಿಬಿ) ರೋಗಿಗಳಿಗೆ ನೀಡುವ 4–ಎಫ್‌ಡಿಸಿ ಮಾತ್ರೆಗಳ ಅಭಾವ ಕೂಡ ಆಗಿದೆ ಎಂದು ಆಸ್ಪತ್ರೆಗೆ ಬಂದಿದ್ದ ರೋಗಿಗಳು ದೂರಿದರು.
ಎಎಫ್‌ಡಿ ಬದಲಿಗೆ ಸಿಬಿನ್ಯಾಟ್ ಮೂಲಕ ಪರೀಕ್ಷೆ ಮಾಡಿದರೆ ನಿಖರವಾಗಿ ವರದಿ ಬರುತ್ತದೆ ಎಂದು ಜಿಲ್ಲಾ ಕ್ಷಯರೋಗ ನಿರ್ಮೂಲನಾ ಕಚೇರಿಯ ಅಧಿಕಾರಿಗಳು ಮತ್ತು ವೈದ್ಯರು ಹೇಳುತ್ತಾರೆ. ಆದರೆ, ‘ಸಿಬಿನ್ಯಾಟ್ ಲ್ಯಾಬ್‌ನಲ್ಲಿ ಕಫ ಪರೀಕ್ಷೆ ಮಾಡಿಸಿದರೆ ವರದಿ ಬರಲು ಸುಮಾರು 7 ದಿನಗಳವರೆಗೆ ಕಾಯಬೇಕು. ಅಲ್ಲಿಯವರೆಗೆ ನಮ್ಮ ಗತಿ ಏನಾಗಬೇಕು?’ ಎಂದು ರೋಗಿಗಳು ಅಸಮಾಧಾನ ವ್ಯಕ್ತಪಡಿಸಿದರು.
ರೋಗಿಗಳಿಗೆ ತಕ್ಷಣ ಚಿಕಿತ್ಸೆ ಆರಂಭಿಸಲು ಎಎಫ್‌ಡಿ ಕಫ ಪರೀಕ್ಷೆಯೂ ಪ್ರಮುಖ ಪಾತ್ರ ವಹಿಸುತ್ತದೆ ಎಂಬುದನ್ನು ಅಲ್ಲಗಳೆಯುವಂತಿಲ್ಲ. ಈ ಪರೀಕ್ಷೆ ಮಾಡುತ್ತಿದ್ದ ಟಿಬಿ ವಿಭಾಗದ ತಂತ್ರಜ್ಞರೊಬ್ಬರು ಸುಮಾರು 6 ತಿಂಗಳ ಹಿಂದೆಯೇ ನಿವೃತ್ತರಾಗಿದ್ದಾರೆ ಎಂದು ಹೇಳಲಾಗುತ್ತಿದೆ. ಇದೇ ಪರೀಕ್ಷೆಯನ್ನು ಸೂಕ್ಷ್ಮ ಜೀವಶಾಸ್ತ್ರ ವಿಭಾಗದಲ್ಲಿ ಮಾಡಲಾಗುತ್ತಿತ್ತು. ಅದರ ಸ್ಥಗಿತಕ್ಕೆ ಕಾರಣ ಏನೆಂಬುದು ಅಲ್ಲಿಯ ತಂತ್ರಜ್ಞರು, ವೈದ್ಯರು ಮತ್ತು ಸಂಬಂಧಪಟ್ಟ ಇಲಾಖೆಯಿಂದ ತಿಳಿದುಬರಲಿಲ್ಲ.
ಸಿಬಿನ್ಯಾಟ್‌ನಲ್ಲಿ ಒಟ್ಟು 4 ಮಾಡೆಲ್‌ಗಳಿದ್ದು, ಒಂದು ಬಾರಿಗೆ 4 ಸ್ಯಾಂಪಲ್‌ಗಳ ಪರೀಕ್ಷೆ ಕೈಗೊಳ್ಳಲಾಗುತ್ತಿದೆ. ಒಂದು ಕಫದ ಮಾದರಿ ಪರೀಕ್ಷೆಗೆ 2 ಗಂಟೆ ಸಮಯ ತೆಗೆದುಕೊಳ್ಳುತ್ತದೆ. ಪ್ರತಿದಿನ 16–20 ಮಾದರಿಗಳ ಪರೀಕ್ಷೆ ಮಾಡಲಾಗುತ್ತಿದೆ ಎಂದು ಜಿಲ್ಲಾ ಶಸ್ತ್ರಚಿಕಿತ್ಸಕರು ತಿಳಿಸಿದರು. ಹೆಚ್ಚಿನ ಪರೀಕ್ಷೆಗೆ ಇಲ್ಲಿ ಇನ್ನೊಬ್ಬ ತಂತ್ರಜ್ಞರ ಅವಶ್ಯಕತೆ ಇದೆ ಎಂದೂ ಹೇಳಿದರು.
ಕ್ಷಯರೋಗಿಗಳಿಗೆ ತಿಳಿವಳಿಕೆ ನೀಡಿ, ಔಷಧ ವಿತರಿಸುವ ಹೆಲ್ತ್ ವಿಜಿಟರ್ ಹೆರಿಗೆ ರಜೆ ಮೇಲೆ ಹೋಗಿದ್ದಾರೆ. ಈ ಕಾರಣ ಕೆಬಿಎನ್ ಮತ್ತು ಬಸವೇಶ್ವರ ಆಸ್ಪತ್ರೆಗಳಿಂದ ಇಬ್ಬರು ಹೆಲ್ತ್ ವಿಜಿಟರ್‌ಗಳನ್ನು ವಾರದ ತಲಾ ಮೂರು ದಿನಗಳಂತೆ ಜಿಮ್ಸ್‌ಗೆ ನಿಯೋಜಿಸಲಾಗಿದೆ. ಕ್ಷಯರೋಗ ಮುಕ್ತ ಜಿಲ್ಲೆಯನ್ನಾಗಿಸಲು ಸಂಬಂಧಪಟ್ಟ ಅಧಿಕಾರಿಗಳು ಮೊದಲು ಹುದ್ದೆಗಳ ಭರ್ತಿ, ಪರೀಕ್ಷೆ ಮತ್ತು ಔಷಧ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಬೇಕಿದೆ.
ನಿರಂತರ ಮಳೆ, ತಂಪಾದ ವಾತಾವರಣದಿಂದ ನಡುಗುತ್ತ ಜಿಮ್ಸ್‌ಗೆ ಬಂದ ರೋಗಿಗಳು ಆಸ್ಪತ್ರೆಯ ಅವ್ಯವಸ್ಥೆಯ ಬಗ್ಗೆ ಶಪಿಸಿದರು. ಹರಸಾಹಸ ಮಾಡಿ ಹೊರರೋಗಿಗಳ ಚೀಟಿ ಪಡೆದು ತಪಾಸಣೆ ಮಾಡಿಸಿಕೊಂಡ ನಂತರ ವೈದ್ಯರು ಸೂಚಿಸುವ ಪರೀಕ್ಷೆಗಳಿಗಾಗಿ ಅಲೆದಾಡಬೇಕು. ಪಾಸಿಟಿವ್ ಬಂದರೆ ಕ್ಷಯರೋಗದ ಮಾತ್ರೆಗಳಿಲ್ಲ. 4–ಎಫ್‌ಡಿಸಿ ಬದಲಿಗೆ 3–ಎಫ್‌ಡಿಸಿ ಜೊತೆಗೆ ಇನ್ನೊಂದು ಮಾತ್ರೆ ತೆಗೆದುಕೊಳ್ಳಲು ಸಲಹೆ ನೀಡಲಾಗುತ್ತಿದೆ ಎಂದು ಅನಕ್ಷರಸ್ಥ ರೋಗಿಗಳು ಗೊಂದಲಕ್ಕೆ ಒಳಗಾದರು.
ಇತ್ತ ಸಾಮಾನ್ಯ ತೊಂದರೆಗಳಿಗೆ ವೈದ್ಯರು ಬರೆಯುವ ಮಾತ್ರೆಗಳಲ್ಲಿ ಕೆಲವು ಸಿಗುವುದಿಲ್ಲ. ಹೊರಗಿನ ಮೆಡಿಕಲ್‌ಗಳಲ್ಲಿ ತಗೊಳ್ಳಿ ಎಂದು ಔಷಧಗಳ ಅರ್ಧ ಪಟ್ಟಿ ಕಟ್ ಮಾಡಿ ಕೊಡಲಾಗುತ್ತಿದೆ ಎಂದು ರೋಗಿಗಳು ದೂರಿದರು.
‘ಕ್ಷಯರೋಗಿಗಳು ಒಂದೂ ದಿನ ತಪ್ಪಿಸದೇ ನಿರಂತರವಾಗಿ ಮಾತ್ರೆ ತೆಗೆದುಕೊಳ್ಳಬೇಕು. ಆದರೆ, ಸದ್ಯಕ್ಕೆ 4–5 ಮಾತ್ರೆ ತೆಗೆದುಕೊಂಡು ಹೋಗಿ. ಮತ್ತೆ ಬನ್ನಿ ಕೊಡುತ್ತೇವೆ ಎಂದು ಹೇಳಿಕಳಿಸಿದ್ದಾರೆ’ ಎಂದು ತಾಲ್ಲೂಕು ಕೇಂದ್ರವೊಂದರ ರೋಗಿಯ ಸಂಬಂಧಿ ‘ಪ್ರಜಾವಾಣಿ’ಗೆ ತಿಳಿಸಿದರು.
‘ಆಗಸ್ಟ್ 27ರಂದು ಕಫ ಕೊಟ್ಟಿದ್ದೇನೆ. ಸೆ.2ಕ್ಕೆ ವರದಿ ಬಂದಿದೆ. ವೈದ್ಯರು ನೆಗೆಟಿವ್ ಇದೆ ಎಂದು ಮೂರು ಔಷಧ ಬರೆದರು. ಜಿಮ್ಸ್‌ನಲ್ಲಿ ಎರಡು ಸಿಕ್ಕರೆ, ಉಳಿದ ಒಂದನ್ನು ಹೊರಗಿನ ಮೆಡಿಕಲ್‌ನಲ್ಲಿ ಖರೀದಿಸಿದ್ದೇನೆ’ ಎಂದು ನಗರದ ನಿವಾಸಿಯೊಬ್ಬರು ಅಸಮಾಧಾನ ವ್ಯಕ್ತಪಡಿಸಿದರು. ‘ಪಲ್ಮೊಕ್ಲೀಯರ್’ ಮಾತ್ರೆಯೂ ಜಿಮ್ಸ್‌ನಲ್ಲಿಲ್ಲ’ ಎಂದು ಮತ್ತೊಬ್ಬರು ದೂರಿದರು. ಜೊತೆಗೆ ಗೊಣಗುತ್ತಲೇ ಜಿಮ್ಸ್ ಆವರಣದಲ್ಲಿನ ಜನೌಷಧ ಕೇಂದ್ರ ಮತ್ತು ಖಾಸಗಿ ಮೆಡಿಕಲ್‌ಗಳತ್ತ ಹೆಜ್ಜೆ ಹಾಕಿದರು.
ಸಿಬಿನ್ಯಾಟ್‌ನ 4 ಮಾಡೆಲ್‌ಗಳಲ್ಲಿ 2 ಸ್ಥಗಿತಗೊಂಡಿದ್ದವು. ಈಗ ಸರಿಯಾಗಿದ್ದು ನಿರಂತರವಾಗಿ ಪರೀಕ್ಷೆ ನಡೆಸಲಾಗುತ್ತಿದೆ. ದಿನದ 24 ಗಂಟೆ ಪರೀಕ್ಷೆ ನಡೆಸಲು ಇನ್ನೊಬ್ಬ ತಂತ್ರಜ್ಞರ ಅಗತ್ಯವಿದೆ.ಡಾ.ಓಂಪ್ರಕಾಶ ಅಂಬೂರೆ, ಜಿಲ್ಲಾ ಶಸ್ತ್ರಚಿಕಿತ್ಸಕ
ಎಎಫ್‌ಡಿ ಕಫ ಪರೀಕ್ಷೆಗಿಂತ ಸಿಬಿನ್ಯಾಟ್ ಪರೀಕ್ಷೆ ನಿಖರವಾಗಿರುತ್ತದೆ. ವೈದ್ಯರು ಎಕ್ಸ್‌ರೇ ವರದಿ ಆಧರಿಸಿಯೂ ರೋಗಿಗಳಿಗೆ ಚಿಕಿತ್ಸೆ ನೀಡುತ್ತಾರೆ. ಔಷಧ ಕೊರತೆ ಇಲ್ಲ.ಡಾ.ಚಂದ್ರಕಾಂತ ನರಬೋಳಿ, ಜಿಲ್ಲಾ ಕ್ಷಯರೋಗ ನಿರ್ಮೂಲನಾ ಅಧಿಕಾರಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.