ಸೋಮವಾರ, ಜನವರಿ 18, 2021
22 °C
ಪೊಲೀಸ್‌ ನೇಮಕಾತಿ: ಅರ್ಜಿ ಸಲ್ಲಿಸಿದ 13,996 ಪೈಕಿ 7,796 ಮಂದಿ ಗೈರು

ಪರೀಕ್ಷೆಗೆ ಅರ್ಧದಷ್ಟು ಮಾತ್ರ ಹಾಜರ್‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕಲಬುರ್ಗಿ: ಜಿಲ್ಲೆಯಲ್ಲಿ ಭಾನುವಾರ ನಡೆದ ವಿಶೇಷ ಮೀಸಲು ಪೊಲೀಸ್ ಕಾನ್‌ಸ್ಟೆಬಲ್ (ಕೆಎಸ್ಆರ್‌ಪಿ, ಐಆರ್‌ಬಿ)‍ ಪರೀಕ್ಷೆಗೆ ಅರ್ಧದಷ್ಟು ಅಭ್ಯರ್ಥಿಗಳು ಗೈರಾದರು. ಅರ್ಜಿ ಹಾಕಿದ್ದ 13,996 ಪೈಕಿ 7,796 ಅಭ್ಯರ್ಥಿಗಳು ಮಾತ್ರ ಹಾಜರಾದರು. ಉಳಿದ 6,200 ಮಂದಿ ಪರೀಕ್ಷೆಯಿಂದ ದೂರ ಉಳಿದರು.

ನಗರ ಪೊಲೀಸ್‌ ಕಮಿಷನರೇಟ್‌ ವ್ಯಾಪ್ತಿಯಲ್ಲಿ 14 ಹಾಗೂ ಜಿಲ್ಲಾ ಪೊಲೀಸ್‌ ಇಲಾಖೆಯಿಂದ 13 ಸೇರಿ ಜಿಲ್ಲೆಯಲ್ಲಿ 27 ಪರೀಕ್ಷಾ ಕೇಂದ್ರಗಳನ್ನು ತೆರೆಯಲಾಗಿತ್ತು. ಬೆಳಿಗ್ಗೆ 11ರಿಂದ ಮಧ್ಯಾಹ್ನ 12.30ರವರೆಗೆ ನಡೆದವು.

ಜಿಲ್ಲೆಯ ವಿವಿಧೆಡೆ ತೆರೆದ 13 ಕೇಂದ್ರಗಳಲ್ಲಿ ಅರ್ಜಿ ಹಾಕಿದ್ದ 4,996 ಜನರ ಪೈಕಿ 2,796 ಅಭ್ಯರ್ಥಿಗಳು ಮಾತ್ರ ಹಾಜರಾದರು. ಉಳಿದ 2,200 ಮಂದಿ ಪರೀಕ್ಷೆಯಿಂದ ದೂರ ಉಳಿದರು. ಪರೀಕ್ಷೆಯಲ್ಲಿ ಎಲ್ಲಿಯೂ ಅಕ್ರಮ ನಡೆದ ಬಗ್ಗೆ ವರದಿಯಾಗಿಲ್ಲ ಎಂದು ಹೆಚ್ಚುವರಿ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಪ್ರಸನ್ನ ದೇಸಾಯಿ ಮಾಹಿತಿ ನೀಡಿದರು.

ಕಲಬುರ್ಗಿ, ಬೀದರ್‌, ರಾಯಚೂರು, ಯಾದಗಿರಿ, ಕೊಪ್ಪಳ, ವಿಜಯಪುರ ಜಿಲ್ಲೆಗಳೂ ಸೇರಿದಂತೆ ಬೇರೆ ಬೇರೆ ಜಿಲ್ಲೆಗಳ ಅಭ್ಯರ್ಥಿಗಳು ಕೂಡ ಇಲ್ಲಿಯೇ ಪರೀಕ್ಷೆ ತೆಗೆದುಕೊಂಡಿದ್ದರು.

ಪರೀಕ್ಷೆ ಮುಗಿದ ಬಳಿಕ ಮಧ್ಯಾಹ್ನ 1ರಿಂದ 4ರವರೆಗೆ ಅಭ್ಯರ್ಥಿಗಳು ತಂಡೋಪತಂಡವಾಗಿ ಬಸ್‌ ನಿಲ್ದಾಣದತ್ತ ಸಾಗಿದರು. ಬೈಕ್‌, ಆಟೊ, ಜೀಪ್‌ ಮುಂತಾದ ವಾಹನಗಳಲ್ಲಿ ಬಂದವರು, ಕಾಲ್ನಡಿಗೆಯಲ್ಲಿ ಹೊರಟವರೆಲ್ಲ ಬಸ್‌ ನಿಲ್ದಾಣದಲ್ಲಿ ಸೇರಿದ್ದರಿಂದ ಜನಸಂದಣಿ ಕಂಡುಬಂತು.

ಕೊಠಡಿಗಳಲ್ಲಿ ವ್ಯವಸ್ಥೆ: ‌ಪರೀಕ್ಷೆಯಲ್ಲಿ ಅಕ್ರಮ ತಡೆಯುವ ಉದ್ದೇಶದಿಂದ ಈ ಬಾರಿ ಬಿಗಿ ಕ್ರಮ ಕೈಗೊಳ್ಳಲಾಗಿತ್ತು. ಪ್ರತಿ ಪರೀಕ್ಷಾ ಕೊಠಡಿಗೂ ಸಿ.ಸಿ.ಟಿ.ವಿ ಕ್ಯಾಮೆರಾ ಕಣ್ಗಾವಲು ಕಡ್ಡಾಯ ಮಾಡಲಾಗಿತ್ತು. ಇದರ ವೀಕ್ಷಣೆಗೆ ಪ್ರತ್ಯೇಕ ಸಿಬ್ಬಂದಿ ಕೂಡ ನೇಮಿಸಲಾಗಿತ್ತು.

ಕೇಂದ್ರಗಳ ಗೇಟ್‌ ಬಳಿಯೇ ಎಲ್ಲರೂ ಮಾಸ್ಕ್‌ ಧರಿಸುವಂತೆ ನೋಡಿಕೊಳ್ಳಲಾಯಿತು. ಮಾಸ್ಕ್‌ ಹಾಕದವರಿಗೆ ಇಲಾಖೆಯಿಂದಲೇ ನೀಡಲಾಯಿತು. ಪ್ರತಿಯೊಬ್ಬರಿಗೂ ಸ್ಯಾನಿಟೈಸರ್‌ ನೀಡಿ, ಥರ್ಮಲ್‌ ಗನ್‌ನಿಂದ ಅವರ ದೇಹದ ಉಷ್ಣಾಂಶ ತಪಾಸಣೆ ಮಾಡಲಾಯಿತು.

ಹೆಚ್ಚಿನ ಉಷ್ಣಾಂಶ ಕಂಡುಬಂದವರಿಗಾಗಿ ಎರಡು ಪ್ರತ್ಯೇಕ ಪರೀಕ್ಷಾ ಕೊಠಡಿಗಳನ್ನು ಸಿದ್ಧಗೊಳಿಸಲಾಗಿತ್ತು. ಆದರೆ, ಯಾರಲ್ಲೂ ಜ್ವರ, ಕೆಮ್ಮು ಅಥವಾ ಇತರ ರೀತಿಯ ಲಕ್ಷಣಗಳು ಕಂಡುಬರಲಿಲ್ಲ.

ಕೊಠಡಿಗಳಲ್ಲಿ ತಲಾ 20 ಅಭ್ಯರ್ಥಿಗಳನ್ನು ಮಾತ್ರ (ಒಂದು ಡೆಸ್ಕ್‌ನಲ್ಲಿ ಒಬ್ಬರು) ಬಿಡಲಾಯಿತು. ಇದರಿಂದ ಒಬ್ಬರಿಂದ ಒಬ್ಬರಿಗೆ ಕನಿಷ್ಠ ದೈಹಿಕ ಅಂತರ ಕಾಯ್ದುಕೊಳ್ಳಲು ಸಾಧ್ಯವಾಯಿತು.

ಪ್ರತಿ ಪರೀಕ್ಷಾ ಕೇಂದ್ರಕ್ಕೆ ಒಬ್ಬ ಇನ್‌ಸ್ಪೆಕ್ಟರ್‌, ಪ್ರತಿ ಮೂರು ಸೆಂಟರ್‌ಗಳಿಗೆ ಒಬ್ಬ ಡಿಎಸ್‌ಪಿ ಹಾಗೂ ಇವರಿಗೆ ತಲಾ ನಾಲ್ವರು ಪೊಲೀಸ್‌ ಸಿಬ್ಬಂದಿ ನಿಯೋಜಿಸಲಾಗಿತ್ತು.‌ 20 ಅಭ್ಯರ್ಥಿಗಳಿಗೆ ಒಬ್ಬ ಪರೀಕ್ಷಾ ಮೇಲ್ವಿಚಾ ರಕರನ್ನು ನೇಮಕ ಮಾಡಲಾಗಿತ್ತು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು