ಕಲಬುರಗಿ: ಎರಡು ಪ್ರತ್ಯೇಕ ಪ್ರಕರಣಗಳಲ್ಲಿ ಕರ್ತವ್ಯಲೋಪದ ಆಪಾದನೆಯಡಿ ಚಿತ್ತಾಪುರ ತಾಲ್ಲೂಕಿನಲ್ಲಿ ಮುಖ್ಯಶಿಕ್ಷಕ ಮತ್ತು ಸಹಶಿಕ್ಷಕರನ್ನು ಅಮಾನತು ಮಾಡಲಾಗಿದೆ.
ಬಾಡಿಗೆ ಶಿಕ್ಷಕಿ ನೇಮಿಸಿಕೊಂಡು ಮಕ್ಕಳಿಗೆ ಪಾಠ ಮಾಡಿಸಿದ ಪ್ರಕರಣ ಸಂಬಂಧ ಚಿತ್ತಾಪುರ ತಾಲ್ಲೂಕಿನ ಭಾಲಿನಾಯಕ ತಾಂಡಾದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಸಹಶಿಕ್ಷಕ ಮಹೇಂದ್ರ ಕುಮಾರ ಅವರನ್ನು ಅಮಾನತು ಮಾಡಿ ಕ್ಷೇತ್ರ ಶಿಕ್ಷಣಾಧಿಕಾರಿ ಸಿದ್ಧವೀರಯ್ಯ ರುದನೂರು ಆದೇಶಿಸಿದ್ದಾರೆ.
‘ಬಾಡಿಗೆ ಶಿಕ್ಷಕಿ ಮೂಲಕ ಪಾಠ’ ವರದಿಯು ‘ಪ್ರಜಾವಾಣಿ’ಯ ಜು.9ರ ಸಂಚಿಕೆಯಲ್ಲಿ ಪ್ರಕಟವಾಗಿತ್ತು. ಈ ವರದಿ ಆಧರಿಸಿ ನೀಡಿದ ನೋಟಿಸ್‌ಗೆ ಶಿಕ್ಷಣ ಇಲಾಖೆಗೆ ಸ್ಪಷ್ಟವಾದ ಸ್ಪಷ್ಟೀಕರಣ ನೀಡದ ಕಾರಣ ಮಹೇಂದ್ರ ಅವರನ್ನು ಅಮಾನತು ಮಾಡಲಾಗಿದೆ.
ಶಾಲಾ ಮಕ್ಕಳಿಗೆ ಬಿಸಿಯೂಟ ನೀಡದೆ ನಿರ್ಲಕ್ಷ್ಯ ವಹಿಸಿದ ಮತ್ತೊಂದು ಪ್ರಕರಣ ಸಂಬಂಧ ಚಿತ್ತಾಪುರ ತಾಲ್ಲೂಕಿನ ಸಕ್ಕುನಾಯಕ ತಾಂಡಾದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಮುಖ್ಯಶಿಕ್ಷಕ ಗುರುನಾಥ ಚಿತ್ತಗಿ ಅವರನ್ನು ಅಮಾನತು ಮಾಡಿ, ಡಿಡಿಪಿಐ ಸಕ್ರೆಪ್ಪಗೌಡ ಬಿರಾದಾರ ಆದೇಶಿಸಿದ್ದಾರೆ.
‘ತಾಂಡಾ ಶಾಲೆಯ ಮಕ್ಕಳಿಗಿಲ್ಲ ಬಿಸಿಯೂಟ’ ವರದಿಯು ‘ಪ್ರಜಾವಾಣಿ’ಯ ಜು.4ರ ಸಂಚಿಕೆಯಲ್ಲಿ ಪ್ರಕಟವಾಗಿತ್ತು. ಶಾಲೆ ಆರಂಭವಾಗಿ 35 ದಿನ ಕಳೆದಿದ್ದರೂ ಬಿಸಿಯೂಟ ಪೂರೈಸದ ಕಾರಣ ಅವರನ್ನು ಅಮಾನತು ಮಾಡಲಾಗಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.