ಸೋಮವಾರ, ಅಕ್ಟೋಬರ್ 21, 2019
24 °C

‘ಉದ್ಯೋಗ ಖಾತ್ರಿಗೆ ಹಣ ಕೊಡದ ಕೇಂದ್ರದ ವಿರುದ್ಧ ಪ್ರಕರಣ’

Published:
Updated:
Prajavani

ಕಲಬುರ್ಗಿ: ‘ಉದ್ಯೋಗ ಖಾತ್ರಿ ಯೋಜನೆಗೆ ಕೇಂದ್ರ ಸರ್ಕಾರ ಎರಡು ವರ್ಷಗಳಿಂದ ಅನುದಾನ ನೀಡಿಲ್ಲ. ಈ ಯೋಜನೆಗೆ ಎಳ್ಳು–ನೀರು ಬಿಡುವ ಹುನ್ನಾರ ನಡೆಸಿದೆ. ಕಾನೂನು ತಜ್ಞರ ಸಲಹೆ ಪಡೆದು ಕೇಂದ್ರದ ವಿರುದ್ಧ ಪ್ರಕರಣ ದಾಖಲಿಸಲು ನಿರ್ಧರಿಸಿದ್ದೇನೆ’ ಎಂದು ಶಾಸಕ ಪ್ರಿಯಾಂಕ್‌ ಖರ್ಗೆ ಹೇಳಿದರು.

‘ಉದ್ಯೋಗ ಖಾತ್ರಿಯು ಗ್ರಾಮೀಣ ಜನರ ಬದುಕಿಗೆ ಆಸರೆಯಾಗುವ ಕಾರ್ಯಕ್ರಮ. ಆದರೆ, ಎರಡು ವರ್ಷಗಳಿಂದ ರಾಜ್ಯಕ್ಕೆ ಬರಬೇಕಾದ ₹ 2,300 ಕೋಟಿ ಬಾಕಿ ಇದೆ. ಸದ್ಯಕ್ಕೆ ರಾಜ್ಯ ಸರ್ಕಾರದ ದುಡ್ಡಿನಲ್ಲೇ ಯೋಜನೆ ಮುಂದುವರಿದಿದೆ. ನಮ್ಮ ಹಣ ಬಳಸಿಕೊಂಡು ಅದಕ್ಕೆ ಪ್ರಧಾನಿ ಹೆಸರು ಹೇಳಿಕೊಂಡು ತಿರುಗುತ್ತಿದ್ದಾರೆ. ಬಡವರ ಹೊಟ್ಟೆ ಮೇಲೆ ಹೊಡೆಯುವ ಕೇಂದ್ರದ ಧೋರಣೆ ವಿರುದ್ಧ ಕಾನೂನಾತ್ಮಕ ಹೋರಾಟ ಮಾಡಲು ಅವಕಾಶವಿದೆ. ಆ ಹಕ್ಕನ್ನು ಬಳಸಿಕೊಳ್ಳುತ್ತೇನೆ’ ಎಂದರು. ‘ನೆರೆ ಹಾವಳಿಯಿಂದಾಗಿ ರಾಜ್ಯದ ಬಹುಪಾಲು ಭಾಗ ತತ್ತರಿಸಿಹೋಗಿದೆ. ಇದಾವುದೂ ತಮಗೆ ಸಂಬಂಧವೇ ಇಲ್ಲ ಎಂಬಂತೆ ನಮ್ಮ ಪ್ರಧಾನಿ ವರ್ತಿಸುತ್ತಿದ್ದಾರೆ. ಬಿಹಾರ, ಕೇರಳ ರಾಜ್ಯಗಳಿಗೆ ಮಿಡಿಯುವ ಇವರ ಮನಸ್ಸು ಕರ್ನಾಟಕದ ಮೇಲೇಕೆ ಮಲತಾಯಿ ಧೋರಣೆ ತಾಳುತ್ತಿದೆ’ ಎಂದೂ ಪ್ರಶ್ನಿಸಿದರು.

 

Post Comments (+)