ಬುಧವಾರ, 29 ನವೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೇಡಂನಲ್ಲಿ ಉದ್ಯೋಗ ಮೇಳ 13ರಂದು

ಸಚಿವ ಡಾ.ಶರಣಪ್ರಕಾಶ ಪಾಟೀಲ ಹೇಳಿಕೆ
Published 10 ಅಕ್ಟೋಬರ್ 2023, 4:26 IST
Last Updated 10 ಅಕ್ಟೋಬರ್ 2023, 4:26 IST
ಅಕ್ಷರ ಗಾತ್ರ

ಸೇಡಂ: ‘ಪಟ್ಟಣದ ತಾಲ್ಲೂಕು ಆಡಳಿತ ಸೌಧದಲ್ಲಿ ಅ. 13ರಂದು ಬೆಳಿಗ್ಗೆ 10ಗಂಟೆಗೆ ಉದ್ಯಮ ಶೀಲತೆ ಮತ್ತು ಕೌಶಲ್ಯಾಭಿವೃದ್ಧಿ ಇಲಾಖೆ ವತಿಯಿಂದ ಬೃಹತ್ ಉದ್ಯೋಗ ಮೇಳ ಆಯೋಜಿಸಲಾಗಿದೆ' ಎಂದು ಸಚಿವ ಡಾ.ಶರಣಪ್ರಕಾಶ ಪಾಟೀಲ ಹೇಳಿದರು.

ಪಟ್ಟಣದ ತಾಲ್ಲೂಕು ಪಂಚಾಯಿತಿ ಕಚೇರಿಯಲ್ಲಿ ಸೋಮವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಉದ್ಯಮಶೀಲತಾ ಮತ್ತು ಕೌಶಲ್ಯಭಿವೃದ್ಧಿ ಇಲಾಖೆ ವತಿಯಿಂದ ಪ್ರಾಯೋಗಿಕವಾಗಿ ಸೇಡಂ ವಿಧಾನಸಭಾ ಕ್ಷೇತ್ರದ ನಿರುದ್ಯೋಗ ಯುವಕ-ಯುವತಿಯರಿಗೆ ಅನುಕೂಲವಾಗಲೆಂದು ಬೃಹತ್ ಉದ್ಯೋಗ ಮೇಳ ಆಯೋಜಿಸಲಾಗಿದೆ. ಬೇರೆ ಕಡೆಯವರೂ ಪಾಲ್ಗೊಳ್ಳಬಹುದು. ಈ‌ ಭಾಗದಲ್ಲಿ ನಿರುದ್ಯೋಗ ಸಮಸ್ಯೆ ಹೆಚ್ಚು ಇರುವುದರಿಂದ ಪ್ರಥಮ ಬಾರಿಗೆ ಸರ್ಕಾರದ ವತಿಯಿಂದಲೇ ಕಾರ್ಯಕ್ರಮ ಆಯೋಜಿಸಲಾಗುತ್ತಿದೆ. ಸೇಡಂನಲ್ಲಿ ಕಾರ್ಯಕ್ರಮ ಯಶಸ್ವಿಯಾದ ನಂತರ ವಿಸ್ತರಣೆ ಮಾಡಲಾಗುತ್ತದೆ’ ಎಂದರು.

‘ಉದ್ಯೋಗ ಮೇಳದಲ್ಲಿ ಸುಮಾರು 76ಕ್ಕೂ ಅಧಿಕ ಕಂಪನಿಗಳು ಭಾಗವಹಿಸಲಿವೆ. ಸಂದರ್ಶನ ನಡೆಸಿ ಸುಮಾರು 19ಸಾವಿರ ಖಾಲಿ ಹುದ್ದೆಗಳಿಗೆ ನೇಮಕ ಮಾಡಿಕೊಳ್ಳಲಿದ್ದಾರೆ. 10ನೇ ತರಗತಿಯಿಂದ ಯಾವುದೇ ಪದವಿ ಪಡೆದರೂ ಕೂಡ ಭಾಗವಹಿಸಬಹುದಾಗಿದೆ' ಎಂದರು.

ಪೂರ್ವ ತರಬೇತಿ: ಪಟ್ಟಣದ ಸುವರ್ಣ ಕರ್ನಾಟಕ ಭವನದಲ್ಲಿ ಅ.10 ಮತ್ತು 11 ರಂದು ಬೆಳಿಗ್ಗೆ 10 ಗಂಟೆಗೆ ಉದ್ಯಮಶೀಲತಾ ಮತ್ತು ಕೌಶಲ್ಯಾಭಿವೃದ್ಧಿ ಇಲಾಖೆ ವತಿಯಿಂದ ತರಬೇತಿ ನಡೆಯಲಿದೆ. ಉದ್ಯೋಗ ಮೇಳದಲ್ಲಿ ಪಾಲ್ಗೊಳ್ಳಬಯಸುವ ಅಭ್ಯರ್ಥಿಗಳು https://skill connect.koushalkar.com/candidatereg ನೋಂದಣಿ ಮಾಡಬಹುದಾಗಿದೆ. ಅಲ್ಲದೆ ನೇರವಾಗಿ ಆಗಮಿಸಿಯೂ ನೋಂದಣಿ ಮಾಡಬಹುದಾಗಿದೆ.

ಈಗಾಗಲೇ 2510 ಅಭ್ಯರ್ಥಿಗಳು ನೋಂದಾಯಿಸಿದ್ದಾರೆ. ಸುಮಾರು 10 ಸಾವಿರಕ್ಕೂ ಅಧಿಕ ಅಭ್ಯರ್ಥಿಗಳು ಪಾಲ್ಗೊಳ್ಳಲಿದ್ದಾರೆ. ಹೆಚ್ಚಿನ ಮಾಹಿತಿಗೆ 9606492216, 8904122167 ಸಂಪರ್ಕಿಸಬಹುದಾಗಿದೆ' ಎಂದರು.
ಸುದ್ದಿಗೋಷ್ಠಿಯಲ್ಲಿ ಉಪವಿಭಾಗಾಧಿಕಾರಿ ಆಶಪ್ಪ ಪೂಜಾರಿ, ತಹಶೀಲ್ದಾರ್ ಶ್ರೀಯಾಂಕ ಧನಶ್ರೀ, ಕೌಶಲಾಭಿವೃದ್ಧಿ ಇಲಾಖೆ ವ್ಯವಸ್ಥಾಪಕ ಅಶ್ವಿನಗೌಡ, ಮುರುಳಿಧರ ಇದ್ದರು.

ಉದ್ಯೋಗ ಮೇಳ ನಡೆಯಲಿರುವ ತಾಲ್ಲೂಕು ಕ್ರೀಡಾಂಗಣ, ತಾಲ್ಲೂಕು ಆಡಳಿತ ಸೌಧದ ಸ್ಥಳವನ್ನು ಸಚಿವ ಡಾ.ಶರಣಪ್ರಕಾಶ ಪಾಟೀಲ ಪರಿಶೀಲಿಸಿದರು. ಆಗಮಿಸುವ ಅಭ್ಯರ್ಥಿಗಳಿಗೆ ಯಾವುದೇ ರೀತಿಯ ತೊಂದರೆಯಾಗದಂತೆ ನೋಡಿಕೊಳ್ಳಬೇಕು. ಕಾರ್ಯಕ್ರಮದ ಯಶಸ್ಸಿಗೆ ಎಲ್ಲರೂ ಶ್ರಮಿಸಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT