ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬ್ಲ್ಯಾಕ್‌ ಫಂಗಸ್‌: ಖುದ್ದಾಗಿ ಚುಚ್ಚುಮದ್ದು ರವಾನಿಸಿದ ಸಂಸದ ಡಾ.ಉಮೇಶ ಜಾಧವ

Last Updated 20 ಮೇ 2021, 6:27 IST
ಅಕ್ಷರ ಗಾತ್ರ

ಕಲಬುರ್ಗಿ: ಜಿಲ್ಲೆಯಲ್ಲಿ 14 ಮಂದಿಗೆ ಕಪ್ಪು ಶಿಲೀಂಧ್ರ (ಮ್ಯೂಕೋಮೈರೋಸಿಸ್) ಸೋಂಕು ಕಾಣಿಸಿಕೊಂಡಿದ್ದು, ಅವರಿಗೆ ತುರ್ತು ಅಗತ್ಯವಿದ್ದ ಚುಚ್ಚುಮದ್ದನ್ನು ಸ್ವತಃ ಸಂಸದ ಡಾ.ಉಮೇಶ ಜಾಧವ ಅವರೇ ಬೆಂಗಳೂರಿನಿಂದ ರವಾನಿಸುವಲ್ಲಿ ಸಫಲವಾಗಿದ್ದಾರೆ.

ನಗರದಲ್ಲಿ ಬುಧವಾರ ಸರ್ಕಾರಿ ಹಾಗೂ ಖಾಸಗಿ ವೈದ್ಯರ ಸಭೆ ನಡೆಸಿದ ಸಂಸದರು, ಜಿಲ್ಲೆಯಲ್ಲಿ ಒಟ್ಟು 14 ಮಂದಿಗೆ ಬ್ಲ್ಯಾಕ್‌ ಫಂಗಸ್‌ ಆಗಿದ್ದನ್ನು ಮನಗಂಡರು. ರಾತ್ರಿಯೇ ಬೆಂಗಳೂರಿಗೆ ತರಳಿ ಇದರ ಉಪಶಮನಕ್ಕೆ ಅಗತ್ಯವಾದ ಎಂಫೊಟೆರೆಸಿನ್ ಇಂಜೆಕ್ಷನ್‌ (Amphoterecin) ಅನ್ನು ಖುದ್ದಾಗಿ ತರುವ ಜವಾಬ್ದಾರಿ ಹೊತ್ತರು.

ಬೆಂಗಳೂರಿನ ಡ್ರಗ್‌ ಕಂಟ್ರೋಲ್‌ ಹೆಡ್‌ ಕ್ವಾರ್ಟರ್ಸ್‌ನಲ್ಲಿ ಅದರ ನಿರ್ವಹಣೆ ಹೊತ್ತ ಅವಿನಾಶ ಮೆನನ್‌ ಅವರನ್ನು ಭೇಟಿ ಮಾಡಿದರು. ಆದರೆ, ರಾಜ್ಯದಲ್ಲಿ ಎಂಫೊಟೆರೆಸಿನ್‌ ಚುಚ್ಚುಮದ್ದು ಕೊರತೆ ಇರುವ ಕಾರಣ ಕಲಬುರ್ಗಿಗೆ ತಲುಪಿಸಲು ಇನ್ನೂ ನಾಲ್ಕು ದಿನ ಬೇಕಾಗುತ್ತದೆ ಎಂದು ಮೆನನ್‌ ಪ್ರತಿಕ್ರಿಯಿಸಿದರು.

ನಂತರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಆಯುಕ್ತ ತ್ರಿಲೋಕಚಂದ್ರ ಅವರೊಂದಿಗೆ ಮಾತನಾಡಿದ ಸಂಸದರು, ಜಿಲ್ಲೆಯ ರೋಗಿಗಳ ಪರಿಸ್ಥಿತಿ ಮನವರಿಕೆ ಮಾಡಿದರು. ನಂತರ 14 ರೋಗಿಗಳಿಗೆ ಬೇಕಾದ 28 ಬಾಟಲ್‌ ಚುಚ್ಚುಮದ್ದು ಪಡೆದರು.

‘‌ಈ ಚುಚ್ಚುಮದ್ದು ಪಡೆಯಲು ಔಷಧ ಇಲಾಖೆಯು ಕಟ್ಟುನಿಟ್ಟಿನ ವಿಧಾನವನ್ನು ಅನುಸರಿಸತ್ತಿದೆ. ಅದನ್ನು ಅನುಸರಿಸಿಯೇ ಬೆಂಗಳೂರಿನಿಂದ ವಿಮಾನದ ಮೂಲಕ ಕಲಬುರ್ಗಿ ತಲುಪಿಸುತ್ತೇನೆ. ನನ್ನ ಆಪ್ತಕಾರ್ಯದರ್ಶಿ ಕಾಶಿನಾಥ ಬಿರಾದಾರ ಅವರು ಕಲಬುರ್ಗಿಗೆ ತಲುಪಿಸಲಿದ್ದಾರೆ’ ಎಂದು ಸಂಸದ ಜಾಧವ ತಿಳಿಸಿದ್ದಾರೆ.

‘ನಾನು ಕೂಡ ಒಬ್ಬ ವೈದ್ಯನಾಗಿದ್ದು, ಮ್ಯೂಕೋಮೈರೋಸಿಸ್‌ ಕಾಯಿಲೆಯ ಗಂಭೀರತೆ ಅರಿತಿದ್ದೇನೆ. ಅಧಿಕಾರಿಗಳು ಸರ್ಕಾರದ ನಿಯಮಗಳನ್ನು ಅನುಸರಿಸುತ್ತ ವಿಳಂಬ ಮಾಡಿದರೆ ರೋಗಿಗಳನ್ನು ಉಳಿಸಿಕೊಳ್ಳುವುದು ಕಷ್ಟವಾಗಲಿದೆ. ಕಾರಣ ನಾನೇ ಖುದ್ದಾಗಿ ಬಂದು ಚುಚ್ಚುಮದ್ದು ಪಡೆದಿದ್ದೇನೆ. ಜಿಲ್ಲೆಯ ಜನ ಯಾವುದಕ್ಕೂ ಭಯ ಪಡಬೇಕಿಲ್ಲ’ ಎಂದು ಅವರು ಹೇಳಿದ್ದಾರೆ.

ಏಪ್ರಿಲ್‌ನಲ್ಲಿ ರೆಮ್‌ಡಿಸಿವಿರ್‌ ಕೊರತೆ ತೀವ್ರವಾಗಿ ಕಾಡುತ್ತಿದ್ದ ಸಂದರ್ಭದಲ್ಲಿ ಕೂಡ, ಸಂಸದ ಡಾ.ಉಮೇಶ ಜಾಧವ ಅವರು ಸ್ವತಃ ಬೆಂಗಳೂರಿಗೆ ಹೋಗಿ ವಿಮಾನದ ಮೂಲಕ 250 ವೈಲ್‌ಗಳನ್ನು ತಂದಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT