ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಾಧವ ಮತ ಅಸಿಂಧುಗೊಳಿಸಲು ಆಯೋಗಕ್ಕೆ ದೂರು: ಶರಣಪ್ರಕಾಶ ಪಾಟೀಲ

Last Updated 11 ಡಿಸೆಂಬರ್ 2021, 15:33 IST
ಅಕ್ಷರ ಗಾತ್ರ

ಕಲಬುರಗಿ: ‘ಶುಕ್ರವಾರ ನಡೆದ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಸಂಸದ ಡಾ. ಉಮೇಶ ಜಾಧವ ಅವರು ಬಿಜೆ‍ಪಿ ಅಭ್ಯರ್ಥಿ ಬಿ.ಜಿ. ಪಾಟೀಲ ಅವರಿಗೆ ಮತದಾನ ಮಾಡಿದ್ದೇನೆ ಎಂದು ಬಹಿರಂಗವಾಗಿ ಫೇಸ್‌ಬುಕ್‌, ಟ್ವಿಟ್ಟರ್‌ನಲ್ಲಿ ಪ್ರಕಟಿಸಿದ್ದಾರೆ. ಆ ಮೂಲಕ ಗೋಪ್ಯ ಮತದಾನದ ನಿಯಮವನ್ನು ಉಲ್ಲಂಘಿಸಿದ್ದಾರೆ’ ಎಂದು ಕೆಪಿಸಿಸಿ ವಕ್ತಾರ ಡಾ. ಶರಣಪ್ರಕಾಶ ಪಾಟೀಲ ಆರೋಪಿಸಿದರು.

ನಗರದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಯಾರೇ ಆದರೂ ಯಾವ ಅಭ್ಯರ್ಥಿಗೆ ಮತ ಹಾಕಿದೆ ಎಂದು ಬಹಿರಂಗ‍ಪಡಿಸುವುದು ತಪ್ಪು. ಇದು ಚುನಾವಣೆಯ ಉದ್ದೇಶವನ್ನೇ ಬುಡಮೇಲು ಮಾಡಿದಂತಾಗುತ್ತದೆ. ಸಂಸದರಾಗಿ ಹೀಗೆ ಮಾಡಬಾರದು ಎಂಬ ಸಾಮಾನ್ಯ ಜ್ಞಾನವೂ ಇಲ್ಲವೇ’ ಎಂದು ಪ್ರಶ್ನಿಸಿದ ಅವರು, ‘ಮತ ಹಾಕಿದ್ದನ್ನು ಬಹಿರಂಗ ಮಾಡಿದ್ದಕ್ಕಾಗಿ ಚುನಾವಣಾ ಆಯೋಗಕ್ಕೆ ಕಾಂಗ್ರೆಸ್ ದೂರು ನೀಡಲಿದೆ’ ಎಂದು ತಿಳಿಸಿದರು.

‘ಜಾಧವ ಅವರು ಸಂಸತ್ ಸದಸ್ಯರಾಗಿ ಅಧಿಕಾರ ವಹಿಸಿಕೊಂಡು ಎರಡೂವರೆ ವರ್ಷಗಳಾಗುತ್ತಾ ಬಂದಿದ್ದು, ಖರ್ಗೆ ಅವರು ತಂದಿದ್ದ ಎಲ್ಲ ಯೋಜನೆಗಳನ್ನು ವಾಪಸ್‌ ಹೋಗುವಂತೆ ಮಾಡುತ್ತಿದ್ದಾರೆ. ಅವರದೇ ಸರ್ಕಾರ ಇದ್ದರೂ ಕಲಬುರಗಿಗೆ ರೈಲ್ವೆ ವಿಭಾಗವನ್ನು ಮಂಜೂರು ಮಾಡಿಸಲು ವಿಫಲರಾಗಿದ್ದಾರೆ. ಟೆಕ್ಸ್‌ಟೈಲ್ ಪಾರ್ಕ್, ನಿಮ್ಜ್ ಕೈಬಿಟ್ಟು ಹೋದ ಬಳಿಕ ಇದೀಗ ಎರಡನೇ ವರ್ತುಲ ರಸ್ತೆಯೂ ರದ್ದಾಗಿದೆ. ವಿರೋಧಪಕ್ಷಗಳು, ಜನರಿಂದ ಒತ್ತಡ ಹೆಚ್ಚಾದರೆ ಸಚಿವರಿಗೆ ಹೋಗಿ ಮನವಿ ಕೊಡುವ ಮೂಲಕ ಇವರೊಬ್ಬ ಮೆಮೊರಾಂಡಮ್ ಎಂ.ಪಿ.ಯಾಗಿದ್ದಾರೆ’ ಎಂದು ಶರಣಪ್ರಕಾಶ ವ್ಯಂಗ್ಯವಾಡಿದರು.

‘ಶುಕ್ರವಾರ ನಡೆದ ಸ್ಥಳೀಯ ಸಂಸ್ಥೆಗಳ ಕ್ಷೇತ್ರದ ವಿಧಾನಪರಿಷತ್ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಶಿವಾನಂದ ಪಾಟೀಲ ಮರತೂರ ಅವರು ಸುಮಾರು 400 ಮತಗಳ ಅಂತರದಿಂದ ಗೆಲುವು ಸಾಧಿಸುವುದು ನಿಶ್ಚಿತ. ಮತದಾರರು ಈ ಬಾರಿ ಬಿಜೆಪಿಯನ್ನು ತಿರಸ್ಕರಿಸುವ ವಿಶ್ವಾಸವಿದೆ’ ಎಂದರು.

ಸದಸ್ಯತ್ವ ಅಭಿಯಾನ: ಮುಂಬರುವ ವಿಧಾನಸಭೆ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಕಾಂಗ್ರೆಸ್ ಪಕ್ಷವು ಸದಸ್ಯತ್ವ ಅಭಿಯಾನವನ್ನು ಹಮ್ಮಿಕೊಂಡಿದ್ದು, ಶನಿವಾರ ರಾಜ್ಯದಾದ್ಯಂತ ಚಾಲನೆ ದೊರೆತಿದೆ. ಪಕ್ಷದ ರಾಜ್ಯ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲಾ, ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್, ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರು ಝೂಮ್ ಮೀಟ್ ಮೂಲಕ ರಾಜ್ಯದೆಲ್ಲೆಡೆ ನಡೆದ ಸದಸ್ಯತ್ವ ಅಭಿಯಾನವನ್ನು ವೀಕ್ಷಿಸಿದರು. ಪ್ರತಿ ವಿಧಾನಸಭಾ ಕ್ಷೇತ್ರದ ಐದು ಬ್ಲಾಕ್‌ಗಳಲ್ಲಿ ಸದಸ್ಯತ್ವ ಅಭಿಯಾನ ನಡೆಯುತ್ತಿದೆ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT