ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಲಬುರ್ಗಿ: ಅಘೋಷಿತ ಲಾಕ್‌ಡೌನ್‌ಗೆ ವ್ಯಾಪಕ ಆಕ್ರೋಶ

ಮಧ್ಯಾಹ್ನದ ವೇಳೆಗೆ ಎಲ್ಲ ಅಂಗಡಿಗಳನ್ನು ಬಲವಂತವಾಗಿ ಮುಚ್ಚಿಸಿದ ಪೊಲೀಸರು
Last Updated 23 ಏಪ್ರಿಲ್ 2021, 4:28 IST
ಅಕ್ಷರ ಗಾತ್ರ

ಕಲಬುರ್ಗಿ: ಸರ್ಕಾರದ ಮಾರ್ಗಸೂಚಿಯ ಅನ್ವಯ ರಾತ್ರಿ 9ರಿಂದ ಕೊರೊನಾ ಕರ್ಫ್ಯೂ ಇದ್ದರೂ ಪೊಲೀಸರು ಹಾಗೂ ಮಹಾನಗರ ಪಾಲಿಕೆ ಅಧಿಕಾರಿಗಳು ಏಕಾಏಕಿ ಗುರುವಾರ ಮಧ್ಯಾಹ್ನವೇ ಇಲ್ಲಿನ ಸೂಪರ್ ಮಾರ್ಕೆಟ್, ಜಗತ್, ಎಸ್‌ವಿಪಿ ವೃತ್ತ, ಮುಸ್ಲಿಂ ಚೌಕ್, ಎಂಎಸ್‌ಕೆ ಮಿಲ್ ಪ್ರದೇಶಗಳಲ್ಲಿರುವ ಅಂಗಡಿಗಳು, ಹೋಟೆಲ್‌ಗಳನ್ನು ಮುಚ್ಚಿಸಿದರು. ಪೊಲೀಸರ ಈ ಕ್ರಮಕ್ಕೆ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ.

ಈ ಬಗ್ಗೆ ಜಿಲ್ಲಾಡಳಿತ ಹಾಗೂ ಪೊಲೀಸ್ ಇಲಾಖೆ ಯಾವುದೇ ಅಧಿಕೃತ ಕಾರಣ ನೀಡಿಲ್ಲ.

ಸರ್ಕಾರ ಏಪ್ರಿಲ್ 21ರಿಂದ ಮಾರ್ಚ್‌ 4ರವರೆಗೆ ರಾತ್ರಿ ಕರ್ಫ್ಯೂ ವಿಧಿಸಿದೆ. ಶುಕ್ರವಾರ ರಾತ್ರಿಯಿಂದ ಸೋಮವಾರ ಬೆಳಗಿನವರೆಗೆ ವಾರಾಂತ್ಯದ ಕರ್ಫ್ಯೂ ವಿಧಿಸಿದೆ. ಗುರುವಾರ ಬೆಳಿಗ್ಗೆ 6ರಿಂದ ರಾತ್ರಿ 9ರವರೆಗೆ ಎಂದಿನಂತೆ ವಹಿವಾಟು ನಡೆಸಲು ಅನುಮತಿ ನೀಡಬೇಕಿತ್ತು. ಆದರೆ, ಮಧ್ಯಾಹ್ನ 3 ಗಂಟೆಯ ಬಳಿಕ ಸೂಪರ್‌ ಮಾರ್ಕೆಟ್‌ ಹಾಗೂ ಇತರೆ ವಾಣಿಜ್ಯ ವಹಿವಾಟು ನಡೆಯುವ ಸ್ಥಳಕ್ಕೆ ತೆರಳಿದ ಪೊಲೀಸರು ಬಟ್ಟೆ ಅಂಗಡಿ, ಕಿರಾಣಿ ಅಂಗಡಿ, ಬೀದಿ ಬದಿಯ ಬಂಡಿಗಳು, ಹೋಟೆಲ್, ಬೇಕರಿಗಳನ್ನು ಮುಚ್ಚಿಸಿದರು. ಆದರೆ, ಮದ್ಯದ ಅಂಗಡಿಗಳನ್ನು ಮುಚ್ಚುವ ಗೋಜಿಗೆ ಹೋಗಲಿಲ್ಲ.

ಹೋಟೆಲ್‌ ಹಾಗೂ ಕಿರಾಣಿ ಅಂಗಡಿಗಳು ಅತ್ಯವಶ್ಯ ವಸ್ತುಗಳ ಪಟ್ಟಿಯಲ್ಲಿ ಬರುತ್ತವೆ. ಹೀಗಾಗಿ, ಅವುಗಳನ್ನು ಬಂದ್ ಮಾಡುವುದಿಲ್ಲ ಎಂದು ಸರ್ಕಾರದ ಮುಖ್ಯ ಕಾರ್ಯದರ್ಶಿ ಪಿ. ರವಿ ಕುಮಾರ್ ಅವರು ಹೊರಡಿಸಿದ ಮಾರ್ಗಸೂಚಿಯಲ್ಲಿ ತಿಳಿಸಿದ್ದರು. ಆ ಮಾರ್ಗಸೂಚಿಯನ್ನೂ ಮೀರಿ ಪೊಲೀಸರು ದುಂಡಾವರ್ತನೆ ತೋರಿದರು ಎಂದು ವ್ಯಾಪಾರಸ್ಥರು ಅಸಮಾಧಾನ ವ್ಯಕ್ತಪಡಿಸಿದರು.

ಬಟ್ಟೆ ಖರೀದಿ ಅತಂತ್ರ: ಮದುವೆ ನಿಶ್ಚಯಿಸಿದ ಸುತ್ತಮುತ್ತಲಿನ ತಾಲ್ಲೂಕು ಹಾಗೂ ಗ್ರಾಮಗಳಿಂದ ನಗರದ ಸೂಪರ್ ಮಾರ್ಕಟ್‌ನಲ್ಲಿರುವ ಬಟ್ಟೆ ಅಂಗಡಿಗಳಿಗೆ ಬಂದು ಖರೀದಿಯಲ್ಲಿ ತೊಡಗಿದ್ದರು. ಈ ಸಂದರ್ಭದಲ್ಲಿ ಏಕಾಏಕಿ ಅಂಗಡಿಗಳಿಗೆ ನುಗ್ಗಿದ ಪೊಲೀಸರು ಹಾಗೂ ಪಾಲಿಕೆ ಅಧಿಕಾರಿಗಳು ಬಲವಂತವಾಗಿ ಅಂಗಡಿಗಳನ್ನು ಮುಚ್ಚಿಸಿದರು ಎಂದು ವ್ಯಾಪಾರಿಯೊಬ್ಬರು ದೂರಿದರು.

ಹೋಟೆಲ್‌ಗಳಲ್ಲಿ ಪಾರ್ಸೆಲ್‌ ಒಯ್ಯಲು ಸರ್ಕಾರವೇ ಮಾರ್ಗಸೂಚಿಯಲ್ಲಿ ಅವಕಾಶ ನೀಡಿದೆ. ಆದರೂ, ಅದನ್ನು ಮೀರಿ ಹೋಟೆಲ್‌ಗಳನ್ನೂ ಬಂದ್‌ ಮಾಡಿಸುವ ಅವಶ್ಯಕತೆ ಏನಿತ್ತು ಎಂದು ಎಸ್‌ವಿಪಿ ವೃತ್ತದ ಹೋಟೆಲ್‌ಗೆ ಬಂದಿದ್ದ ನಂದಿಕೂರ ಗ್ರಾಮದ ಯುವಕ ದಿನೇಶ್‌ ಪ್ರಶ್ನಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT